ಕನ್ನಡ ನೆಲ-ಜಲ-ಭಾಷೆಯ ಹಿರಿಮೆ ಎತ್ತಿ ಹಿಡಿದ ವರದಿಗಳು

Update: 2019-10-31 18:37 GMT

ಕನ್ನಡ-ಕನ್ನಡಿಗ-ಕರ್ನಾಟಕಗಳಿಗೆ ಸಂಬಂಧಿಸಿದಂತೆ ಸಾಕಷ್ಟು ವರದಿಗಳು ಬಂದಿವೆ. ಕನ್ನಡ ನಾಡನ್ನು ಕಟ್ಟುವಲ್ಲಿ, ಕನ್ನಡಪರವಾದ ವಿವಿಧ ಚಳವಳಿಗಳು ಬೆಳೆಯುವಲ್ಲಿ ಈ ವರದಿಗಳ ಪಾತ್ರ ಬಹುದೊಡ್ಡದು. ಕೆಲವು ವರದಿಗಳು ಕನ್ನಡಿಗರಲ್ಲಿ ಸಂಚಲನವನ್ನು ಉಂಟು ಮಾಡಿದ್ದೂ ಇದೆ. ಗೋಕಾಕ್ ವರದಿ, ಮಹಿಷಿ ವರದಿ, ಮಹಾಜನ್ ವರದಿ, ನಂಜುಂಡಪ್ಪ ವರದಿ ಹೀಗೆ ಆಗಾಗ ಮಾಧ್ಯಮಗಳಲ್ಲಿ ಪ್ರಸ್ತಾಪವಾಗುವ ವರದಿಗಳಲ್ಲದೆ ನಾಡು ನುಡಿಗೆ ಸಂಬಂಧಿಸಿದಂತೆ ಇನ್ನಷ್ಟು ಮುಖ್ಯ ವರದಿಗಳಿವೆ. ಕರ್ನಾಟಕ ಏಕೀಕರಣಕ್ಕೆ ಸಂಬಂಧಿಸಿದಂತೆಯೇ ಐದಾರು ವರದಿಗಳಿವೆ. ಆಡಳಿತ ಭಾಷೆಗೆ ಸಂಬಂಧಿಸಿದಂತೆ 1967ರಲ್ಲಿ ಮಾಸ್ತಿ ವೆಂಕಟೇಶ ಐಯ್ಯಂಗಾರ್ ಸಮಿತಿ ವರದಿಕೊಟ್ಟಿದೆ ಎಂಬ ಉಲ್ಲೇಖವಿದೆ. ಆದರೆ ಅದು ಉಪಲಬ್ದವಿಲ್ಲ. ವಿಪರ್ಯಾಸವೆಂದರೆ, ಕನ್ನಡ ನೆಲ ಜಲಕ್ಕೆ ಸಂಬಂಧಿಸಿದ ಲವು ವರದಿಗಳು ಇಂಗ್ಲಿಷ್‌ನಲ್ಲಿವೆ.

