ಬಿಜೆಪಿ ಜೊತೆ ಹೊಂದಾಣಿಕೆಗೆ ಕುಮಾರಸ್ವಾಮಿ ಸಿದ್ಧ: ದಿನೇಶ್ ಗುಂಡೂರಾವ್

Update: 2019-10-30 16:22 GMT

ಬೆಂಗಳೂರು, ಅ.30: ಬಿಜೆಪಿ ಸರಕಾರ ಉಳಿಸಲು ನಿಲ್ಲುವುದಾಗಿ ಇತ್ತೀಚೆಗಷ್ಟೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಇತಿಹಾಸವನ್ನು ನಾವು ನೋಡಿದ್ದೇವೆ, ಅವರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದರು.

ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ನಂಬಿಕೆ ಇಡಲು ಸಾಧ್ಯವಿಲ್ಲ ಎಂಬ ಹೇಳಿಕೆಗಳನ್ನು ಗಮನಿಸಿದ್ದೇನೆ. ಕೋಮುವಾದಿಗಳ ಜೊತೆ ಕೈ ಜೋಡಿಸುವುದಿಲ್ಲ ಎಂಬುದು ನಮ್ಮ ಸ್ಪಷ್ಟವಾದ ನೀತಿ ಎಂದರು.

ನಮ್ಮ ಹೋರಾಟ ಬಿಜೆಪಿ ಹಾಗೂ ಅವರ ಧೋರಣೆ, ಸಿದ್ಧಾಂತ ಹಾಗೂ ಸರ್ವಾಧಿಕಾರದ ವಿರುದ್ಧ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕು ಎಂಬುದು ನಮ್ಮ ವಿಚಾರಧಾರೆ. ಅದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಬಿಜೆಪಿ ಸರಕಾರ ಉಳಿಸಲು ನಿಲ್ಲುವುದಾಗಿ ಹೇಳಿರುವ ಕುಮಾರಸ್ವಾಮಿಗೆ ಯಾವುದೇ ಸಿದ್ಧಾಂತ ಇಲ್ಲದೇ ಹೋದರೆ ನಾವು ಏನು ಮಾಡಲು ಸಾಧ್ಯ. ನಾನು ಜಾತ್ಯತೀತ ಸಿದ್ಧಾಂತವನ್ನು ನಂಬುತ್ತೇನೆ, ಕೋಮುವಾದಿಗಳ ಪರವಾಗಿ ನಿಲ್ಲುವುದಿಲ್ಲ ಎಂಬ ನಿಲುವು ಹೊಂದಿದ್ದರೆ ಮಾತ್ರ ಏನಾದರೂ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಅವರು ಹೇಳಿದರು.

ಸಮಯಕ್ಕೆ ಅನುಗುಣವಾಗಿ ಕುಮಾರಸ್ವಾಮಿ ಮಾತನಾಡುತ್ತಾರೆ. ಆದುದರಿಂದ, ಇದರ ಬಗ್ಗೆ ಹೆಚ್ಚು ಗಮನ ಕೊಡುವುದಾಗಲಿ, ವೈಯಕ್ತಿಕ ಟೀಕೆಗಳಿಗಾಗಲಿ ಇಳಿಯುವ ಅಗತ್ಯವಿಲ್ಲ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ಹೇಳಿಕೆಗಳನ್ನು ಹೆಚ್ಚು ಬೆಳೆಸುವ ಅವಶ್ಯಕತೆಯಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಬೇಕು. ಪಕ್ಷವನ್ನು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ತರಲು ಪ್ರಯತ್ನ ಮಾಡಬೇಕು. ನಮ್ಮ ವಿಚಾರಧಾರೆ ಹಾಗೂ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದು ನಮ್ಮ ಆದ್ಯತೆ. ಜೆಡಿಎಸ್ ಪಕ್ಷ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ರಾಜ್ಯದಲ್ಲಿ ಅತಂತ್ರ ಸರಕಾರ ಬೇಡ. ಎಲ್ಲ ನಾಯಕರ ಸಹಕಾರದಿಂದ ಮುಂದಿನ ಬಾರಿ ಕಾಂಗ್ರೆಸ್ ಸರಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಗುರಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News