ಬಗ್ದಾದಿಯ ಶವವನ್ನು ಸಮುದ್ರದಲ್ಲಿ ವಿಲೇವಾರಿ ಮಾಡಿದ ಅಮೆರಿಕ ಸೇನೆ

Update: 2019-10-29 14:40 GMT

ವಾಶಿಂಗ್ಟನ್, ಅ. 29: ಸಿರಿಯದ ಅಡಗುದಾಣವೊಂದರಲ್ಲಿ ಅಮೆರಿಕ ಸೈನಿಕರ ದಾಳಿಯ ವೇಳೆ ಆತ್ಮಹತ್ಯೆ ಮಾಡಿಕೊಂಡ ಭಯೋತ್ಪಾದಕ ಸಂಘಟನೆ ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್-ಬಗ್ದಾದಿಯ ದೇಹವನ್ನು ಸಮುದ್ರದಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಪೆಂಟಗನ್ ಮೂಲವೊಂದು ಹೇಳಿರುವುದಾಗಿ ಎಎಫ್‌ಪಿ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ.

ಬಗ್ದಾದಿಯ ದೇಹವನ್ನು ಎಲ್ಲಿ ಮತ್ತು ಯಾವಾಗ ವಿಲೇವಾರಿ ಮಾಡಲಾಯಿತು ಎಂಬ ವಿವರಗಳು ಲಭ್ಯವಿಲ್ಲ. 2011ರಲ್ಲಿ ಅಲ್-ಕಾಯ್ದಾ ನಾಯಕ ಒಸಾಮ ಬಿನ್ ಲಾದನ್‌ನನ್ನು ಪಾಕಿಸ್ತಾನದಲ್ಲಿ ಅಮೆರಿಕದ ವಿಶೇಷ ಪಡೆಗಳು ಹತ್ಯೆ ಮಾಡಿದ ಬಳಿಕವೂ ಅವನ ಶವವನ್ನು ಇದೇ ರೀತಿಯಲ್ಲಿ ಸಮುದ್ರದಲ್ಲಿ ವಿಲೇವಾರಿ ಮಾಡಲಾಗಿತ್ತು.

 ‘‘ಭಯೋತ್ಪಾದಕನ ಮೃತದೇಹವನ್ನು ವಿಲೇವಾರಿ ಮಾಡಲಾಗಿದೆ. ಅದನ್ನು ಪೂರ್ಣ ಪ್ರಮಾಣದಲ್ಲಿ ಹಾಗೂ ಸೂಕ್ತವಾಗಿ ನಿರ್ವಹಿಸಲಾಗಿದೆ’’ ಎಂದು ಅಮೆರಿಕದ ಸೇನಾಪಡೆಗಳ ಮುಖ್ಯಸ್ಥ ಜನರಲ್ ಮಾರ್ಕ್ ಮಿಲಿ ಹೇಳಿದರು.

ಅಮೆರಿಕ ಸೇನೆಯ ಮಾದರಿ ವಿಧಾನಗಳಿಗೆ ಹಾಗೂ ಸಶಸ್ತ್ರ ಸಂಘರ್ಷಕ್ಕೆ ಸಂಬಂಧಿಸಿದ ಕಾನೂನಿಗೆ ಅನುಗುಣವಾಗಿ ದಫನ ನಡೆಸಲಾಗಿದೆ ಎಂದು ಮಿಲಿ ತಿಳಿಸಿದರು.

ಬಗ್ದಾದಿಯ ಆಂತರಿಕ ವಲಯದ ಸದಸ್ಯರು ನೀಡಿದ ಮಾಹಿತಿ ಹಾಗೂ ಸಿರಿಯದ ಬಹುಪಕ್ಷೀಯ ಯುದ್ಧದ ವಿವಿಧ ಬಣಗಳಿಂದ ಸಂಗ್ರಹಿಸಿದ ಗುಪ್ತಚರ ಸುದ್ದಿಗಳ ಆಧಾರದಲ್ಲಿ ಅವನ ಕೊನೆ ಸಾಧ್ಯವಾಯಿತು ಎಂದು ಮೂಲಗಳು ಹೇಳಿವೆ.

