ಬಾಗಿಲು ಮುಚ್ಚಲು ಮುಂದಾದ ಕತರ್ ನಲ್ಲಿರುವ ಭಾರತೀಯ ಶಾಲೆ: 2,400 ವಿದ್ಯಾರ್ಥಿಗಳು ಆತಂಕದಲ್ಲಿ

Update: 2019-10-31 10:24 GMT

ಕತರ್, ಅ.31: ಕತರ್ ನಲ್ಲಿರುವ ದೋಹಾ ಮಾಡರ್ನ್ ಇಂಡಿಯನ್ ಸ್ಕೂಲ್  ಬುಧವಾರ ತನ್ನೆಲ್ಲಾ ವಿದ್ಯಾರ್ಥಿಗಳ ಹೆತ್ತವರಿಗೆ ಸಂದೇಶ ಕಳುಹಿಸಿ, ಪ್ರಸಕ್ತ ಶೈಕ್ಷಣಿಕ ವರ್ಷ (2019-2020) ಶಾಲೆಯ ಕೊನೆಯ  ವರ್ಷವಾಗಲಿದೆ ಹಾಗೂ ಹೆತ್ತವರು ಮುಂದಿನ ಶೈಕ್ಷಣಿಕ ವರ್ಷಕ್ಕೆ ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು" ಎಂದು ಹೇಳಿರುವುದು  ಹೆತ್ತವರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.

ಈ ಶಾಲೆಯಲ್ಲಿ ಕಲಿಯುತ್ತಿರುವ 2,400ಕ್ಕೂ ಅಧಿಕ ವಿದ್ಯಾರ್ಥಿಗಳ ಪೈಕಿ ಸುಮಾರು 300 ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದಾರೆ. ಕತರ್‍ ನಲ್ಲಿ ಭಾರತೀಯ ಶಾಲೆಗಳ ಕೊರತೆಯಿರುವುದರಿಂದ ಅಲ್ಲಿರುವ ಶಾಲೆಗಳಲ್ಲಿ ದೋಹಾ ಮಾಡರ್ನ್ ಶಾಲೆಯ 2,400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹೇಗೆ ಪ್ರವೇಶ ದೊರಕಬಹುದು ಎಂಬ ಕುರಿತಂತೆ ಹೆತ್ತವರು ಚಿಂತಿತರಾಗಿದ್ದಾರೆ.

ಮುಖ್ಯವಾಗಿ 9ನೇ ಮತ್ತು 11ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಸಿಬಿಎಸ್‍ಇ ಪಠ್ಯಕ್ರಮದಂತೆ ಶಿಕ್ಷಣ ಪಡೆಯುತ್ತಿರುವುದರಿಂದ  ಮುಂದಿನ ವರ್ಷ ಅವರನ್ನು ಯಾವ ಶಾಲೆಗೆ ಸೇರಿಸುವುದೆಂದು ಹೆತ್ತವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

"ವಿದ್ಯಾರ್ಥಿಗಳ ಹೆತ್ತವರು ವಾಟ್ಸ್ಯಾಪ್ ಗ್ರೂಪ್ ಒಂದನ್ನು ರಚಿಸಿದ್ದು ದೋಹಾದಲ್ಲಿನ ಭಾರತೀಯ ದೂತಾವಾಸ ಕಚೇರಿಗೆ ಭೇಟಿ ಕೊಡಲು ಹಾಗೂ ಕತರ್‍ನ ಉನ್ನತ ಶಿಕ್ಷಣಾಧಿಕಾರಿಯನ್ನು ಭೇಟಿಯಾಗಿ ತಮ್ಮ ಅಹವಾಲನ್ನು ಮಂಡಿಸಲು ನಿರ್ಧರಿಸಿದ್ದಾರೆ'' ಎಂದು ಉಡುಪಿ ಮೂಲದ ಉದ್ಯಮಿ ಹಾಗೂ ಈ ಶಾಲೆಯ ವಿದ್ಯಾರ್ಥಿಯ ತಂದೆಯಾಗಿರುವ ಕತರ್ ನಿವಾಸಿ ಫೈಝಲ್ ಜಿ. ಹೇಳಿದ್ದಾರೆ.

ಶಾಲೆಯ ಪ್ರಾಂಶುಪಾಲರು  ಯಾವುದೇ ಹೇಳಿಕೆ ನೀಡಿಲ್ಲ ಹಾಗೂ  ಯಾರನ್ನೂ ಭೇಟಿಯಾಗಲು ನಿರಾಕರಿಸಿದ್ದಾರೆನ್ನಲಾಗಿದೆ.

ಆರ್ಥಿಕ ಅಡಚಣೆಯಿಂದ ಶಾಲೆ ಈ ನಿರ್ಧಾರ ಕೈಗೊಂಡಿದೆ ಎಂದು ಉಪಪ್ರಾಂಶುಪಾಲ ಮತ್ತು ಸಂಸ್ಥೆಯ ಪಿಆರ್‍ಒ ಮೂಲಕ ತಿಳಿದು ಬಂತು ಎಂದು ಫೈಝಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News