ತುಂಬ ತಡವಾಗುವ ಮುನ್ನವೇ ಅಸ್ತಮಾವನ್ನು ನಿಯಂತ್ರಿಸಿ

Update: 2019-10-29 17:28 GMT

ಅಸ್ತಮಾ ರೋಗಿಗಳು ಸೂಕ್ಷ್ಮ ಶ್ವಾಸನಾಳಗಳನ್ನು ಹೊಂದಿರುತ್ತಾರೆ ಮತ್ತು ಈ ಶ್ವಾಸನಾಳಗಳು ಅಸ್ತಮಾವನ್ನುಂಟು ಮಾಡುವ ಕಾರಣಗಳಿಗೆ ಸ್ಪಂದಿಸಿದಾಗ ಉಸಿರಾಟಕ್ಕೆ ತೊಂದರೆಯುಂಟಾಗುತ್ತದೆ. ಅಸ್ತಮಾ ತೀವ್ರವಾಗಿ ದಾಳಿಯನ್ನುಂಟು ಮಾಡಿದಾಗ ಶ್ವಾಸನಾಳಗಳ ಸುತ್ತಲಿನ ಸ್ನಾಯುಗಳು ಸಂಕುಚನಗೊಳ್ಳುತ್ತವೆ ಮತ್ತು ಇದರಿಂದಾಗಿ ಶ್ವಾಸನಾಳಗಳು ಕಿರಿದಾಗುತ್ತವೆ. ಇದರೊಂದಿಗೆ ಶ್ವಾಸನಾಳದ ಊತವಿರುತ್ತದೆ ಮತ್ತು ಶ್ವಾಸನಾಳಗಳಲ್ಲಿ ಲೋಳೆಯೂ ಸಂಗ್ರಹಗೊಳ್ಳುತ್ತದೆ. ಇವೆಲ್ಲ ಸೇರಿಕೊಂಡು ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತವೆ. ಅಸ್ತಮಾ ನಿಧಾನವಾಗಿ ಪ್ರಕಟಗೊಳ್ಳುತ್ತದೆ. ಗಂಟೆಗಳು ಅಥವಾ ದಿನಗಳು ಅಥವಾ ವಾರಗಳೇ ಬೇಕಾಗಬಹುದು. ಆದರೆ ಕೆಲವೊಮ್ಮೆ ನಿಮಿಷಗಳಲ್ಲಿಯೇ ಕಾಣಿಸಿಕೊಳ್ಳುವುದೂ ಇದೆ.

ಅಸ್ತಮಾ ಯಾವುದೇ ವಯೋಗುಂಪಿನವರನ್ನೂ ಬಾಧಿಸಬಲ್ಲದು. ಜಗತ್ತಿನಲ್ಲಿ ಅಸ್ತಮಾದಿಂದ ನರಳುತ್ತಿರುವ 334 ಮಿಲಿಯನ್‌ಗೂ ಅಧಿಕ ರೋಗಿಗಳಲ್ಲಿ ಶೇ.14ರಷ್ಟು ಮಕ್ಕಳಿದ್ದರೆ,ಯುವಜನರ ಪ್ರಮಾಣ ಶೇ.8.6ರಷ್ಟಿದೆ. ವಿಶ್ವಾದ್ಯಂತ ಪ್ರತಿ ವರ್ಷ ಸುಮಾರು 250,000 ಸಾವುಗಳಿಗೆ ಅಸ್ತಮಾ ಕಾರಣವಾಗಿದೆ. ಭಾರತದಲ್ಲಿ ಸುಮಾರು 18 ಮಿಲಿಯನ್ ಅಸ್ತಮಾ ರೋಗಿಗಳಿದ್ದು,ಈ ಪೈಕಿ ಶೇ.3 ರಿಂದ ಶೇ.38ರಷ್ಟು ಮಕ್ಕಳಾಗಿದ್ದರೆ,ಶೇ.2ರಿಂದ ಶೇ.12 ಯುವಜನರಾಗಿದ್ದಾರೆ.

