ಆರ್ಥಿಕತೆಯಲ್ಲಿ ಬದಲಾವಣೆಯಾದರೆ ಮಾತ್ರ ರಾಜಕೀಯ ಬದಲಾವಣೆ ಸಾಧ್ಯ

Update: 2019-10-29 07:39 GMT

ನಿಜ, ಸಂವಿಧಾನ ಅಪಾಯ ದಲ್ಲಿದೆ. ನಮ್ಮ ದೇಶದ ಪ್ರತಿಯೊ ಬ್ಬರೂ ರಾಜಕೀಯ ಪರಿಹಾರ ಕ್ಕಾಗಿ ಯೋಚನೆ ಮಾಡುತ್ತಿದ್ದಾರೆ ವಿನಃ ಸಾಮಾಜಿಕ, ಸಾಂಸ್ಕೃತಿಕತೆಯ ಕಡೆಗೆ ಯೋಚನೆ ಮಾಡುತ್ತಾ ಇಲ್ಲ. ನೀವೇ ಹೇಳಿ... ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆಯಾಗದೆ ನೀವು ಎರಡು ಪಕ್ಷಗಳನ್ನು ಮುಂದಿಟ್ಟುಕೊಂಡು ಈ ವರ್ಷ ಒಬ್ಬನನ್ನು ಗೆಲ್ಲಿಸುತ್ತೀರಿ. ಮುಂದಿನ ವರ್ಷ ಇನ್ನೊಬ್ಬನನ್ನು ಗೆಲ್ಲಿಸುತ್ತೀರಿ. ಇದರಿಂದ ಏನಾದರು ಬದಲಾವಣೆ ಸಾಧ್ಯವಾ? ಪ್ರಸಕ್ತ ಒತ್ತಡದ ರಾಜಕಾರಣವನ್ನು ಹಿಮ್ಮೆಟ್ಟಿಸುವುದಕ್ಕೆ ಕೂಡ ಈ ಮಾದರಿಯ ಚಳವಳಿ ಮುಖ್ಯ. ಅಲ್ಲದೆ ನಮಗೆ ಇಂತಹ ರಾಜಕಾರಣ ಬೇಡ ಅಂತ ಜನರೂ ಹೇಳಬೇಕು.

ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಗ್ರಾಮ ಸೇವಾ ಸಂಘದ ಮೂಲಕ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ‘ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ’ ನಡೆಸಿ ಗಮನ ಸೆಳೆದಿದ್ದರು. ಪವಿತ್ರ ಆರ್ಥಿಕ ಕ್ಷೇತ್ರಕ್ಕೆ ಶೂನ್ಯ ತೆರಿಗೆ ವಿಧಿಸಬೇಕು, ರಿಫೈನಾನ್ಸ್ ಸೌಲಭ್ಯ ಒದಗಿಸಬೇಕು, ಕ್ಷೇತ್ರದ ಸಮಗ್ರ ಸುಧಾರಣೆಗೆ ಸರಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಉಪವಾಸ ಸತ್ಯಾಗ್ರಹಿಗಳು ಆಗ್ರಹಿಸಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ, ಪರಿಸರ ಹೋರಾಟಗಾರ್ತಿ ಡಾ. ವಂದನಾ ಶಿವ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಇತಿಹಾಸಕಾರ ರಾಮಚಂದ್ರ ಗುಹಾ, ಕೈಮಗ್ಗ ಹೋರಾಟಗಾರ್ತಿ ಉಜ್ಜಮ್ಮ ಮತ್ತಿತರರು ಭೇಟಿ ನೀಡಿ ಬೆಂಬಲ ಸೂಚಿಸಿದ್ದರು.

ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಸದಾನಂದ ಗೌಡ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರಲ್ಲದೆ ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದ್ದರು.

ಸ್ನಾತಕೋತ್ತರದಲ್ಲಿ ಚಿನ್ನದ ಪದಕ ಪಡೆದರೂ ಕಲಾಸಕ್ತಿಯಿಂದ ‘ಎನ್‌ಎಸ್‌ಡಿ’ಯಲ್ಲಿ ರಂಗ ತರಬೇತಿ ಪಡೆದು ‘ಸಮುದಾಯ’ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದ ಪ್ರಸನ್ನ ಹೆಗ್ಗೋಡು ಪವಿತ್ರ ಆರ್ಥಿಕತೆಗಾಗಿ ನಡೆಸಿದ ಉಪವಾಸ ಸತ್ಯಾಗ್ರಹವನ್ನು ಸಚಿವರ ಭರವಸೆಯ ಮೇರೆಗೆ ಕೈ ಬಿಟ್ಟರೂ ಹೋರಾಟ ನಿಲ್ಲಿಸಲಿಲ್ಲ. ‘ಪವಿತ್ರ ಆರ್ಥಿಕತೆ’ಯ ಕುರಿತು ಜನಜಾಗೃತಿ ಮೂಡಿಸಲು ರಾಜ್ಯಾದ್ಯಂತ ಓಡಾಟ ಆರಂಭಿಸಿದ್ದಾರೆ.

