ಭಾರತೀಯ ಹಬ್ಬಗಳ ಉದ್ದೇಶಗಳನ್ನು ವಿಫಲಗೊಳಿಸುತ್ತಿರುವ ಮಾಲಿನ್ಯ

Update: 2019-10-30 05:59 GMT

ಭಾರತೀಯ ಹಬ್ಬಗಳ ಅತಿ ದೊಡ್ಡ ವೈಶಿಷ್ಟವೆಂದರೆ, ಅವು ಪ್ರಕೃತಿ ಮತ್ತು ಪರಿಸರದ ಜೊತೆಗೆ ನೇರ ಸಂಬಂಧವನ್ನು ಹೊಂದಿರುವುದು. ಹಲವು ಹಬ್ಬಗಳು ಶ್ರಮ ಸಂಸ್ಕೃತಿಗೆ ಅಂದರೆ ಕೃಷಿಗೆ ಪೂರಕವಾಗಿವೆ. ಮನುಷ್ಯನ ಬದುಕಿಗೆ ಆಸರೆಯಾಗಿರುವ ಪ್ರಕೃತಿ, ಪರಿಸರ, ನದಿ, ಕಡಲು ಇವುಗಳಿಗೆ ನೀಡುವ ಗೌರವದ ಭಾಗವೂ ಆಗಿ ಹಬ್ಬಹರಿದಿನಗಳು, ಸಂಪ್ರದಾಯಗಳು ಬೆಳೆದು ಬಂದಿವೆ. ಧರ್ಮ ಇಲ್ಲಿ ನೆಪ ಮಾತ್ರ. ದುರದೃಷ್ಟವಶಾತ್, ಪರಿಸರ, ಪ್ರಕೃತಿಯನ್ನು ಗೌರವಿಸಿ ಉಳಿಸಬೇಕಾದ ಹಬ್ಬಗಳೇ ಇಂದು ಪರಿಸರವನ್ನು, ನದಿ, ಕೊಳ್ಳಗಳನ್ನು ಗಬ್ಬೆಬ್ಬಿಸುತ್ತಿವೆ. ಹಬ್ಬಗಳು, ಭಾರತದ ಧಾರ್ಮಿಕ ಆಚರಣೆಗಳು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿವೆ. ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಮಾಲಿನ್ಯಗಳಿಂದ ತುಂಬಿ ಹೋದ ಕೆರೆ, ನದಿಗಳನ್ನು ಶುದ್ಧೀಕರಿಸುವುದಕ್ಕಾಗಿಯೇ ಸರಕಾರ ಹಲವು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಬೇಕಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಆಧ್ಯಾತ್ಮಿಕ ನಾಯಕರು, ಸರಕಾರ ಪಟಾಕಿಯ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿದರೂ ಜನರು ಅದನ್ನು ನಿರ್ಲಕ್ಷಿಸಿ ಪಟಾಕಿಗಳನ್ನು ಸುಟ್ಟು ಹಣ, ಆರೋಗ್ಯ ಮತ್ತು ಮನಸುಗಳನ್ನು ಕೆಡಿಸಿಕೊಳ್ಳುತ್ತಿದಾರೆ.

