ಸಂಸ್ಕೃತಕ್ಕೆ ನೀಡುವ ಅನುದಾನ ಪ್ರಾದೇಶಿಕ ಭಾಷೆಗಳಿಗೆ ಏಕಿಲ್ಲ: ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪ್ರಶ್ನೆ

Update: 2019-10-30 18:07 GMT

ಬೆಂಗಳೂರು, ಅ.30: ಕೇಂದ್ರ ಸರಕಾರ ಸಂಸ್ಕೃತ ಭಾಷೆಯ ಬೆಳವಣಿಗೆ ನೀಡುವ ಅನುದಾನವನ್ನು, ಇತರೆ ಪ್ರಾದೇಶಿಕ ಭಾಷೆಗಳಿಗೆ ನೀಡುತ್ತಿಲ್ಲವೇಕೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕನ್ನಡ ಸಂಘರ್ಷ ಸಮಿತಿ ಆಯೋಜಿಸಿದ್ದ ಶಾಸ್ತ್ರೀಯ ಕನ್ನಡದ ಅಸ್ಮಿತೆ ಮತ್ತು ವರ್ತಮಾನದ ತಲ್ಲಣಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕೃತ ಬೆಳವಣಿಗೆ ಹತ್ತಾರು ಕೋಟಿ ರೂ. ಖರ್ಚು ಮಾಡುವ ಕೇಂದ್ರ ಸರಕಾರ ಕನ್ನಡ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡದಿರುವುದು ವಿಪರ್ಯಾಸ ಎಂದರು.

ಶಾಸ್ತ್ರೀಯ ಭಾಷೆ ಸ್ಥಾನಮಾನ ಗಳಿಸಿಕೊಂಡಿರುವ ಕನ್ನಡದ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಲು ಕೇಂದ್ರ ಸರಕಾರ ಹಿಂದೇಟು ಹಾಕಿದೆ. ಅದಲ್ಲದೆ, ತಮಿಳು ಭಾಷೆಗೆ ನೀಡುವ ಅನುದಾನದ ಮೊತ್ತದ ಮುಂದೆ ಕನ್ನಡಕ್ಕೆ ಏನು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ದ್ರಾವಿಡ ಭಾಷೆಗಳಲ್ಲೇ ಕನ್ನಡಕ್ಕೊಂದು ವಿಶಿಷ್ಟ ಸ್ಥಾನಮಾನವಿದೆ. ಅದು ಅಹುದೆನ್ನುವಂತೆ ಎಲ್ಲರ ಕೋಲಾಹಲದ ಆಚೆಯೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದೆ. ಹಾಗಂತ, ಕನ್ನಡಿಗರಾದ ನಾವು ಅಷ್ಟಕ್ಕೇ ತೃಪ್ತಿಗೊಂಡು ನಿದ್ದೆ ಮಾಡಿ ಆಂಗ್ಲಭಾಷೆಯಲ್ಲಿ ಮೇಲೇಳುತ್ತಿದ್ದರೆ ಶಾಸ್ತ್ರೀಯ ಸ್ಥಾನಮಾನ ಲಭಿಸಿ ಏನು ಪ್ರಯೋಜನ ಎಂದ ಅವರು, ನಿಜಕ್ಕೂ ಕನ್ನಡಕ್ಕಾಗಿ ನಮ್ಮ ಮನ ಮಿಡಿಯುತ್ತಿದೆಯಾ, ತುಡಿಯುತ್ತಿದೆಯಾ, ಕನ್ನಡಕ್ಕಾಗಿ ದುಡಿಯುತ್ತಿದೆಯಾ, ಇಂತಹ ಪ್ರಶ್ನೆಗಳಿಂದ ನಾವು ಆಗಾಗ ಆತ್ಮಾವಲೋಕನ ಮಾಡಿಕೊಂಡರೆ ಒಳಿತು ಎಂದು ಹೇಳಿದರು.

ಸಮಿತಿ ಅಧ್ಯಕ್ಷ ಡಾ.ಕೋ.ವೆಂ. ರಾಮಕೃಷ್ಣೇಗೌಡ ಮಾತನಾಡಿ, ಕನ್ನಡ ಭಾಷೆ, ಕನ್ನಡಿಗರಿಂದ ದೂರವಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದ್ದು, ನಮ್ಮಲ್ಲಿನ ಸ್ವಾಭಿಮಾನ ಜಾಗೃತಿಯಾದರೆ ಮಾತ್ರ, ಎಲ್ಲಾ ವಲಯಗಳಲ್ಲಿ ಕನ್ನಡ ಉಳಿಸಿಕೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿ.ವಿಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಗಂಗಾಧರ್, ಬಿಬಿಎಂಪಿ ಮಾಜಿ ಸದಸ್ಯ ಎ.ಹೆಚ್.ಬಸವರಾಜ್, ಕ.ಕೈ.ವಾ.ಕನ್ನಡ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಎಂ.ತಿಮ್ಮಯ್ಯ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News