ಶನಿವಾರ ಮಂಗಳೂರಿಗೆ ಆಗಮಿಸಿದ್ದ ಪ್ರಸನ್ನ ಹೆಗ್ಗೋಡು ಅವರೊಂದಿಗೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನದ ಆಯ್ದ ಭಾಗವನ್ನು ಇಲ್ಲಿ ದಾಖಲಿಸಲಾಗಿದೆ.

► ಪವಿತ್ರ ಆರ್ಥಿಕತೆ ಎಂದರೇನು?

 ಪವಿತ್ರ ಆರ್ಥಿಕತೆ ಅಂದರೆ, ಕಡಿಮೆ ಹೂಡಿಕೆ ಮಾಡಿ ಹೆಚ್ಚು ಜನರಿಗೆ ದುಡಿಯುವ ಮಾರ್ಗ ತೋರಿಸುವ ಉತ್ಪಾದನಾ ವ್ಯವಸ್ಥೆಯಾಗಿದೆ. ಪ್ರಕೃತಿಗೆ ಅತ್ಯಂತ ಕಡಿಮೆ ಹಾನಿಕಾರಕವಾದ ವ್ಯವಸ್ಥೆಯೂ ಇದಾಗಿದೆ. ಗ್ರಾಮ ಸೇವಾ ಸಂಘದ ಮೂಲಕ ನಾವು ಸೂಚಿಸುತ್ತಿರುವ ಈ ಆರ್ಥಿಕತೆಯು ಯಾವ ಉತ್ಪಾದನಾ ವಿಧಾನಕ್ಕೆ ಶೇ.60ರಷ್ಟು ಮಾನವ ಸಂಪನ್ಮೂಲ ಮತ್ತು ಶೇ.40ರಷ್ಟು ಸ್ವಯಂಚಾಲಿತ ಯಂತ್ರಗಳು ಬಳಕೆಯಾಗಬೇಕು. ಅದಕ್ಕೆ ನಾವು ‘ಪವಿತ್ರ ಆರ್ಥಿಕತೆ’ ಎಂದು ಹೆಸರಿಟ್ಟಿದ್ದೇವೆ. ಈ ಪದವನ್ನು ಬಳಸಿಕೊಳ್ಳಲು ಕಾರಣವೇನೆಂದರೆ, ಕಳೆದ ಐದಾರು ವರ್ಷಗಳಿಂದ ನಾವು ಹೋರಾಟ ಮಾಡುತ್ತಾ ಬಂದಿರುವುದು ಗುಡಿ ಕೈಗಾರಿಕೆಗಳ ಉತ್ಪನ್ನಗಳ ಬಗ್ಗೆ. ಇದಕ್ಕೆ ಆರ್ಥಿಕ ಶಕ್ತಿ ಮತ್ತು ಪ್ರೋತ್ಸಾಹ ಕೊಡಿ. ಅದರಿಂದ ಮಾತ್ರ ದೇಶದ ಆರ್ಥಿಕ ವ್ಯವಸ್ಥೆ ಬಲಗೊಳ್ಳುತ್ತದೆ ಎಂದು ಪ್ರತಿಪಾದಿಸುತ್ತಾ ಬಂದಿದ್ದೇವೆ. ಆದರೆ ಮೂರು ವರ್ಷದ ಹಿಂದೆ ಈ ಕುರಿತು ಹೋರಾಟ ಮಾಡಿದ ಬಳಿಕ ಈಗ ಈ ಆರ್ಥಿಕ ಬಿಕ್ಕಟ್ಟು ಗುಡಿ ಕೈಗಾರಿಕಾ ಕ್ಷೇತ್ರಗಳನ್ನು ಮೀರಿ ಬೇರೆ ಬೇರೆ ಕೈಗಾರಿಕಾ ಕ್ಷೇತ್ರಗಳಿಗೆ, ಸೇವಾ ಕ್ಷೇತ್ರಗಳಿಗೆ ಹರಡಿದೆ. ಮೂರು ವರ್ಷದ ಹಿಂದೆ ರೈತರ ಆತ್ಮಹತ್ಯೆ, ನೇಕಾರರ ಆತ್ಮಹತ್ಯೆಗಳು ಮಾತ್ರ ಸುದ್ದಿಯಾಗಿದ್ದರೆ, ಇವತ್ತು ಬೆಂಗಳೂರಿನ ಪೀಣ್ಯ ಕೈಗಾರಿಕಾ ವಲಯಗಳು ಪೂರ್ಣವಾಗಿ ಮುಚ್ಚಿಹೋಗಿವೆ. ಗಾರ್ಮೆಂಟ್ ಕಾರ್ಮಿಕರು, ಪೌರ ಕಾರ್ಮಿಕರು ಮತ್ತು ಇತರ ಕ್ಷೇತ್ರಗಳ ಕಾರ್ಮಿಕರೂ ತೊಂದರೆಯಲ್ಲಿದ್ದಾರೆ. ಸಣ್ಣಪುಟ್ಟ ಹೊಟೇಲ್ ಮತ್ತು ಕಿರಾಣಿ ಅಂಗಡಿಗಳು ಕೂಡಾ ಬೀದಿಗೆ ಬೀಳುತ್ತಿವೆ. ಹಾಗಾಗಿ ಇವರೆಲ್ಲರನ್ನೂ ಒಳಗೊಳ್ಳಲಿಕ್ಕಾಗಿ ‘ಪವಿತ್ರ ಆರ್ಥಿಕತೆ’ ಎಂಬ ಹೊಸ ಹೆಸರಿನ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ.