ಅಸ್ತಮಾ ರೋಗಿಗಳಲ್ಲಿ ಲಕ್ಷಣಗಳು ಬೇರೆ ಬೇರೆ ಸಮಯಕ್ಕೆ ಭಿನ್ನವಾಗಿರಬಹುದು. ಕೆಲವೊಮ್ಮೆ,ವಿಶೇಷವಾಗಿ ಅಸ್ತಮಾ ಚೆನ್ನಾಗಿ ನಿಯಂತ್ರಣದಲ್ಲಿದ್ದಾಗ ಲಕ್ಷಣರಹಿತವಾಗಿರಬಹುದು.ಅದು ತೀವ್ರ ಉಸಿರಾಟದ ತೊಂದರೆಯನ್ನುಂಟು ಮಾಡಬಹುದು ಮತ್ತು ಆಸ್ಪತ್ರೆಗೆ ದಾಖಲಾಗುವಂತೆಯೂ ಮಾಡಬಹುದು.

ಉಬ್ಬಸ,ಎದೆ ಕಟ್ಟಿಕೊಂಡ ಅನುಭವ ಮತ್ತು ಪದೇ ಪದೇ ಒತ್ತರಿಸಿ ಬರುವ ಕೆಮ್ಮು ಇವು ಅಸ್ತಮಾದ ಸಾಮಾನ್ಯ ಲಕ್ಷಣಗಳಾಗಿವೆ.

ಸಾಮಾನ್ಯ ಶೀತ ಅಥವಾ ವೈರಾಣು ಸೋಂಕು,ಹೂವುಗಳ ಪರಾಗ,ಕೆಲವು ಜಾತಿಗಳ ಹುಳಗಳು ಮತ್ತು ಪ್ರಾಣಿಗಳ ತುಪ್ಪಳಗಳಂತಹ ಅಲರ್ಜಿಕಾರಕಗಳು,ಹೊಗೆ ಮತ್ತು ಧೂಳಿನಂತಹ ಕಿರಿಕಿರಿಗಳು, ಪರಾಕಾಷ್ಠೆಗೇರಿದ ಭಾವನೆಗಳು,ವಾಯು ಮಾಲಿನ್ಯ ಮತ್ತು ದೈಹಿಕ ಚಟುವಟಿಕೆ ಇತ್ಯಾದಿಗಳು ಅಸ್ತಮಾವನ್ನುಂಟು ಮಾಡುವ ಕೆಲವು ಸಾಮಾನ್ಯ ಕಾರಣಗಳಾಗಿವೆ.