ಇರುವುದರಲ್ಲಿ ನಂಜುಂಡಪ್ಪ ವರದಿ ಬೃಹತ್ ಗಾತ್ರದ್ದು. ಇದು ‘ಪ್ರಾದೇಶಿಕ ಅಸಮತೋಲನ ನಿವಾರಣೆ’ಗೆ ಸಂಬಂಧಿಸಿರುವುದು. 1,500 ಪುಟಗಳ ವರದಿ ಇದು. ಮಹಾಜನ್ ವರದಿ 500 ಪುಟಗಳಿವೆ. ಮಹಿಷಿ ವರದಿ, ಬರಗೂರು ನೇತೃತ್ವದ ಗಡಿ ವರದಿಗಳ ಗಾತ್ರವೂ ಸಣ್ಣದೇನಲ್ಲ. ಕೆಲವು ವರದಿಗಳ ಸಾರಗಳನ್ನು ಸಂಗ್ರಹಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಯಾವ ಹುದ್ದೆಗಳಲ್ಲಿ ಈಗ ಇರುವ ಕನ್ನಡಿಗರ ಪ್ರಮಾಣ ಕಡಿಮೆ ಇದೆಯೋ ಅಂತಹ ಹುದ್ದೆಗಳಿಗೆ ಕನ್ನಡಿಗರ ಸಂಖ್ಯೆ ನಿರ್ದಿಷ್ಟ ಪ್ರಮಾಣ ತಲುಪುವ ತನಕ ಎಲ್ಲ ಖಾಲಿ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು, ರಾಜ್ಯ ಸರಕಾರಿ ವಲಯದ ಉದ್ಯಮಗಳಲ್ಲಿ ಉನ್ನತ ಮಟ್ಟದ ತಾಂತ್ರಿಕ ಅರ್ಹತೆಯುಳ್ಳ ಅಭ್ಯರ್ಥಿಗಳು ದೊರೆಯದೇ ಇರುವ ಹುದ್ದೆಗಳನ್ನು ಬಿಟ್ಟು ಇನ್ನುಳಿದ ಎಲ್ಲಾ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು, ಖಾಸಗಿ ಉದ್ಯಮಗಳು ರಾಜ್ಯ ಸರಕಾರದಿಂದ ನೆಲ, ಜಲ, ವಿದ್ಯುತ್ ಮುಂತಾದ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ ಅವುಗಳ ಮೇಲೆ ಒತ್ತಡ ತರಬೇಕು, ಉದ್ಯಮಗಳಲ್ಲಿ ಉನ್ನತ ಮಟ್ಟದ ಆಡಳಿತ ಹುದ್ದೆಗಳನ್ನು ಅವಶ್ಯ ಬಿದ್ದಲ್ಲಿ ಎಲ್ಲಾ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸುವಂತೆ ಕಡ್ಡಾಯ ಮಾಡಬೇಕು. ಹೀಗೆ...ಕನ್ನಡಿಗರ ಪರವಾಗಿ ಮಹತ್ವದ ಶಿಫಾರಸುಗಳನ್ನು ಮಾಡಿದ ಡಾ. ಸರೋಜಿನಿ ಮಹಿಷಿ ವರದಿಯಿನ್ನೂ ಅನುಷ್ಠಾನಗೊಂಡೇ ಇಲ್ಲ.

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವರದಿ:

1952ರಲ್ಲಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಮುಂದಿನ 10 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸ, ಸುಧಾರಣೆ, ವಿಸ್ತರಣೆಗಳನ್ನು ರಾಜ್ಯದ ಆರ್ಥಿಕ ಸಂಪನ್ಮೂಲದ ಮಿತಿಯಲ್ಲಿ ಜನರ ಅಗತ್ಯ, ಆಶೋತ್ತರಗಳನ್ನು ಆಗು ಮಾಡಲು ಶಿಕ್ಷಣ ಇಲಾಖೆಯು ಕಾರ್ಯಕ್ರಮಗಳನ್ನು ರೂಪಿಸಲು ‘ಮೈಸೂರು ಶಿಕ್ಷಣ ಸುಧಾರಣಾ ಸಮಿತಿ’ಯನ್ನು ರಚಿಸಿದರು. ಸ್ವತಃ ಕೆಂಗಲ್ ಹನುಮಂತಯ್ಯನವರೇ ಸಮಿತಿಯ ಅಧ್ಯಕ್ಷರಾಗಿದ್ದರು. ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದ ಜೆ. ಬಿ. ಮಲ್ಲಾರಾಧ್ಯರು ಕಾರ್ಯದರ್ಶಿಯಾಗಿದ್ದರು. ಅಂದಿನ ಶಿಕ್ಷಣ ಸಚಿವ ಎ. ಜಿ. ರಾಮಚಂದ್ರರಾವ್ ಉಪಾಧ್ಯಕ್ಷರಾಗಿದ್ದ ಸಮಿತಿಯಲ್ಲಿ ಶಿಕ್ಷಣ ತಜ್ಞರು, ನ್ಯಾಯವಾದಿಗಳು, ಸಾಹಿತಿಗಳು ಸೇರಿದಂತೆ 39 ಸದಸ್ಯರಿದ್ದರು. ಸಮಿತಿಗೆ 13 ಅಂಶಗನ್ನು ಪರಿಶೀಲಿಸಲು ಸೂಚಿಸಲಾಗಿತ್ತು.

ಸಮಿತಿಯು ವ್ಯಾಪಕವಾಗಿ ಅಧ್ಯಯನ ನಡೆಸಿ 1953, ಫೆಬ್ರವರಿ 26ರಂದು 495 ಪುಟಗಳ ಸುದೀರ್ಘವಾದ ವರದಿಯನ್ನು ಸಲ್ಲಿಸಿತು. ಅದೊಂದು ಅಪೂರ್ವ ದಾಖಲೆ. ವರದಿಯಲ್ಲಿ ಶಾಲಾ ಶಿಕ್ಷಣ, ತಾಂತ್ರಿಕ ಶಿಕ್ಷಣ, ವಿಶ್ವವಿದ್ಯಾನಿಲಯದ ಶಿಕ್ಷಣ, ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ 17 ಅಧ್ಯಾಯಗಳಿವೆ. ಭಾಷಾ ಕಲಿಕೆ, ಶಿಕ್ಷಣ ಮಾಧ್ಯಮದ ಕುರಿತಂತೆಯೂ ಶಿಫಾರಸು ಮಾಡಿದೆ.

ಭಾಷಾ ಸಮಿತಿಯ ವರದಿ- ಡಾ. ಗೋಕಾಕ್ ಸಮಿತಿ ವರದಿ:

ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಯಿಂದ ಕೈ ಬಿಡಬೇಕು ಮತ್ತು ಕನ್ನಡ ಭಾಷೆಯನ್ನು ಕನ್ನಡೇತರರು ಕಡ್ಡಾಯವಾಗಿ ಅಭ್ಯಾಸ ಮಾಡುವಂತೆ ವ್ಯವಸ್ಥೆ ಮಾಡಬೇಕೆಂಬ ಒತ್ತಾಯವನ್ನು ಸರಕಾರ ಪರಿಶೀಲಿಸಿ 1979ರ ಅಕ್ಟೋಬರ್‌ನಲ್ಲಿ ಒಂದು ಸರಕಾರಿ ಆಜ್ಞೆ ಹೊರಡಿಸಿತು. ಆ ಆಜ್ಞೆಯಂತೆ ಸಂಸ್ಕೃತ ಪ್ರಥಮ ಭಾಷೆಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡು ತೃತೀಯ ಭಾಷೆಯ ಸ್ಥಾನ ಪಡೆಯಿತು. ಇದರ ಪರ, ವಿರೋಧ ಚರ್ಚೆ ಅಂತಿಮವಾಗಿ ಗೋಕಾಕ್ ಸಮಿತಿ ರಚನೆಗೆ ಕಾರಣವಾಯಿತು. ಡಾ. ವಿ.ಕೃ. ಗೋಕಾಕ್ ಸಮಿತಿಯ ಅಧ್ಯಕ್ಷರಾಗಿದ್ದರು. ಜಿ. ನಾರಾಯಣ, ಎಸ್. ಕೆ. ರಾಮಚಂದ್ರರಾವ್, ತ.ಸು. ಶಾಮರಾಯ, ಕೆ. ಕೃಷ್ಣಮೂರ್ತಿ ಮೊದಲಾದ ಮಹನೀಯರು ಸದಸ್ಯರಾಗಿದ್ದರು.

ಸಮಿತಿಗೆ ಪರಿಶೀಲನೆಗಾಗಿ ವಹಿಸಿದ ವಿಷಯಗಳು:

1. ಸಂಸ್ಕೃತವು ಶಾಲಾ ಪಠ್ಯವಸ್ತುವಿನಲ್ಲಿ ಅಭ್ಯಾಸದ ವಿಷಯವಾಗಿ ಉಳಿಯಬೇಕೆ?

2. ಉಳಿಯಬೇಕಾದರೆ ಕನ್ನಡಕ್ಕೆ ಪರ್ಯಾಯವಾಗದೆ ಉಳಿಸುವುದು ಹೇಗೆ?