► ಪವಿತ್ರ ಎನ್ನುವ ಪದ ಬಳಕೆಯ ಕುರಿತಂತೆ ಆಕ್ಷೇಪಗಳು ಕೇಳಿ ಬರುತ್ತಿದೆಯಲ್ಲ?

 ನಮ್ಮಲ್ಲಿ ಎಲ್ಲ ಸಮುದಾಯದಲ್ಲೂ ಒಂದು ಪರಂಪರೆಯಿದೆ. ಅಂದರೆ ‘ಕಾಯಕವೇ ಕೈಲಾಸ’ ಅಂತ. ಈ ಪರಂಪರೆ ಇವತ್ತಿನದ್ದಲ್ಲ. ಮಾನವ ಹುಟ್ಟಿದಾಗಿನಿಂದಲೂ ಈ ಪರಂಪರೆ ಇದೆ. ಅದಕ್ಕೆ ವ್ಯತಿರಿಕ್ತವಾಗಿ ವೈದಿಕ ಪರಂಪರೆಯಿದೆ. ವೈದಿಕ ಪರಂಪರೆಗೂ ವ್ಯತಿರಿಕ್ತವಾಗಿ ಎಲ್ಲ ಧರ್ಮಗಳ ಪುರೋಹಿತಶಾಹಿಗಳು ತಮ್ಮದೇ ಆದ ಕ್ರಮ ಅನುಸರಿಸುತ್ತಾರೆ. ದುರಂತವೆಂದರೆ ಪವಿತ್ರ ಎಂಬ ಪದವನ್ನು ನಾವು ಪುರೋಹಿತಶಾಹಿ ಮತ್ತು ವೈದಿಕ ಪರಂಪರೆಗೆ ಬಿಟ್ಟುಕೊಟ್ಟಿದ್ದೇವೆ. ಆದರೆ ಪವಿತ್ರ ಎನ್ನುವ ಪದ ನಿಜವಾಗಿ ಶ್ರಮ ಜೀವಿಗಳಿಗೆ ಸಲ್ಲುವುದಾಗಿದೆ. ಈ ಬಗ್ಗೆ ಕುವೆಂಪು ಬಹಳ ಚೆನ್ನಾಗಿ ಹೇಳಿದ್ದಾರೆ. ಒಂದು ಸುಂದರವಾದ ಒಡವೆ ಕಸದಲ್ಲಿ ಬಿದ್ದಿದೆ ಎಂದರೆ ಆ ಒಡವೆಯನ್ನು ತಿರಸ್ಕರಿಸಲಾಗದು. ಅದನ್ನು ಕಸದಿಂದ ಎತ್ತಿಕೊಂಡು ತೊಳೆದು ನಾವು ಧರಿಸಬೇಕೇ ವಿನಃ ಅದು ಕಸದಲ್ಲಿ ಬಿದ್ದಿದೆ ಎಂದು ಬಿಡಕ್ಕಾಗಲ್ಲ. ಇವತ್ತು ಪವಿತ್ರ ಎನ್ನುವುದಕ್ಕೆ ವೈದಿಕ ಪರಂಪರೆಯ ಪದ ಎಂಬ ಭಾವನೆ ಇದೆ. ಅದನ್ನು ಬದಲಾವಣೆ ಮಾಡಬೇಕು. ಆ ಅರ್ಥದಲ್ಲೇ ನಮ್ಮ ಸತ್ಯಾಗ್ರಹ ನಡೆಯುತ್ತಿದೆ. ಅದೊಂದು ಸಾಮಾಜಿಕ ಚಳವಳಿ ಕೂಡ ಹೌದು. ಜಾತಿ ವಿನಾಶದ, ಧರ್ಮಗಳ ನಡುವೆ ನಂಬಿಕೆಯನ್ನು ಮತ್ತೆ ಸ್ಥಾಪಿಸುವ ಚಳವಳಿಯೂ ಹೌದು.

► ನಿಮ್ಮ ಪ್ರಕಾರ ಹೇಗೆ ಅದನ್ನು ಚಳವಳಿಯಾಗಿ ಮಾರ್ಪಡಿಸಬಹುದು?