ಇದೇ ಸಂದರ್ಭದಲ್ಲಿ ಪಟಾಕಿಗಳಿಂದ ಕಣ್ಣುಗಳನ್ನು ಕಳೆದುಕೊಂಡ ವರದಿಗಳೂ ಈ ಬಾರಿಯೂ ಮಾಧ್ಯಮಗಳ ಮುಖಪುಟಗಳಲ್ಲಿ ರಾರಾಜಿಸುತ್ತಿವೆ. ದೀಪಾವಳಿಗೂ ಪಟಾಕಿಗೂ ಯಾವ ಸಂಬಂಧವೂ ಇಲ್ಲ. ದೀಪಾವಳಿ ಹಣತೆಗಳ ಅಥವಾ ಬೆಳಕಿನ ಹಬ್ಬ. ಕತ್ತಲು ಕಳೆದು ಬೆಳಕು ನಮ್ಮ ಒಳಹೊರಗನ್ನು ಆವರಿಸಬೇಕು ಎಂದು ಆಶಿಸುವ ಹಬ್ಬ. ಪಟಾಕಿಗಳು ಬೆಳಗುವುದಿಲ್ಲ, ಬದಲಿಗೆ ಸದ್ದನ್ನಷ್ಟೇ ಮಾಡಿ ಬೂದಿಯಾಗುತ್ತವೆ. ಅದೊಂದು ರೀತಿ ಉಲ್ಕೆಯಂತೆ. ಅಂತಿಮವಾಗಿ ಬಿಟ್ಟುಹೋಗುವುದು ಗಾಢ ಕತ್ತಲು. ಜೊತೆಗೆ ಗಂಧಕದ ದುರ್ವಾಸನೆ. ಈ ಬಾರಿಯ ದೀಪಾವಳಿಯಲ್ಲಿ ಪಟಾಕಿಗಳು ಹಲವು ಮಕ್ಕಳ ಹಣತೆಗಳಂತಹ ಕಣ್ಣುಗಳನ್ನು ಕಿತ್ತುಕೊಂಡು ಅವರ ಬದುಕಿನ ಬೆಳಕನ್ನು ಶಾಶ್ವತವಾಗಿ ಕಿತ್ತುಕೊಂಡಿವೆ. ಇದೇ ಸಂದರ್ಭದಲ್ಲಿ ದೀಪಾವಳಿ ಮುಗಿದ ಬಳಿಕ ಬೆಂಗಳೂರಿನಂತಹ ನಗರಗಳು ಪಟಾಕಿಗಳ ತ್ಯಾಜ್ಯಗಳಿಂದ ತುಂಬಿ ಹೋಗಿದ್ದು ಅವುಗಳನ್ನು ಶುಚಿಗೊಳಿಸುವುದೇ ಪೌರಕಾರ್ಮಿಕರಿಗೆ ಬಹುದೊಡ್ಡ ಸಮಸ್ಯೆಯಾಗಿದೆ.

ಪಟಾಕಿಗಳನ್ನು ಸಮರ್ಥಿಸುವುದಕ್ಕಾಗಿ, ಧೂಮಪಾನವನ್ನು ಮೊದಲು ನಿಲ್ಲಿಸಿ ಎಂದು ವಾದಿಸುವವರಿದ್ದಾರೆ. ನಿಜ. ಪರಿಸರ ಮಾಲಿನ್ಯದಲ್ಲಿ ಧೂಮಪಾನದ ಕೊಡುಗೆ ಬಹುದೊಡ್ಡದು. ಭಾರತದ ಶೇ.70ರಷ್ಟು ಪರಿಸರ ಅಪರಾಧಗಳು ಧೂಮಪಾನಕ್ಕೆ ಸಂಬಂಧಿಸಿದ್ದಾಗಿದೆ ಎಂದು ಎನ್‌ಸಿಆರ್‌ಬಿಯ ಇತ್ತೀಚಿನ ವರದಿ ತಿಳಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ(ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶದ ಪ್ರಕಾರ 2016 ಮತ್ತು 2017ರ ನಡುವಿನ ಅವಧಿಯಲ್ಲಿ ಪರಿಸರ ಅಪರಾಧದಲ್ಲಿ 8 ಪಟ್ಟು ಹೆಚ್ಚಳವಾಗಿದೆ. ಇದರಲ್ಲಿ ಶೇ.70ರಷ್ಟು ಪ್ರಕರಣ 2003ರ ಸಿಗರೇಟ್ ಮತ್ತು ತಂಬಾಕು ಕಾಯ್ದೆಯಡಿ ದಾಖಲಾಗಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಮತ್ತು ತಂಬಾಕು ಉತ್ಪನ್ನಗಳನ್ನು ಪ್ಯಾಕ್ ಮಾಡಲು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದಕ್ಕೆ ಸಂಬಂಧಿಸಿದ್ದಾಗಿದೆ ಎಂದು ವರದಿ ತಿಳಿಸಿದೆ . ವಿಶ್ವದ 20 ಅತ್ಯಂತ ಕಲುಷಿತ ನಗರಗಳಲ್ಲಿ 14 ಭಾರತದಲ್ಲಿಯೇ ಇವೆ ಎನ್ನುವುದಕ್ಕೆ ಭಾರತ ತಲೆತಗ್ಗಿಸಬೇಕು. ಯಾವ ದೇಶ ಭೂಮಿಯನ್ನು ದೇವತೆ ಎಂದು ಕರೆಯುತ್ತಾ ಬಂದಿದೆಯೋ, ವಾಯು, ಅಗ್ನಿ, ಆಕಾಶ, ನೀರು ಇತ್ಯಾದಿಗಳನ್ನು ಪಂಚಭೂತಗಳೆಂದು ಕರೆಯುತ್ತಾ, ಗೌರವಿಸುತ್ತಾ ಬಂದಿದೆಯೋ, ನದಿಯನ್ನು ತಾಯಿ, ದೇವತೆ ಎಂದು ಗುರುತಿಸಿದೆಯೋ ಆ ದೇಶವೇ ನದಿಗಳನ್ನು, ಕೆರೆಗಳನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸುತ್ತಿದೆ. ಮತ್ತು ಆಸ್ತಿಕ ಜನರೇ ಈ ಮಾಲಿನ್ಯದಲ್ಲಿ ಪ್ರಧಾನ ಪಾತ್ರವಹಿಸುತ್ತಿದ್ದಾರೆ ಎನ್ನುವುದು ಇನ್ನೊಂದು ವ್ಯಂಗ್ಯವಾಗಿದೆ. ಧಾರ್ಮಿಕ ಆಚರಣೆಯ ಹೆಸರಿನಲ್ಲೇ ಗಂಗಾನದಿ ಸರಿಪಡಿಸಲಾಗದಷ್ಟು ಕೆಟ್ಟು ಹೋಗಿದೆ. ಮೋಕ್ಷದ ಹೆಸರಿನಲ್ಲಿ ಗಂಗೆಗೆ ಅರೆ ಬೆಂದ ಶವಗಳನ್ನು ಎಸೆಯಲಾಗುತ್ತದೆ. ಎಲುಬುಚೂರುಗಳನ್ನು ನದಿಗಳಿಗೆ ಎಸೆಯುವುದು ಸಂಪ್ರದಾಯವಾಗಿದೆ. ತಂಬಾಕನ್ನು ಸೇದುವವರು ಪರಿಸರದ ಬಗ್ಗೆಯಾಗಲಿ, ತಮ್ಮ ಆರೋಗ್ಯದ ಕುರಿತಾಗಲಿ ಕಾಳಜಿಯನ್ನು ಹೊಂದಿದವರಲ್ಲ. ಆದರೆ ಹಬ್ಬದ ಹೆಸರಿನಲ್ಲಿ ಪರಿಸರವನ್ನು ಕೆಡಿಸುವವರು ಪ್ರಕೃತಿಯ ಕುರಿತಂತೆ ಗೌರವದ ಮಾತುಗಳನ್ನು ಆಡುವವರು.

ಅದನ್ನು ದೇವತೆ, ತಾಯಿ ಎಂದು ನಂಬಿ, ಪೂಜಿಸುವವರು. ತಾಯಿ ಎಂದು ಕರೆಯುತ್ತಲೇ ಆ ತಾಯಿಯ ಒಡಲೊಳಗೆ ಯಾವ ಪಾಪಪ್ರಜ್ಞೆಯೂ ಇಲ್ಲದೆ ಕಲ್ಮಶಗಳನ್ನು ಎಸೆಯುವ ವಿರೋಧಾಭಾಸ ನಿಲ್ಲಬೇಕು. ಪರಿಸರ ಶುದ್ಧೀಕರಣದಲ್ಲಿ ಮೊತ್ತ ಮೊದಲು ಆಸ್ತಿಕರು, ಕಟ್ಟಾ ಸಂಪ್ರದಾಯವಾದಿಗಳು, ಧಾರ್ಮಿಕರು ಕೈಜೋಡಿಸಬೇಕಾಗಿದೆ. ಬಳಿಕ ತಂಬಾಕು, ಪ್ಲಾಸ್ಟಿಕ್ ಬಳಕೆ ಇತ್ಯಾದಿಗಳ ಕಡೆಗೆ ಹೊರಳಬೇಕು. ಇಂದು ಪರಿಸರದ ಹೆಸರಿನಲ್ಲಿ ನೇರ ಶಿಕ್ಷೆಗೆ ಗುರಿಯಾಗುತ್ತಿರುವವರು ಆದಿವಾಸಿಗಳು ಮತ್ತು ಬುಡಕಟ್ಟು ಜನರು. ದಿ ಇಂಡಿಯನ್ ಫಾರೆಸ್ಟ್ ಆ್ಯಕ್ಟ್, ದಿ ಫಾರೆಸ್ಟ್ (ಕನ್ಸರ್ವೇಷನ್) ಆ್ಯಕ್ಟ್ ಮತ್ತು ದಿ ವೈಲ್ಡ್‌ಲೈಫ್ ಪ್ರೊಟೆಕ್ಷನ್ ಆ್ಯಕ್ಟ್ (ಭಾರತೀಯ ಅರಣ್ಯ ಕಾಯ್ದೆ, ಅರಣ್ಯ(ಸಂರಕ್ಷಣೆ) ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ)ಯಡಿ ಪೊಲೀಸರು 3,842 ಪರಿಸರ ಅಪರಾಧ ಪ್ರಕರಣ (2017ರಲ್ಲಿ ದಾಖಲಾದ ಪರಿಸರ ಅಪರಾಧ ಪ್ರಕರಣದ ಶೇ.9ರಷ್ಟು) ದಾಖಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಧಾರ್ಮಿಕ ಅಥವಾ ಉದ್ಯಮದ ಹೆಸರಿನಲ್ಲಿ ಪರಿಸರವನ್ನು ಕೆಡಿಸುವವರಿಗೆ ಯಾವ ಶಿಕ್ಷೆಯೂ ಆಗುವುದಿಲ್ಲ.