► ಅಸ್ತಮಾ ರೋಗಿಗಳಿಗೆ ಟಿಪ್ಸ್

ಇನ್‌ಹೇಲರ್ ಮೂಲಕ ಔಷಧಿ ಸೇವನೆಯು ಅಸ್ತಮಾಕ್ಕೆ ಅತ್ಯುತ್ತುಮ ಚಿಕಿತ್ಸಾ ರೂಪವಾಗಿದೆ. ರೋಗಿಯು ಇನ್‌ಹೇಲರ್‌ನ್ನು ಉಸಿರಾಡಿದಾಗ ಅದರಲ್ಲಿರುವ ಔಷಧಿಯು ನಿಗದಿತ ಪ್ರಮಾಣದಲ್ಲಿ ಶ್ವಾಸನಾಳಗಳನ್ನು ಸೇರುತ್ತದೆ. ಇನ್‌ಹೇಲರ್ ಶ್ವಾಸನಾಳಗಳಿಗೆ ನೇರವಾಗಿ ಔಷಧಿಯನ್ನು ತಲುಪಿಸುತ್ತದೆ ಎನ್ನುವುದು ಈ ಚಿಕಿತ್ಸೆಯ ಮುಖ್ಯ ಅಂಶವಾಗಿದೆ. ಅಲ್ಲದೆ ಅಗತ್ಯ ಡೋಸೇಜ್ ಕೂಡ ತುಂಬ ಕಡಿಮೆಯಾಗಿರುವುದರಿಂದ ಅಡ್ಡಪರಿಣಾಮಗಳೂ ಕಡಿಮೆಯಾಗಿರುತ್ತವೆ. ಈ ಇನ್‌ಹೇಲರ್‌ಗಳನ್ನು ಸುಲಭವಾಗಿ ಜೇಬಿನಲ್ಲಿ ಇಟ್ಟುಕೊಳ್ಳಬಹುದು,ಹೀಗಾಗಿ ರೋಗಿಯು ಎಲ್ಲಿಗೆ ಹೋದರೂ ಸದಾ ಇನ್‌ಹೇಲರ್‌ನ್ನು ತನ್ನ ಬಳಿ ಇರಿಸಿಕೊಳ್ಳಬಹುದು ಮತ್ತು ಅಸ್ತಮಾ ದಾಳಿಯುಂಟಾದಾಗ ಸುಲಭವಾಗಿ ಬಳಸಬಹುದು. ಮೀಟರ್ಡ್‌ ಡೋಸ್ ಮತ್ತು ಡ್ರೈ ಪೌಡರ್ ಹೀಗೆ ಎರಡು ವಿಧಗಳಲ್ಲಿ ಇನ್‌ಹೇಲರ್‌ಗಳು ಲಭ್ಯವಿವೆ. ತೀವ್ರ ಅಸ್ತಮಾ ದಾಳಿ ಸಂದರ್ಭದಲ್ಲಿ ಮತ್ತು ರೋಗಿಗೆ ಇನ್‌ಹೇಲರ್ ಮೂಲಕ ಔಷಧಿ ಸೇವನೆ ಸಾಧ್ಯವಿರದಿದ್ದಾಗ ನೆಬ್ಯುಲೈಸರ್‌ಗಳ ಮೂಲಕ ಔಷಧಿಯನ್ನು ನೀಡಬಹುದಾಗಿದೆ. ಚಿಕಿತ್ಸೆಗೆ ಸಹಕರಿಸದ ರೋಗಿಗಳಿಗೆ,ನಿರ್ದಿಷ್ಟವಾಗಿ ಸಣ್ಣ ಮಕ್ಕಳು,ಮಾನಸಿಕ ಅಸ್ವಸ್ಥರು ಮತು ವೃದ್ಧರಲ್ಲಿ ನೆಬ್ಯುಲೈಸರ್ ಹೆಚ್ಚು ಸಹಾಯಕಾರಿಯಾಗಿದೆ.

ರೋಗಿಯು ತನ್ನ ಅಸ್ತಮಾವನ್ನು ನಿಯಂತ್ರಣದಲ್ಲಿಡಲು ಔಷಧಿಗಳ ಸೇವನೆಯ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಮಸಾಲೆಭರಿತ ಮತ್ತು ಶೀತಲ ಆಹಾರಗಳ ಸೇವನೆ ಬೇಡವೇ ಬೇಡ. ಫಾಸ್ಟ್‌ಫುಡ್ ಮತ್ತು ಇಂಗಾಲೀಕೃತ ಪಾನೀಯಗಳು ಹಾನಿಕಾರಕವಾಗಿದ್ದು,ಅಸ್ತಮಾ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಲ್ಲವು. ಅಸ್ತಮಾ ರೋಗಿಗಳು ರಾತ್ರಿ ಊಟವಾದ ತಕ್ಷಣ ಮಲಗಬಾರದು,ಹಾಗೆ ಮಾಡುವುದರಿಂದ ತಿಂದ ಆಹಾರವು ಹೊಟ್ಟೆಯಿಂದ ಹಿಮ್ಮುಖವಾಗಿ ಹರಿದು ಅನ್ನನಾಳಕ್ಕೆ ವಾಪಸಾಗುವ ಸಾಧ್ಯತೆಯಿರುತ್ತದೆ ಮತ್ತು ಇದು ಅಸ್ತಮಾವನ್ನು ಪ್ರಚೋದಿಸುತ್ತದೆ. ನಿಯಮಿತ ವ್ಯಾಯಾಮ,ಆರೋಗ್ಯಯುತ ಆಹಾರ ಸೇವನೆಯ ಜೊತೆಗೆ, ಒತ್ತಡಗಳಿಂದ ದೂರವಿರುವುದು ಅಸ್ತಮಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News