ಅತ್ಯಂತ ಕ್ರೂರ ಭಯೋತ್ಪಾದಕ ಗುಂಪುಗಳಲ್ಲಿ ಒಂದಾಗಿರುವ ಐಸಿಸ್‌ನ ಸ್ಥಾಪಕ ಮತ್ತು ಮುಖ್ಯಸ್ಥ ಬಗ್ದಾದಿಯು, ಅಮೆರಿಕದ ಪಡೆಗಳು ಬೆನ್ನಟ್ಟಿದಾಗ ಆತ್ಮಹತ್ಯಾ ಮೇಲಂಗಿಯನ್ನು ಸ್ಫೋಟಿಸಿಕೊಂಡು ಸತ್ತನು.

ಅವನ ಶವವನ್ನು ಬಯೋಮೆಟ್ರಿಕ್ಸ್ ಮತ್ತು ಡಿಎನ್‌ಎ ಪರೀಕ್ಷೆಗಳಿಗೆ ಒಳಪಡಿಸಿ, ಸತ್ತವನು ಬಗ್ದಾದಿ ಎನ್ನುವುದನ್ನು ಖಚಿತಪಡಿಸಿದ ಬಳಿಕ ಶವವನ್ನು ವಿಲೇವಾರಿ ಮಾಡಲಾಯಿತು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಬಗ್ದಾದಿಯ ಬಲಗೈ ಬಂಟನೂ ಹತ

ಇನ್ನೊಂದು ಪ್ರತ್ಯೇಕ ಸೇನಾ ಕಾರ್ಯಾಚರಣೆಯಲ್ಲಿ, ಐಸಿಸ್ ವಕ್ತಾರ ಹಾಗೂ ಗುಂಪಿನ ಪ್ರಭಾವಿ ನಾಯಕ ಅಬೂ ಅಲ್-ಹಸನ್ ಅಲ್-ಮುಜಾಹಿರ್ ಎಂಬಾತನನ್ನು ಹತ್ಯೆ ಮಾಡಲಾಗಿದೆ ಎನ್ನುವುದನ್ನು ಅಮೆರಿಕ ಸೋಮವಾರ ಖಚಿತಪಡಿಸಿದೆ.

ಉತ್ತರ ಸಿರಿಯದಲ್ಲಿ ಕುರ್ದ್ ಮತ್ತು ಅಮೆರಿಕ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಅಲ್-ಮುಜಾಹಿರ್ ಹತನಾಗಿದ್ದಾನೆ ಎಂದು ಸಿರಿಯದ ಕುರ್ದಿಶ್ ಹೋರಾಟಗಾರರ ಗುಂಪು ವೈಪಿಜಿ ರವಿವಾರ ಹೇಳಿತ್ತು. ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್ ಬಗ್ದಾದಿ ಸಾವಿಗೆ ಕಾರಣವಾದ ಸೇನಾ ಕಾರ್ಯಾಚರಣೆಯ ಮುಂದುವರಿದ ಭಾಗದಲ್ಲಿ ಮುಜಾಹಿರ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್)ನ ಜನರಲ್ ಕಮಾಂಡರ್ ಮಝ್ಲೂಮ್ ಅಬ್ದಿ ಹೇಳಿದ್ದಾರೆ.

ಬಗ್ದಾದಿಯ ಬಲಗೈ ಬಂಟನಾಗಿದ್ದ ಮುಜಾಹಿರ್‌ನನ್ನು ಸಿರಿಯದ ಅಲೆಪ್ಪೊ ಪ್ರಾಂತದ ಜರಬ್ಲುಸ್ ಪಟ್ಟಣದಲ್ಲಿ ಕೊಲ್ಲಲಾಯಿತು ಎಂದು ಮಝ್ಲೂಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News