3. ತ್ರಿಭಾಷಾ ಸೂತ್ರದಂತೆ ಕನ್ನಡ ಕಡ್ಡಾಯ ಮಾಡಿ ಉಳಿದೆರಡು ಭಾಷೆಗಳ ಆಯ್ಕೆಯ ಸ್ವಾತಂತ್ರವನ್ನು ವಿದ್ಯಾರ್ಥಿಗಳಿಗೆ ಬಿಡುವುದು ಸೂಕ್ತವೆ?

ಸಮಿತಿಯನ್ನು ರಚಿಸಿದ ಸರಕಾರಿ ಆಜ್ಞೆಯಂತೆ ಮೂರು ತಿಂಗಳ ಅವಧಿಯಲ್ಲಿ ಸರಕಾರಕ್ಕೆ ವರದಿ ಲ್ಲಿಸುವಂತೆ ಆದೇಶ ನೀಡಲಾಗಿತ್ತು.

ಸಮಿತಿಯ ಸಲಹೆಯ ಸಾರಾಂಶ ಕೆಳಗಿನಂತಿದೆ.

1. 1981-82ನೆಯ ಶೈಕ್ಷಣಿಕ ವರ್ಷದಿಂದಲೇ ಕನ್ನಡ ಭಾಷೆಯನ್ನು ಏಕೈಕ ಪ್ರಥಮ ಭಾಷೆಯನ್ನಾಗಿ ಮಾಡಿ ಅದು ಕಡ್ಡಾಯ ವಿಷಯವಾಗಬೇು. ಅದಕ್ಕೆ 150 ಅಂಕಗಳಿರಬೇಕು.

2. ಕೆಳಗೆ ಕಾಣಿಸಿದ ಭಾಷೆಗಳಲ್ಲಿ ಒಂದನ್ನು ದ್ವಿತೀಯ ಭಾಷೆಯನ್ನಾಗಿ ಅಭ್ಯಸಿಸಬಹುದು. ಅದಕ್ಕೆ 100 ಅಂಕಗಳು. ತಮಿಳು, ತೆಲುಗು, ಮಲಯಾಳಂ, ಮರಾಠಿ, ಗುಜರಾತಿ, ಹಿಂದಿ ಹೀಗೆ ಆಧುನಿಕ ಭಾಷೆಗಳಲ್ಲಿ ಒಂದು. ಇಲ್ಲವೇ ಇಂಗ್ಲಿಷ್. ಇಲ್ಲವೇ, ಸಂಸ್ಕೃತ, ಅರೇಬಿಕ್, ಪರ್ಶಿಯನ್, ಲ್ಯಾಟಿನ್, ಗ್ರೀಕ್ ಪ್ರಾಚೀನ ಭಾಷೆಗಳು.

3.ಒಂದು ತೃತೀಯ ಭಾಷೆಯನ್ನೂ ತೆಗೆದುಕೊಳ್ಳಲಾಗುವುದು. ಅದಕ್ಕೆ 50 ಅಂಕಗಳು.

4. ತೃತೀಯ ಭಾಷೆ ಪರೀಕ್ಷೆಗೆ ಕಡ್ಡಾಯ ವಿಷಯವಾಗಿದೆ.

ಡಾ. ಎಚ್. ನರಸಿಂಹಯ್ಯ ವರದಿ(ಪ್ರಾಥಮಿಕ ಶಾಲಾ ಶಿಕ್ಷಣ):

