ಮನೆಗೆ ನುಗ್ಗಿ ಚಿನ್ನಾಭರಣ ಕಳವು ಆರೋಪ: ಇಬ್ಬರು ಅರ್ಚಕರ ಬಂಧನ

Update: 2019-10-30 13:57 GMT

ಬೆಂಗಳೂರು, ಅ.30: ಪರಿಚಯಸ್ಥರ ಮನೆಗೆ ನಕಲಿ ಕೀ ಬಳಸಿ, ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಅರ್ಚಕರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿ, 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತರನ್ನು ಚಿಕ್ಕಬಳ್ಳಾಪುರದ ನಾಗರಾಜ್(42), ಲಕ್ಷ್ಮಣ(38) ಎಂದು ಗುರುತಿಸಲಾಗಿದೆ. ಬಂಧಿತರಿಂದ 42 ಗ್ರಾಂ ತೂಕದ ಚಿನ್ನದ ಚೈನ್, ಬಳೆ ಸೇರಿ 8 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಪಿಗೆ ಹಳ್ಳಿಯ ಪವನ್ ಅವರ ಮನೆಗೆ ಪೂಜೆ ನೆಪದಲ್ಲಿ ಆರೋಪಿ ನಾಗರಾಜ್ ಆಗಾಗ ಹೋಗಿ ಬರುತ್ತಿದ್ದು, ಮನೆಯವರ ವಿಶ್ವಾಸ ಗಳಿಸಿದ್ದ. ಕಳೆದ ಅ.17ರಂದು ಪವನ್ ತಾಯಿ, ತಂಗಿ ಸೇರಿ ಇಡೀ ಕುಟುಂಬ ಧರ್ಮಸ್ಥಳಕ್ಕೆ ಹೋಗುತ್ತಿರುವುದನ್ನು ನಾಗಣ್ಣ ಬಳಿ ಹೇಳಿಕೊಂಡಿದ್ದರು. ಧರ್ಮಸ್ಥಳಕ್ಕೆ ಪವನ್ ಕುಟುಂಬ ಹೋಗುವುದನ್ನು ತಿಳಿದು ಮನೆಯಲ್ಲಿದ್ದ ಕೀಯನ್ನು ತೆಗೆದುಕೊಂಡು ಹೋಗಿ ನಕಲಿ ಕೀ ಮಾಡಿಸಿಕೊಂಡು ಇಟ್ಟುಕೊಂಡಿದ್ದ. ಅಲ್ಲದೆ, ಪವನ್ ಕಟುಂಬದವರು ಧರ್ಮಸ್ಥಳಕ್ಕೆ ಹೋದ ಮರುದಿನವೇ ಸ್ನೇಹಿತನಾಗಿದ್ದ ಅರ್ಚಕ ಲಕ್ಷ್ಮಣನ ಜೊತೆ ನಕಲಿ ಕೀ ಬಳಸಿ, ಮನೆಗೆ ನುಗ್ಗಿ 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಈ ಪ್ರಕರಣ ದಾಖಲಿಸಿಕೊಂಡ ಸಂಪಿಗೆಹಳ್ಳಿ ಠಾಣಾ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿ, ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News