×
Ad

ಬೆಂಗಳೂರು: ಈಡೇರದ ನ.10ರೊಳಗೆ ಗುಂಡಿ ಮುಚ್ಚುವ ಭರವಸೆ, ಇನ್ನೂ ಶುರುವಾಗಿಲ್ಲ ಕಾಮಗಾರಿ

Update: 2019-10-29 23:24 IST

ಬೆಂಗಳೂರು, ಅ.28: ನಗರದ ಯಾವುದೇ ಭಾಗಕ್ಕೆ ಹೋದರು ರಸ್ತೆ ಗುಂಡಿಗಳ ಗೋಳು ತಪ್ಪಿದ್ದಲ್ಲ. ಇದಕ್ಕೆ ಪರಿಹಾರ ನೀಡಲು ಮುಂದಾಗಿದ್ದ ಬಿಬಿಎಂಪಿ ಮೇಯರ್, ನ.10ರೊಳಗೆ ಎಲ್ಲಾ ರಸ್ತೆ ಗುಂಡಿ ಮುಚ್ಚುವುದಾಗಿ ಭರವಸೆ ನೀಡಿದ್ದರು. ಆದರೆ, ಅವರ ಭರವಸೆ ಈಡೇರುವ ಲಕ್ಷಣ ಕಾಣುತ್ತಿಲ್ಲ.

ನಗರದಲ್ಲಿ ಇದುವರೆಗೂ ಯಾವುದೇ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಶುರುವಾಗದ ಹಿನ್ನೆಲೆ ಮೇಯರ್ ಗೌತಮ್ ಕುಮಾರ್ ಜೈನ್ ನೀಡಿರುವ ಭರವಸೆ ನ.10ರೊಳಗೆ ಈಡೇರುವುದು ಅಸಾಧ್ಯ ಎನ್ನುತ್ತಿದ್ದಾರೆ ಸಾರ್ವಜನಿಕರು. ನಗರದಲ್ಲಿ ಗುಂಡಿಗಳಿಂದಾಗುವ ಅವಾಂತರ ಅಷ್ಟಿಷ್ಟಲ್ಲ. ದಿನಂಪ್ರತಿ ಒಂದಿಲ್ಲಾ ಒಂದು ಕಡೆ ದುರಂತಗಳಿಗೆ ಕಾರಣವಾಗುತ್ತಿದೆ. ಹಳ್ಳದಂತಿರುವ ರಸ್ತೆಗಳು ವಾಹನ ಸವಾರರ ಬಲಿ ಪಡೆಯಲು ಕಾಯ್ದು ಕುಳಿತಿವೆ. ಇಷ್ಟಾದರೂ ಬಿಬಿಎಂಪಿ ಹಾಗೂ ಬಿಡಿಎ ರಸ್ತೆ ದುರಸ್ತಿಗೆ ಆದ್ಯತೆ ನೀಡದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ನಗರದಲ್ಲಿ 13,000 ಕಿ.ಮೀ.ಉದ್ದದ ರಸ್ತೆಗಳಿವೆ. ಇದರಲ್ಲಿ 1,500 ಕಿ.ಮೀ. ಉದ್ದದ ಆರ್ಟಿರಿಯರ್, ಸಬ್ ಆರ್ಟಿರಿಯಲ್ ರಸ್ತೆಯಿದೆ. ಇದರಲ್ಲಿ ಯಾವ ರಸ್ತೆಯೂ ಗುಂಡಿಯಿಂದ ಮುಕ್ತವಾಗಿಲ್ಲ. ಎಲ್ಲ ರಸ್ತೆಯಲ್ಲೂ ಒಂದಿಲ್ಲೊಂದು ಗುಂಡಿ ಇದ್ದೇ ಇರುತ್ತವೆ. ನಗರದ ಪ್ರಮುಖ ರಸ್ತೆಯೂ ಗುಂಡಿಮಯವಾಗಿರುವುದರಿಂದ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.

ಮಳೆ ಬಂದಾಗಲಂತೂ ಗುಂಡಿಗಳಲ್ಲಿ ನೀರು ನಿಂತು ಇನ್ನಷ್ಟು ಸಂಕಷ್ಟ ಉಂಟಾಗುತ್ತದೆ. ರಸ್ತೆ ಗುಂಡಿ ನಿರ್ಮಾಣವಾದಾಗಲೇ ದುರಸ್ತಿ ಪಡಿಸಲು ಬಿಬಿಎಂಪಿ ಇಂಜಿನಿಯರ್‌ಗಳು ಮುಂದಾಗುತ್ತಿಲ್ಲ. ಇದರಿಂದ ದಿನ ಕಳೆದಂತೆ ಗುಂಡಿಗಳ ಆಳ, ಅಗಲ ಹೆಚ್ಚಾಗಿ ದ್ವಿಚಕ್ರ ವಾಹನ ಸವಾರರು, ಆಟೋರಿಕ್ಷಾ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಪ್ರಮುಖ ಆರ್ಟಿರಿಯಲ್/ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳಪೆ ದುರಸ್ಥಿ: ರಸ್ತೆಯಲ್ಲಿ ಗುಂಡಿಗಳು ಉಂಟಾಗಿ ಅಪಘಾತಗಳು ಹೆಚ್ಚಾದಾಗ ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಆಗ ತಕ್ಷಣಕ್ಕೆ ಎಂಬಂತೆ ಅವೈಜ್ಞಾನಿಕವಾಗಿ ಗುಂಡಿ ಬಿದ್ದ ಜಾಗಕ್ಕೆ ಒಂದಿಷ್ಟು ಡಾಂಬರು ಸುರಿದು ಅದರ ಮೇಲೆ ಜಲ್ಲಿಪುಡಿ ಹರಡಲಾಗುತ್ತಿದೆ. ಇದರಿಂದಾಗಿ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ಸೃಷ್ಟಿಯಾಗುತ್ತಿದೆ. ಮಳೆ ಸುರಿದರೆ ಕೆಲವೇ ಗಂಟೆಗಳಲ್ಲಿ ಡಾಂಬರು ಕಿತ್ತು ಬಂದು ದೊಡ್ಡ ಹೊಂಡ ಸೃಷ್ಟಿಯಾಗುತ್ತಿದೆ. ಗುಂಡಿ ದುರಸ್ಥಿಗೆ ನಿರ್ದಿಷ್ಟ ಮಾನದಂಡಗಳಿದ್ದು, ಅವುಗಳನ್ನು ಪಾಲಿಸದ ಕಾರಣ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News