 ರಾಜ್ಯದಲ್ಲಿ ಸುಮಾರು 500 ಆಂಗ್ಲ ಮಾಧ್ಯಮ ಶಾಲೆಗಳು ಪ್ರಸ್ತುತ ಅನಧಿಕೃತವಾಗಿ ನಡೆಯುತ್ತಿವೆ. ಇಂತಹ ಕೆಲವು ಆಂಗ್ಲ ಮಾಧ್ಯಮ ಶಾಲೆಗಳು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದನ್ವಯ ಅನುಮತಿಗಾಗಿ ಮೊಕದ್ದಮೆಗಳನ್ನೂ ಹೂಡಿವೆ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಅರ್ಜಿದಾರರ ಮನವಿಯನ್ನು ಸರಕಾರ ಪರಿಶೀಲಿಸಬೇಕು ಎಂದು ಆದೇಶವನ್ನೂ ನೀಡಿವೆ. ಮೇಲಿನ ಎಲ್ಲ ಸಮಸ್ಯೆಗಳ ನಿವಾರಣೆಯ ದೃಷ್ಟಿಯಿಂದ, ಪ್ರಸ್ತುತ ಭಾಷಾ ನೀತಿಗೆ ಧಕ್ಕೆಯಾಗದಂತೆ ಒಂದು ನೀತಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ದೃಷ್ಟಿಯಿದ ಶಿಕ್ಷಣ ತಜ್ಞರು ಹಾಗೂ ಬುದ್ಧಿ ಜೀವಿಗಳನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿತು. ಸರಕಾರವು ತನ್ನ ಮೇಲಿನ ಆದೇಶದಲ್ಲಿ ಈ ರೀತಿ ತಿಳಿಸಿದೆ. ‘‘ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದ ಅನಧಿಕೃತ ಆಂಗ್ಲ ಪ್ರಾಥಮಿಕ ಶಾಲೆಗಳಿಂದ ಉದ್ಭವಿಸಿರುವ ಸಮಸ್ಯೆಗಳಿಗೆ ಹಾಗೂ ಪ್ರಾಥಮಿಕ ಶಾಲೆಯ ಮಾಧ್ಯಮದ ಬಗ್ಗೆ ಪರಿಶೀಲನೆ ನಡೆಸಿ ಪರಿಹಾರಗಳನ್ನು ಸೂಚಿಸಿ ವರದಿಯನ್ನು ನೀಡುವ ಸಲುವಾಗಿ ಸಮಿತಿ ರಚಿಸಲು ಸೂಚಿಸಲಾಗಿದೆ’’. ಡಾ. ಎಚ್. ನರಸಿಂಹಯ್ಯ ಈ ಸಮಿತಿಯ ಅಧ್ಯಕ್ಷರಾಗಿದ್ದರು.

ಶಿಕ್ಷಣ ತಜ್ಞರ ಸಲಹಾ ಸಮಿತಿ ವರದಿ ಅಥವಾ ಚಂಪಾ ವರದಿ:

ಪ್ರಾಥಮಿಕ ಶಿಕ್ಷಣವನ್ನು ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣ ಎಂಬ ವಿಂಗಡನೆ ಆಧರಿಸಿ, ಖಾಸಗಿ ಶಾಲೆಗಳಲ್ಲಿ 5ನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿಗಳಿಗೆ ಅವಕಾಶ ಮಾಡುವ ನೀತಿಯನ್ನು ಸರಕಾರ ಆರಂಭಿಸಿತು. ಅದರ ವಿಸ್ತರಣೆಯಾಗಿ ಸರಕಾರಿ ಶಾಲೆಗಳಲ್ಲಿ 1998-99ನೇ ಸಾಲಿನಿಂದ ಆಂಗ್ಲ ಮಾಧ್ಯಮ ತರಗತಿಗಳನ್ನು ನಡೆಸಲು ಹೊರಟಿತು. ಇದರ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದವು. ಈ ಹಿನ್ನೆಲೆಯಲ್ಲಿ 1998ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಮಾಲೋಚನಾ ಸಭೆ ನಡೆಯಿತು. ಬಳಿಕ 12 ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ, ಪ್ರೊ. ಚಂದ್ರಶೇಖರ ಪಾಟೀಲರನ್ನು ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಯಿತು. ಈ ಸಮಿತಿ ಕನ್ನಡದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿ ಹಲವು ಮಹತ್ವದ ಶಿಫಾರಸುಗಳನ್ನು ಮಾಡಿತು.