ಈ ಚಳವಳಿಗೆ ನನ್ನ ಪ್ರಕಾರ ಮೂರು ಆಯಾಮಗಳಿವೆ. ಒಂದನೆಯದು ಆರ್ಥಿಕ ಆಯಾಮ. ಅಂದರೆ ಬಡವರಿಗೆ ಉದ್ಯೋಗ ಕೊಡುವ ಆರ್ಥಿಕತೆ ಬೇಕು ಎಂಬುದರ ಕುರಿತಾದ ಚಳವಳಿ. ಎರಡನೆಯದು ಪರಿಸರ ಕಾಳಜಿ. ಪವಿತ್ರ ಆರ್ಥಿಕತೆಯನ್ನು ಜಾರಿಗೆ ತಂದರೆ ಪರಿಸರ ಕೂಡ ಉಳಿಯುತ್ತದೆ. ಎಲ್ಲಿಯವರೆಗೆ ನಾವು ಸ್ವಯಂಚಾಲಿತ ಯಂತ್ರಗಳನ್ನು ಮತ್ತು ಬೃಹತ್ ಕೈಗಾರಿಕೆಗಳನ್ನು ಕಡಿಮೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಈ ಪರಿಸರ ಉಳಿಯಲು ಸಾಧ್ಯವಿಲ್ಲ ಎಂಬುವುದನ್ನು ಇದು ಹೇಳುತ್ತದೆ. ಮೂರನೆಯದು, ವಿವೇಕಾನಂದರು, ಅಂಬೇಡ್ಕರ್ ಮತ್ತು ಕುವೆಂಪು ಎತ್ತಿ ಹಿಡಿದಿದ್ದಂತಹ ಸಾಮಾಜಿಕ ಚಳವಳಿ ಇನ್ನೂ ಪೂರ್ತಿಯಾಗಿಲ್ಲ. ಅದನ್ನು ಪೂರ್ತಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂತ ಪವಿತ್ರ ಆರ್ಥಿಕತೆಯ ಸತ್ಯಾಗ್ರಹ ಈ ಮೂರೂ ಅಂಶಗಳನ್ನು ಒಳಗೊಂಡ ಚಳವಳಿಯಾಗಿದೆ. ದೇಶದ ಪ್ರಜಾಸತ್ತೆಯೇ ಅಪಾಯದಲ್ಲಿದೆ. ಪ್ರಜಾಸತ್ತೆಯನ್ನು ಕಾರ್ಪೊರೇಟ್ ಶಕ್ತಿಗಳು ನೇರವಾಗಿ ನಿಯಂತ್ರಿಸುತ್ತಿದೆ. ಇದು ಬದಲಾಗದೆ ಆರ್ಥಿಕತೆ ಬದಲಾಗಲು ಸಾಧ್ಯವೇ?

ಆರ್ಥಿಕತೆ ಬದಲಾದರೆ ಮಾತ್ರ ಎಲ್ಲವೂ ಸಾಧ್ಯ. ನೋಡಿ ಆರ್ಥಿಕತೆ ಬದಲಾಗುವುದು ಅಂದರೆ ಏನು? ಬಡವರಿಗೆ ಹೆಚ್ಚಿನ ವರಮಾನ ಬರಬೇಕು, ಬಡವರಿಗೆ ಉದ್ಯೋಗ ಸಿಗಬೇಕು ಎಂದಲ್ಲವೇ? ಇದು ನೆರವೇರಿದರೆ ಅವರ ಮಾತಿಗೆ ತೂಕ ಬರುತ್ತೆ. ಅವರ ಮಾತಿಗೆ ತೂಕ ಬಂದರೆ ಅವರು ನೋಟಿಗಾಗಿ ಮತದಾನ ಮಾಡುವ ಪರಿಸ್ಥಿತಿ ಬದಲಾಗುತ್ತೆ. ಆಮೇಲೆ ಈ ಸಾಮಾಜಿಕ ಚಳವಳಿಗಳು ಗಟ್ಟಿಯಾದರೆ ಮತ್ತೆ ಅವರಿಗೊಂದು ಧೈರ್ಯಬರುತ್ತೆ. ಪರಿಸರ ಚಳವಳಿಗೂ ಇದಕ್ಕೂ ಸಂಬಂಧವಿದೆ ಎಂದು ಗೊತ್ತಾದಾಗ ಪರಿಸರ ಚಳವಳಿ ಎಂಬುವುದು ಬರೀ ಶ್ರೀಮಂತರ ಚಳವಳಿ, ಬಡವರಿಗೂ ಅದಕ್ಕೂ ಸಂಬಂಧವಿಲ್ಲ ಎಂಬ ತಪ್ಪುಕಲ್ಪನೆ ದೂರವಾಗುತ್ತದೆ. ನನ್ನ ಪ್ರಕಾರ ಈವತ್ತಿನ ಈ ಪ್ರಜಾಸತ್ತೆಯ ಸಮಸ್ಯೆಗೆ ಇದೊಂದು ಪರಿಹಾರವಾಗುತ್ತದೆ ಎಂದು ನನಗನಿಸುತ್ತದೆ.