ಈ ದೇಶದಲ್ಲಿ ಕರಡಿಯಾಡಿಸುವವನನ್ನು ಬಂಧಿಸಿ ಆತನ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತದೆ. ಆದರೆ ದೇವಸ್ಥಾನ, ಜಾತ್ರೆಗಳಲ್ಲಿ ಆನೆಗಳನ್ನು ಮನರಂಜನೆಗಾಗಿ ಹಿಂಸಿಸಿ ಬಳಕೆ ಮಾಡುವ ಕುರಿತಂತೆ ಸರಕಾರ ವೌನವಾಗುತ್ತದೆ. ಇಂದು ಈ ದೇಶದ ಸಂಸ್ಕೃತಿಯ ಗುತ್ತಿಗೆದಾರನಂತೆ ವರ್ತಿಸುತ್ತಿರುವ ಪಕ್ಷವೊಂದು ದೇಶವನ್ನು ಆಳುತ್ತಿದೆ. ಮತ್ತು ಸ್ವಚ್ಛತಾ ಆಂದೋಲನದ ಹೆಸರಿನಲ್ಲಿ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯನ್ನೂ ಮಾಡುತ್ತಿದೆ. ಹಬ್ಬ, ಸಾರ್ವಜನಿಕ ಉತ್ಸವಗಳ ಹೆಸರಿನಲ್ಲಿ ನಡೆಯುವ ಪರಿಸರ ಮಾಲಿನ್ಯವನ್ನು ತಡೆಯುವ ಮೂಲಕ ಈ ಸರಕಾರ ಏಕಕಾಲದಲ್ಲಿ ಭಾರತೀಯ ಸಂಸ್ಕೃತಿಯನ್ನು ಮತ್ತು ಪರಿಸರವನ್ನು ಉಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಬಾಲ ಕಾರ್ಮಿಕರನ್ನು ತೊಡಗಿಸಿಕೊಂಡು ನಡೆಸುತ್ತಿರುವ ಪಟಾಕಿ ಕಾರ್ಖಾನೆಗಳಿಗೆ ಬೀಗ ಜಡಿಯುವ ಕೆಲಸ ಮೊದಲು ನಡೆಯಬೇಕು. ಯಾವುದೇ ಹಬ್ಬಗಳು ನಮ್ಮ ಒಳಗಿನ ಕತ್ತಲನ್ನು ಕಳೆದು, ಬೆಳಕನ್ನು ಹರಡಬೇಕೇ ಹೊರತು, ಅದು ಒಳ ಹೊರಗೆ ಮಾಲಿನ್ಯಗಳನ್ನು ಹರಡಿ ಹೋಗುವಂತಾಗಬಾರದು. ಮುಂದಿನ ದೀಪಾವಳಿ ಯಾವ ಪಟಾಕಿಗಳೂ ಇಲ್ಲದ, ಹಣತೆಗಳ ಬೆಳಕಿನಲ್ಲಿ ನಡೆಯುವಂತಾಗಲಿ. ಈ ದೇಶದ ಕತ್ತಲನ್ನು ಅಳಿಸಿ ಬೆಳಕನ್ನು ತರುವಂತಾಗಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News