ಡಾ. ಹಿ. ಚಿ. ಬೋರಲಿಂಗಯ್ಯ ಸಮಿತಿ ವರದಿ:

ಇದು ವೃತ್ತಿ ಶಿಕ್ಷಣದಲ್ಲಿ ಅಂದರೆ ಇಂಜಿನಿಯರಿಂಗ್, ಮೆಡಿಕಲ್, ಕಾನೂನು ಮತ್ತು ಕೃಷಿ ಇತ್ಯಾದಿ ವಿಭಾಗಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬೋಧಿಸುವ ಕುರಿತಾಗಿದೆ. 13-5-2015ರ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯ ತೀರ್ಮಾನದಂತೆ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಡಾ. ಹಿ. ಚಿ. ಬೋರಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ವೃತ್ತಿ ಶಿಕ್ಷಣದಲ್ಲಿ ಕಡ್ಡಾಯವಾಗಿ ಕನ್ನಡ ಬೋಧಿಸುವ ಕುರಿತಂತೆ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯು ಕನ್ನಡ ಭಾಷಾ ಬೋಧನೆಯನ್ನು ಕಡ್ಡಾಯಗೊಳಿಸಬೇಕು ಎಂದು ಶಿಫಾರಸು ಮಾಡಿತು. ಸುಮಾರು ಹತ್ತು ಮಹತ್ವದ ಶಿಾರಸುಗಳನ್ನು ಈ ಸಮಿತಿ ಮಾಡಿತು.

ಒಡೆಯರ್ ವರದಿ(ಕನ್ನಡ ವಿಶ್ವವಿದ್ಯಾನಿಲಯ):

ಕನ್ನಡ ವಿಶ್ವವಿದ್ಯಾನಿಲಯವನ್ನು ಆರಂಭಿಸುವ ಅಗತ್ಯದ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ನಾಯಕತ್ವದ ಸರಕಾರವು ಇಂತಹ ಒಂದು ವಿವಿಯನ್ನು ಆರಂಭಿಸಬೇಕೆಂಬ ತಾತ್ವಿಕ ಆಶಯವನ್ನು ಒಪ್ಪಿಕೊಂಡದ್ದಲ್ಲದೆ, 1985ರ ಡಿಸೆಂಬರ್ 31ರಂದು ಕರ್ನಾಟಕ ವಿವಿ ಮಾಜಿ ಕುಲಪತಿಗಳಾದ ಎಸ್. ಎಸ್. ಒಡೆಯರ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ನೇಮಿಸಿತು. ಕನ್ನಡ ವಿಶ್ವವಿದ್ಯಾನಿಲಯದ ಕಾರ್ಯ, ಸ್ವರೂಪ, ಕಟ್ಟಡ ಸೇರಿದಂತೆ ಅದರ ಒಟ್ಟಂದದ ಕುರಿತಂತೆ ಸುದೀರ್ಘ ಶಿಫಾರಸನ್ನು ಈ ಸಮಿತಿ ಮಾಡಿತು.

ಕನ್ನಡ ಶಾಸ್ತ್ರೀಯ ಭಾಷಾ ವರದಿ:

ಶಾಸ್ತ್ರೀಯ ಭಾಷೆಯಾಗಿ ಕನ್ನಡದ ಕುರಿತಂತೆ ತಜ್ಞರು ಕರ್ನಾಟಕ ಸರಕಾರಕ್ಕೆ ಒಪ್ಪಿಸಿದ ವರದಿ. ಡಾ. ಎಂ. ಚಿದಾನಂದ ಮೂರ್ತಿ ಮತ್ತು ಪ್ರೊ. ಎಲ್. ಎಸ್. ಶೇಷಗಿರಿರಾವ್ ತಜ್ಞರ ಸಮಿತಿಯ ಪ್ರಮುಖರು. ಇವರಿಗೆ ನೆರವಾಗಲು ಡಾ. ಬಿ. ಬಿ. ರಾಜಪುರೋಹಿತ ಮತ್ತು ಪ್ರೊ. ಎನ್. ಎಸ್. ತಾರಾನಾಥ್ ಇಬ್ಬರು ವಿದ್ವಾಂಸರಿದ್ದರು.