► ಗಾಂಧೀಜಿಯೇ ಈ ನಿಟ್ಟಿನ ಹೋರಾಟದಲ್ಲಿ ವಿಫಲವಾಗಿದ್ದಾರೆ. ಹೀಗಿರುವಾಗ ನಿಮ್ಮ ಹೋರಾಟ ಆಳುವವರನ್ನು ತಲುಪುವ ಬಗ್ಗೆ ಭರವಸೆಯಿದೆಯೇ?

ಗಾಂಧೀಜಿ ಮಾತ್ರವಲ್ಲ, ಪ್ರವಾದಿಗಳೂ ಸೋತಿದ್ದಾರೆ ಎಂದು ಹೇಳಬಹುದು. ಪ್ರವಾದಿಗಳು ಹೇಳಿದಂತಹ ಮೌಲ್ಯಗಳನ್ನು ಎಷ್ಟು ಜನರು ಪಾಲಿಸುತ್ತಾ ಇದ್ದಾರೆ? ಹಾಗಂತ ಅದನ್ನು ಸೋಲು ಎಂದು ಹೇಳೋಕಾಗಲ್ಲ. ಗಾಂಧೀಜಿಯವರ ಕಾರ್ಯಕ್ರಮ ಅವತ್ತು ಪೂರ್ತಿಯಾಗಿ ಜಾರಿಗೊಳ್ಳುವುದು ಸಾಧ್ಯವಿರಲಿಲ್ಲ. ಯಾಕೆಂದರೆ ಅವತ್ತಿನ ಪರಿಸ್ಥಿತಿ ಹಾಗಿತ್ತು. ಅವರಿಗೆ ಸಮಯವೂ ಇರಲಿಲ್ಲ, ಸ್ವಾತಂತ್ರ ಹೋರಾಟದ ಒತ್ತಡ ಅವರ ಮೇಲೆ ಇದ್ದುದರಿಂದ ಅವರು ಯಾವುದನ್ನು ರಚನಾತ್ಮಕ, ಸಾಂಸ್ಕೃತಿಕ, ಸಾಮಾಜಿಕ ಚಳವಳಿ ಎಂದು ಕರೆದಿದ್ದರೋ ಅದು ಪೂರ್ತಿಯಾಗಿ ಜಾರಿಗೊಳ್ಳುವ ಸಾಧ್ಯತೆ ಇರಲಿಲ್ಲ. ಇವತ್ತು ಅದು ಜಾರಿಗೊಳ್ಳಲೇ ಬೇಕಾದ ಅಗತ್ಯ ನಮ್ಮ ಮೇಲಿದೆ. ನಮ್ಮ ಪವಿತ್ರ ಆರ್ಥಿಕತೆಯನ್ನು ಜಾರಿಗೊಳಿಸುತ್ತಾ ಹೋದರೆ ಮಾನವನ ಬದುಕು ಉಳಿಯುತ್ತದೆ. ಇಂದು ನಮಗೆ ಆಯ್ಕೆ ಇಲ್ಲ. ಇದೆಯೆಂಬ ಭ್ರಮೆಯಲ್ಲಿ ಇದ್ದೇವೆ ಅಷ್ಟೆ. ಹಾಗಾಗಿ ನಾವು ಗಾಂಧಿ, ಪ್ರವಾದಿಗಳ ಮಾರ್ಗವನ್ನು ಸರಿಯಾದ ರೀತಿಯಲ್ಲಿ ಅಂದರೆ ಶ್ರಮಜೀವಿಗಳ ಪರವಾದ ಚಳವಳಿಯಾಗಿ ನೋಡುವ ಅಗತ್ಯವಿದೆ.

