ಶಿವಸೇನೆಯೊಂದಿಗೆ ಬಿಜೆಪಿ 50:50 ಒಪ್ಪಂದ ಮಾಡಿಕೊಂಡಿಲ್ಲ: ಫಡ್ನವೀಸ್

Update: 2019-10-29 09:01 GMT

ಮುಂಬೈ, ಅ.29: ಮಹಾರಾಷ್ಟ್ರದಲ್ಲಿ ಇನ್ನು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವ ವಿಶ್ವಾಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಅಭ್ಯರ್ಥಿ ದೇವೇಂದ್ರ ಫಡ್ನವೀಸ್ ಅವರು ಶಿವಸೇನೆಯೊಂದಿಗೆ ಬಿಜೆಪಿ 50:50 ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ನಾನು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗುತ್ತೇನೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಅವರು ಹೇಳಿದರು. ಶಿವಸೇನೆ ಅಧಿಕಾರಕ್ಕಾಗಿ ನಡೆಸಿರುವ ಕಠಿಣ ಚೌಕಾಶಿ ರಾಜ್ಯದಲ್ಲಿ ಬಿಜೆಪಿಗೆ ಸರ್ಕಾರ ರಚನೆಯ ಪ್ರಯತ್ನಕ್ಕೆ ಅಡ್ಡಿಪಡಿಸಿದೆ.

ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿಕೊಂಡಂತೆ ತಲಾ ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆಯನ್ನು ಎರಡು ಪಕ್ಷಗಳ ನಡುವೆ ವಿಭಜಿಸಲು ಯಾವುದೇ ಸೂತ್ರವಿಲ್ಲ ಎಂದು ಅವರು ಹೇಳಿದರು .

"ಮುಖ್ಯಮಂತ್ರಿ ಸ್ಥಾನಕ್ಕಾಗಿ ಯಾವುದೇ ಸೂತ್ರವನ್ನು ಚರ್ಚಿಸಲಾಗಿಲ್ಲ ಎಂದು ಅಮಿತ್ ಶಾ (ಬಿಜೆಪಿ ಅಧ್ಯಕ್ಷ) ಹೇಳಿದ್ದರು" ಎಂದು ಫಡ್ನವೀಸ್ ಹೇಳಿದ್ದಾರೆ.

50 ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಏಕೈಕ ಮುಖ್ಯಮಂತ್ರಿ ಎನಿಸಿಕೊಂಡಿರುವ ಫಡ್ನವೀಸ್ ಅವರು ಬಿಜೆಪಿ ಅಥವಾ ಶಿವಸೇನೆ ಎರಡೂ ಇತರ ಆಯ್ಕೆಗಳನ್ನು ಅನ್ವೇಷಿಸುತ್ತಿಲ್ಲ ಎಂದು ಪ್ರತಿಪಾದಿಸಿದರು.

"ನಮಗೆ ಯೋಜನೆ ಬಿ ಅಗತ್ಯವಿಲ್ಲ" ಎಂದು ಅವರು ಹೇಳಿದರು. ಕಳೆದ ವಾರ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ, 288 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆದ್ದಿದೆ ಮತ್ತು ಶಿವಸೇನೆ 56 ಸ್ಥಾನಗಳನ್ನು ಗೆದ್ದುಕೊಂಡಿದೆ.

ಬಿಜೆಪಿ-ಶಿವಶೇನೆ ಮೈತ್ರಿಕೋಟ ಒಟ್ಟು 161 ಸ್ಥಾನಗಳನ್ನು ಹೊಂದಿದ್ದು. ಆದರೆ ಸೇನೆ ತನಗೆ  61 ಸದಸ್ಯರ ಬೆಂಬಲ ಇದೆ ಎಂದು ಹೇಳಿದೆ.

ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಈ ವರ್ಷದ ಆರಂಭದಲ್ಲಿ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಮಾತನಾಡಿದ 50:50 ಒಪ್ಪಂದ ಸೂತ್ರವನ್ನು ಬಿಜೆಪಿಗೆ ನೆನಪಿಸಿದ್ದರು. ವಿಧಾನಸಭಾ ಚುನಾವಣೆಗೆ ಮೊದಲು ಅಂತಹ ಯಾವುದೇ ಒಪ್ಪಂದ ಇರಲಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಾರೆ.

ಸೇನೆಯ  ನಾಯಕ ಸಂಜಯ್ ರಾವತ್ ಅವರ ದೈನಂದಿನ ದಾಳಿಯ ಬಗ್ಗೆ ಅನೇಕ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. "ನಾವು ಸಂಜಯ್ ರಾವತ್ ರಿಗೆ ಪ್ರಾಮುಖ್ಯತೆ ನೀಡುವುದಿಲ್ಲ" ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಎನ್‌ಸಿಪಿ ಮತ್ತು ಕಾಂಗ್ರೆಸ್ ಸೇನೆಯನ್ನು ಬೆಂಬಲಿಸಲು ಸಿದ್ಧವಾಗಿವೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಫಡ್ನವೀಸ್ ಅವರು "ಶರದ್ ಪವಾರ್ ಅವರು ಶಿವಸೇನೆಗೆ ಬೆಂಬಲ ನೀಡುವುದಾಗಿ ಹೇಳಿಲ್ಲ. ಎಲ್ಲರೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News