ನನಗೆ ನನ್ನದೇ ಜಂಜಾಟ ಸಾಕಾಗಿದೆ, ಹೀಗಾಗಿ ರಾಜಕೀಯ.... : ಡಿ.ಕೆ.ಶಿವಕುಮಾರ್

Update: 2019-10-30 12:55 GMT

ಬೆಂಗಳೂರು, ಅ.30: ಪ್ರಸ್ತುತ ರಾಜಕೀಯದ ವಿಚಾರವಾಗಿ ನನಗೆ ಏನು ಗೊತ್ತಿಲ್ಲ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಈ ವಿಚಾರದಲ್ಲಿ ಯಾರು ರಾಜಕೀಯ ಮಾಡುತ್ತಿದ್ದಾರೆ ಗೊತ್ತಿಲ್ಲ. ದೊಡ್ಡವರ ವಿಚಾರ ನನಗೆ ಬೇಡ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಬುಧವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನನ್ನದೇ ಜಂಜಾಟ ಸಾಕಾಗಿದೆ. ಹೀಗಾಗಿ ರಾಜಕೀಯ ವಿಚಾರಗಳ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ನನಗೆ ಆರೋಗ್ಯದ ಸಮಸ್ಯೆ ಇದೆ. ಅದರ ಬಗ್ಗೆ ಗಮನ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ. ನಾನು ನನ್ನ ವಕೀಲರ ಜತೆ ಮಾತನಾಡಬೇಕಿದೆ. ಮನೆಯವರು ಆರೋಗ್ಯದ ಕಡೆ ಗಮನ ಕೊಡಿ ಅಂತಾ ಬೈಯುತ್ತಿದ್ದಾರೆ. ಈ ಎಲ್ಲ ಜಂಜಾಟಗಳೇ ನನಗೆ ಸಾಕಾಗಿದೆ ಎಂದು ಅವರು ಹೇಳಿದರು.

ಮೆಡಿಕಲ್ ಕಾಲೇಜು ವಿಚಾರವಾಗಿ ಸಿಎಂಗೆ ಪತ್ರ: ಕನಕಪುರ ಮೆಡಿಕಲ್ ಕಾಲೇಜು ಸ್ಥಳಾಂತರ ವಿಚಾರದ ಬಗ್ಗೆ ಮುಖ್ಯಮಂತ್ರಿಗೆ ಸರಿಯಾದ ಹಿನ್ನೆಲೆ ತಿಳಿದಿಲ್ಲ ಎಂಬುದು ನನ್ನ ಭಾವನೆ. ಹೀಗಾಗಿ ಅವರಿಗೆ ವಿಸ್ತೃತವಾಗಿ ಪತ್ರ ಬರೆಯುತ್ತೇನೆ. ಅವರಿಗೆ ವಾಸ್ತವಾಂಶ ತಿಳಿದಿದ್ದರೆ ಅವರು ನಮಗೆ ಸಿಕ್ಕಿದ್ದ ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡುತ್ತಿರಲಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ನಾನು ಸುಧಾಕರ್ ವಿಚಾರದಲ್ಲಿ ಟೀಕೆ ಮಾಡೋದಿಲ್ಲ. ಅವರು ಅವರ ಹಕ್ಕನ್ನು ಕೇಳುತ್ತಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಅದೇ ರೀತಿ ನಾನು ನನ್ನ ಹಕ್ಕು ಕೇಳುತ್ತಿದ್ದೇನೆ. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ನೀಡುವುದರಲ್ಲಿ ನನಗೆ ಯಾವುದೇ ತಕರಾರಿಲ್ಲ. ಬರೀ ಚಿಕ್ಕಬಳ್ಳಾಪುರ ಮಾತ್ರ ಅಲ್ಲ, ಬೇರೆ ಮೂರು ಕಡೆ ಬೇಕಾದರೂ ಕೊಡಲಿ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ ಎಂದು ಅವರು ಹೇಳಿದರು.

ಆದರೆ, ನಮಗೆ ಹಂಚಿಕೆಯಾಗಿದ್ದನ್ನು ಕಿತ್ತುಕೊಂಡಿದ್ದು ಸರಿಯಲ್ಲ. ನಾನು ಸಚಿವನಾಗಿದ್ದಾಗ ನನ್ನ ಕ್ಷೇತ್ರಕ್ಕೆ ಒಂದೇ ಒಂದು ಕೆಲಸ ಮಾಡಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಎಷ್ಟು ಕಷ್ಟಪಟ್ಟು ನನ್ನ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜ್ ತೆಗೆದುಕೊಂಡು ಹೋದೆ. ಕಾವೇರಿ ನೀರಿನ ವಿಚಾರದಲ್ಲೂ ಹೀಗೇ ಆಗಿದೆ ಎಂದು ಅವರು ಹೇಳಿದರು.