► ದೇಶದ ಸಂವಿಧಾನ ಅಪಾಯದಲ್ಲಿದೆ. ಸರಕಾರ ಸಂಘಪರಿವಾರದ ನಿಯಂತ್ರಣದಲ್ಲಿದೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಘೋಷಣೆಯಾಗಿದೆ ಎಂದು ಆರೋಪಗಳಿವೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ನಿಜ, ಸಂವಿಧಾನ ಅಪಾಯದಲ್ಲಿದೆ. ನಮ್ಮ ದೇಶದ ಪ್ರತಿಯೊಬ್ಬರೂ ರಾಜಕೀಯ ಪರಿಹಾರಕ್ಕಾಗಿ ಯೋಚನೆ ಮಾಡುತ್ತಿದ್ದಾರೆ ವಿನಃ ಸಾಮಾಜಿಕ, ಸಾಂಸ್ಕೃತಿ ಕತೆಯ ಕಡೆಗೆ ಯೋಚನೆ ಮಾಡುತ್ತಾ ಇಲ್ಲ. ನೀವೇ ಹೇಳಿ... ಸಾಮಾಜಿಕ, ಸಾಂಸ್ಕೃತಿಕತೆ ಬದಲಾವಣೆಯಾಗದೆ ನೀವು ಎರಡು ಪಕ್ಷಗಳನ್ನು ಮುಂದಿಟ್ಟುಕೊಂಡು ಈ ವರ್ಷ ಒಬ್ಬನನ್ನು ಗೆಲ್ಲಿಸುತ್ತೀರಿ. ಮುಂದಿನ ವರ್ಷ ಇನ್ನೊಬ್ಬನನ್ನು ಗೆಲ್ಲಿಸುತ್ತೀರಿ. ಇದರಿಂದ ಏನಾದರು ಬದಲಾವಣೆ ಸಾಧ್ಯವಾ? ಪ್ರಸಕ್ತ ಒತ್ತಡದ ರಾಜಕಾರಣವನ್ನು ಹಿಮ್ಮೆಟ್ಟಿಸುವುದಕ್ಕೆ ಕೂಡ ಈ ಮಾದರಿಯ ಚಳವಳಿ ಮುಖ್ಯ. ಅಲ್ಲದೆ ನಮಗೆ ಇಂತಹ ರಾಜಕಾರಣ ಬೇಡ ಅಂತ ಜನರೂ ಹೇಳಬೇಕು. ಇತ್ತ ರಾಮನ ಹೆಸರು ಹೇಳುತ್ತಾ, ಅತ್ತ ಅಂಬಾನಿ, ಅದಾನಿಗಳಿಗೆ ದುಡ್ಡು ಕೊಡುತ್ತಾ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುತ್ತಾರೆ. ಇದರ ಬಗ್ಗೆಯೇ ಜನರು ಧ್ವನಿ ಎತ್ತುವಂತಹ ವಾತಾವರಣ ಮೂಡಿಬರಬೇಕು.

► ಆರ್‌ಸಿಇಪಿ ಒಪ್ಪಂದದಿಂದ ಹಿಂದೆ ಸರಿಯಬೇಕು ಎಂದು ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಏನು ಹೇಳುವಿರಿ?

ಗ್ರಾಮ ಸೇವಾ ಸಂಘದ ಮೂಲಕ ಆರ್‌ಸಿಇಪಿ ಒಪ್ಪಂದವನ್ನು ವಿರೋಧಿಸಿ ಈಗಾಗಲೇ ಚಳವಳಿ ಆರಂಭಿಸಿದ್ದೇವೆ. ಆರ್‌ಸಿಇಪಿ ಒಪ್ಪಂದ ಬರುವುದಕ್ಕೆ ಮೊದಲೇ ಡಬ್ಲುಟಿಒ ಒಪ್ಪಂದ ಮಾಡಿಕೊಂಡಾಗ ನಾವು ಅಂದಿನ ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದೇವು. ಒಪ್ಪಂದ ಮಾಡಬೇಡಿ. ಇದರಿಂದ ಅನಾಹುತ ಆಗುತ್ತೆ, ರೈತರು, ಕುಶಲಕರ್ಮಿಗಳು, ಸಣ್ಣ ಉದ್ದಿಮೆದಾರರು, ಅಂಗಡಿಯವರು ತೊಂದರೆಗೆ ಒಳಗಾಗುತ್ತಾರೆ ಎಂದು ಹೇಳಿದ್ದೇವು. ಆದರೆ ಅವರು ಕೇಳಲಿಲ್ಲ. ಇವಾಗ ಈ ಬಿಜೆಪಿಯವರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಇಡೀ ಬಾಗಿಲನ್ನೆ ಒಡೆದು ಬಿಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಬಾಗಿಲನ್ನು ತೆರೆದರೆ, ಇವರು ಬಾಗಿಲನ್ನೇ ಕಿತ್ತು ಹಾಕಲು ಮುಂದಾಗಿದ್ದಾರೆ. ಇದು ಅಕ್ಷಮ್ಯ.

► ಆತಂಕದ ದಿನಗಳನ್ನು ಎದುರಿಸುತ್ತಿರುವ ದಲಿತರು ಮತ್ತು ಮುಸ್ಲಿಮರ ಭಾಗಿದಾರಿಕೆ ನಿಮ್ಮ ಚಳವಳಿಯಲ್ಲಿ ಕಂಡು ಬರುತ್ತಿದೆಯೇ?

ನೋಡಿ... ದಲಿತರಿಗೆ ಮತ್ತು ಮುಸ್ಲಿಮರಿಗಿರುವ ಸಮಸ್ಯೆ ಏನು ಎಂದರೆ, ಅವರನ್ನು ಸ್ವಲ್ಪಮಟ್ಟಿಗೆ ಈ ದೇಶ ಮುಖ್ಯವಾಹಿನಿಗೆ ಬರಲು ಬೇರೆಯವರು ಬಿಡುತ್ತಾ ಇಲ್ಲ. ಮುಖ್ಯವಾಹಿನಿಗೆ ಬರಲು ಅವರಲ್ಲೂ ಸ್ವಲ್ಪಮಟ್ಟಿಗೆ ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ನಾವು ಬಗೆಹರಿಸಬೇಕು. ಉದಾಹರಣೆಗೆ ಸುಮಾರು ನಾಲ್ಕುನೂರು-ಐನೂರು ವರ್ಷಗಳಿಂದ ಭಾರತೀಯ ಮುಸ್ಲಿಮರಲ್ಲಿ ಎರಡೇ ವರ್ಗ ಇತ್ತು. ನಾನದನ್ನು ದರ್ಬಾರಿ ವರ್ಗ ಮತ್ತು ದರಿದ್ರ ವರ್ಗ ಎಂದು ಕರೆಯುತ್ತೇನೆ. ಈ ಎರಡು ವರ್ಗಗಳ ನಡುವೆ ಕೊಂಡಿ ಇರಲಿಲ್ಲ. ಹಾಗಾಗಿಯೇ ಮುಸ್ಲಿಮರಲ್ಲಿ ಏನಾಗುತ್ತಿತ್ತು ಅಂದರೆ ಸರ್, ಸೈಯದ್‌ರಂತಹ ನಾಯಕರು ಒಂದು ಕಡೆಯಾಗುತ್ತಿದ್ದರು. ಇನ್ನು ನಾವು ಯಾರನ್ನು ಕಲಾಯಿ, ಸಾಬಿಗಳು, ಜಟಕಾ ಸಾಬಿಗಳೆಂದು ಕರೆಯುತ್ತೇವೋ ಅವರ ಸ್ಥಿತಿ ಶೋಚನೀಯವಾಗಿತ್ತು. ಇದು ಇತ್ತೀಚೆಗೆ ಬದಲಾಗುತ್ತಾ ಇದೆ. ಕಳೆದ 3-4 ದಶಕದಿಂದ ಮುಸಲ್ಮಾನರ ನಡುವೆ ಒಂದು ಸಾಮಾಜಿಕ ಚಳವಳಿಯೇ ಹುಟ್ಟಿದೆ. ಅದು ಆಂತರಿಕವಾದ ಚಳವಳಿ. ಅಂದರೆ ನಮಗೆ ವಿದ್ಯೆ ಬೇಕು, ನಾವು ವಿದ್ಯಾವಂತರಾಗಬೇಕು, ನಾವು ಪ್ರಶ್ನೆಗಳನ್ನು ಕೇಳಬೇಕು ಎಂಬ ಹುಮ್ಮಸ್ಸು ಬಂದಿದೆ. ಇದು ಬಹಳ ಮಹತ್ವದ ಬೆಳವಣಿಗೆ. ಇದನ್ನು ನಾವೆಲ್ಲರೂ ಸಲಹಬೇಕು. ಹಾಗೆ ಸಲಹಿದಾಗ ಮಾತ್ರ ಈ ದೇಶ ಉದ್ಧಾರವಾಗುತ್ತದೆ. ಪ್ರತಿಯೊಂದು ಸಮುದಾಯದೊಳಗಿನ ಸಾಮಾಜಿಕ ಚಳವಳಿಗಳನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು. ಈ ಮಾತು ದಲಿತರ ನಡುವೆ ಕೂಡ ಅನ್ವಯಿಸುತ್ತದೆ. ದಲಿತರಲ್ಲೂ ಮೊದಲ ಬಾರಿಗೆ ಒಂದು ವಿದ್ಯಾವಂತ ವರ್ಗ ಇದೆ. ಆ ವಿದ್ಯಾವಂತ ವರ್ಗ ಅನೇಕ ಪ್ರಶ್ನೆಗಳನ್ನು ಎತ್ತ್ತುತ್ತಿದೆ. ಅದು ಕೆಲವರಿಗೆ ಗೊಂದಲದ ಪ್ರಶ್ನೆಗಳಾಗಿ ಕಾಣುತ್ತಿದೆ. ಆದರೆ ನನ್ನ ಪ್ರಕಾರ ಅದು ಗೊಂದಲವಲ್ಲ. ಅದು ತಿಳುವಳಿಕೆ ಮೂಡಿಸುವಂತಹ ಒಂದು ಸಂಗತಿ. ದಲಿತರಲ್ಲಿ, ಮುಸಲ್ಮಾನರಲ್ಲಿ, ಬಡವರಲ್ಲಿ ಮತ್ತು ಗುಡ್ಡಗಾಡು ಜನರಲ್ಲಿ ಮೂಡುತ್ತಿರುವಂತಹ ತಿಳುವಳಿಕೆಯನ್ನು ನಾವು ಪೋಷಿಸಬೇಕು. ಇದರಲ್ಲಿ ಪಕ್ಷಗಳ ಪ್ರಶ್ನೆಯೇ ಇಲ್ಲ. ಯಾವ ಪಕ್ಷ ಇದನ್ನು ಮಾಡುವುದಿಲ್ಲವೋ ಆ ಪಕ್ಷ ಧೂಳಿಪಟವಾಗಿ ಹೋಗುತ್ತದೆ.