ನಮ್ಮ ಕ್ಷೇತ್ರದ ಜನರು ಕಾವೇರಿ ನೀರನ್ನು ಜಿಲ್ಲೆಗೆ ತೆಗೆದುಕೊಂಡು ಬನ್ನಿ ಅಂತಾ ಒತ್ತಡ ಹಾಕಿದರು. ಆದರೆ ನಾನು ಅದೆಲ್ಲ ಸಾಧ್ಯವಾಗುವುದಿಲ್ಲ ಅಂತಾ ವಾಸ್ತವವನ್ನು ಹೇಳಿ ಮನವರಿಕೆ ಮಾಡಿದೆ. ಇನ್ನು ಮೇಕೆದಾಟು ಯೋಜನೆ ಜಾರಿಗೆ ಬಂದರೆ ಹೆಚ್ಚು ತೊಂದರೆ ಆಗೋದು ನಮ್ಮ ಕ್ಷೇತ್ರಕ್ಕೆ ಎಂದು ಶಿವಕುಮಾರ್ ತಿಳಿಸಿದರು.

ನಮ್ಮ ಕ್ಷೇತ್ರದ ಜನರ ಜಮೀನು ಅದಕ್ಕೆ ನೀಡಬೇಕಿದೆ. ಆದರೂ ನಾನು ಆ ಯೋಜನೆ ಪರವಾಗಿ ಧ್ವನಿ ಎತ್ತಿದೆ. ಬೆಂಗಳೂರಿಗಾಗಿ ನಾವು ತ್ಯಾಗಕ್ಕೆ ಸಿದ್ಧರಿದ್ದೇವೆ. ಹೀಗೆ ನನ್ನ ಕ್ಷೇತ್ರದ ಜನತೆಗೆ ನಾನು ಬೇರೆ ಯಾವುದೇ ಕೆಲಸ ಮಾಡಿಕೊಡಲು ಸಾಧ್ಯವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮೆಡಿಕಲ್ ಕಾಲೇಜ್ ಸ್ಥಳಾಂತರ ಮಾಡಿರುವುದು ಸರಿಯಲ್ಲ ಎಂದು ಅವರು ಹೇಳಿದರು. ಇದರಲ್ಲಿ ನನ್ನ ಸ್ವಾರ್ಥವೂ ಇದೆ. ಇದು ನನ್ನ ಕನಸಿನ ಯೋಜನೆ. ನಾನು ನನ್ನ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ತರುವ ಉದ್ದೇಶಕ್ಕಾಗಿಯೇ ನಾನು ವೈದ್ಯಕೀಯ ಶಿಕ್ಷಣ ಇಲಾಖೆ ವಹಿಸಿಕೊಂಡೆ. ಕುಮಾರಸ್ವಾಮಿ ಅವರ ಕ್ಷೇತ್ರಕ್ಕೆ ವಿಶ್ವವಿದ್ಯಾಲಯ ತೆಗೆದುಕೊಂಡರು, ಎಚ್.ಕೆ ಪಾಟೀಲ್ ಗ್ರಾಮೀಣಾಭಿವೃದ್ಧಿ ವಿವಿಯನ್ನು ತಮ್ಮ ಕ್ಷೇತ್ರಕ್ಕೆ ತೆಗೆದುಕೊಂಡರು. ಹೀಗೆ ಪ್ರತಿಯೊಬ್ಬರೂ ತಮ್ಮ ಕ್ಷೇತ್ರಕ್ಕೆ ಒಂದಲ್ಲಾ ಒಂದು ಕೊಡುಗೆ ನೀಡಲು ಬಯಸುತ್ತಾರೆ. ಅದನ್ನು ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಶಿವಕುಮಾರ್ ತಿಳಿಸಿದರು.

ಕೇಂದ್ರ ಸರಕಾರದಿಂದ ಇನ್ನು ಕೆಲವು ಮೆಡಿಕಲ್ ಕಾಲೇಜುಗಳಿಗೆ ಅನುಮತಿ ಸಿಕ್ಕಿದೆ. ಅದರಲ್ಲಿ ಬೇಕಾದರೆ ಚಿಕ್ಕಬಳ್ಳಾಪುರಕ್ಕೆ ನೀಡಲಿ. ನಾನು ಆ ಕ್ಷೇತ್ರಕ್ಕೆ ಸಿಗುವುದನ್ನು ತಪ್ಪಿಸಲು ಹೋಗುವುದಿಲ್ಲ. ಬರೀ ಕಾಲೇಜು ಮಾತ್ರ ಅಲ್ಲ ವಿಶ್ವವಿದ್ಯಾಲಯವನ್ನೇ ಚಿಕ್ಕಬಳ್ಳಾಪುರಕ್ಕೆ ಕೊಡಲಿ ನಾನು ಬೇಡ ಅನ್ನುವುದಿಲ್ಲ. ಆದರೆ ನನ್ನ ಕ್ಷೇತ್ರಕ್ಕೆ ಸಿಕ್ಕಿದ್ದನ್ನು ಕಿತ್ತುಕೊಂಡು ಅನ್ಯಾಯ ಮಾಡಿದರೆ ಸುಮ್ಮನೆ ಕೂರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News