► ನಿಮ್ಮ ಚಳವಳಿಗೆ ಪ್ರತಿಕ್ರಿಯೆ ಹೇಗಿದೆ?

ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಸಾಮಾನ್ಯರು ತುಂಬಾ ಪ್ರೀತಿಯಿಂದ ಈ ಚಳವಳಿಗೆ ಪ್ರತಿಕ್ರಿಯೆ ನೀಡುತ್ತಾ ಇದ್ದಾರೆ. ಆದರೆ ಸಮಸ್ಯೆ ಏನಾಗಿದೆಯೆಂದರೆ ನಮ್ಮದು ಹೊಸ ಚಳವಳಿ. ಇದರ ಬಗ್ಗೆ ಜನರಿಗೆ ಗೊತ್ತಾಗುತ್ತಿರುವುದು ಮಾಧ್ಯಮಗಳಲ್ಲಿ ಮಾತ್ರ. ಆದರೆ, ಪತ್ರಿಕೆಗಳಲ್ಲಿ ಯಾವ ರೀತಿ ಸುದ್ದಿ ಬರುತ್ತೆ ಎಂದು ನಿಮಗೆ ಗೊತ್ತಿದೆ. ತುಣುಕು ಸುದ್ದಿಗಳು ಬರುವುದಕ್ಕೆ ಸಾಧ್ಯ. ಕೆಲವೊಂದು ಸಮಯದಲ್ಲಿ ಆ ತುಣುಕು ಸುದ್ದಿಗಳು ಕೂಡಾ ತಿರುಚುವ ಸುದ್ದಿಗಳಾಗಿ ಬರುವ ಸಾಧ್ಯತೆಗಳು ಇರುತ್ತೆ. ಹಾಗಾಗಿ ನಾವು ಏನು ಮಾಡಿದೆವು ಎಂದರೆ ನಮ್ಮ ಮೊದಲ ಘಟ್ಟದ ಹೋರಾಟ ಅಂದರೆ ಉಪವಾಸ ಸತ್ಯಾಗ್ರಹಗಳು ಮುಗಿದಾಗ ಹೇಗೋ ಕೇಂದ್ರ ಸರಕಾರ ನಮಗೆ ಒಂದು ತಿಂಗಳು ಸಮಯಾವಕಾಶ ಕೇಳಿದೆ. ಈ ಮಧ್ಯೆ ನಾವು ಸಣ್ಣ ಸಣ್ಣ ಊರುಗಳಿಗೆ ಹೋಗಿ ‘ಪವಿತ್ರ ಆರ್ಥಿಕತೆ’ಯ ಮನವರಿಕೆ ಹೋರಾಟದ ಆಶಯವೇನು, ಇದರ ಸಾಮಾಜಿಕ, ಪರಿಸರ ಮತ್ತು ಆರ್ಥಿಕ ಆಶಯದ ಕುರಿತು ಮಂಗಳೂರಿನಲ್ಲಿ ನ.15ರಂದು ಸಮಾವೇಶ ನಡೆಸಲಾಗುವುದು. ಉಡುಪಿ, ಹಾಸನ, ದಾವಣೆಗೆರೆ, ಶಿವಮೊಗ್ಗ, ಸಾಗರ ಬೇರೆ ಬೇರೆ ಕಡೆಗಳಲ್ಲಿ ಸಮಾವೇಶಗಳು ನಡೆಯಲಿದೆ. ಈಗಾಗಲೇ ತುಮಕೂರಿನಲ್ಲಿ ನಡೆದ ಸಮಾವೇಶ ಯಶಸ್ವಿಯಾಗಿವೆ. ಈ ಮೂಲಕ ನಾವು ಜನರಿಗೆ ಈ ಚಳವಳಿಯ ನಿಜವಾದ ಆಶಯ ಏನು ಎಂಬುವುದನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತಾ ಇದ್ದೇವೆ. ಆನಂತರ ಮತ್ತೆ ಚಳವಳಿ ತೀವ್ರಗೊಳುತ್ತದೆ. ‘ಕೇಂದ್ರ ಸರಕಾರ’ವು ಯಾವ ರೀತಿ ಈ ಚಳವಳಿಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದರ ಮೇಲೆ ಚಳವಳಿ ಯಾವ ದಿಕ್ಕನ್ನು ತೆಗೆಯುತ್ತದೆ ಎಂಬುವುದು ನಿರ್ಣಯವಾಗುತ್ತೆ.

Writer - ಆಝಾದ್ ಕಂಡಿಗ, ಕಡೇಶ್ವಾಲ್ಯ

contributor

Editor - ಆಝಾದ್ ಕಂಡಿಗ, ಕಡೇಶ್ವಾಲ್ಯ

contributor

Similar News