ಕನ್ನಡ ತಂತ್ರಾಂಶ ವರದಿ- ಚಿದಾನಂದ ಗೌಡ ವರದಿ:

ಈ ವರದಿಯ ಸಮಿತಿಯ ನೇತೃತ್ವವನ್ನು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿದಾನಂದ ಗೌಡರು ವಹಿಸಿದ್ದರು. ಚಂದ್ರಶೇಖರ ಕಂಬಾರ, ಗಣಕ ತಜ್ಞ ಅನಂತ ಕೊಪ್ಪರಂ, ಕನ್ನಡ ಗಣಕ ಪರಿಷತ್‌ನ ಕಾರ್ಯದರ್ಶಿ ಜಿ. ಎನ್. ನರಸಿಂಹ ಮೂರ್ತಿ, ಪತ್ರಕರ್ತ ಎನ್. ಎ. ಎಂ. ಇಸ್ಮಾಯಿಲ್, ಡಾ. ಯು.ಬಿ. ಪವನಜ ಮೊದಲದವರು ಈ ಸಮಿತಿಯ ಸದಸ್ಯರಾಗಿದ್ದರು. ಆಸ್ಕಿ ಆಧಾರಿತ ಕನ್ನಡ ತಂತ್ರಾಂಶ, ಫಾಂಟ್ ಪರಿವರ್ತಕಗಳು, ಯುನಿಕೋಡ್ ಆಧಾರಿತ ಕನ್ನಡ ತಂತ್ರಾಂಶ, ಅಕ್ಷರ ಸಂಸ್ಕರಣೆ ಇಂಜಿನ್, ಓಪನ್‌ಟೈಪ್ ಫಾಂಟ್, ಡಿಟಿಪಿಗೆ ಅಗತ್ಯವಿರುವ ತಂತ್ರಾಂಶಗಳು, ವಾಣಿಜ್ಯಕ ಆನ್ವಯಿಕ ತಂತ್ರಾಂಶಗಳು ....ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿ ಈ ಸಮಿತಿ ಶಿಫಾರಸುಗಳನ್ನು ಮಾಡಿದೆ.

ಕೆ. ನಾರಾಯಣ ಸ್ವಾಮಿ ವರದಿ:

1-11-1970ರಿಂದ ರಾಜ್ಯದ ಉಪ ವಿಭಾಗದ ಮಟ್ಟದ ಎಲ್ಲ ಕಾರ್ಯಾಲಯಗಳಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸಲು ಹಾಗೂ ಮುಂದೆ ಕ್ರಮೇಣ ಕನ್ನಡವನ್ನು ಆಡಳಿತದ ಎಲ್ಲ ಹಂತಗಳಲ್ಲಿ ಜಾರಿಗೆ ತರಲು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಲು ಸರಕಾರವು 5-8-1970ರಲ್ಲಿ ಕೆ. ನಾರಾಯಣ ಸ್ವಾಮಿಯವರ ನೇತೃತ್ವದಲ್ಲಿ ಕನ್ನಡ ಭಾಷಾ ಸಮಿತಿಯನ್ನು ನೇಮಿಸಿತು.

ಡಾ. ಸರೋಜಿನಿ ಮಹಿಷಿ ಸಮಿತಿ ವರದಿ:

ಭಾಷಾವಾರು ಪ್ರಾಂತ್ಯಗಳ ವಿಂಗಡನೆಯಾಗಿ ಹಲವು ದಶಕಗಳು ಸಂದರೂ ಕನ್ನಡಿಗರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯಲ್ಲಿ ನಿರೀಕ್ಷಿಸಿದಂತೆ ಪರಿವರ್ತನೆಯಾಗದ ಹಿನ್ನೆಲೆಯಲ್ಲಿ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ ಡಾ. ಸರೋಜಿನಿ ಮಹಿಷಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ಅದು ಆಮೂಲಾಗ್ರ ಅಧ್ಯಯನ ಮಾಡಿ, 57 ಶಿಫಾರಸುಗಳನ್ನು ಮಾಡಿತು. ಯಾವ ಹುದ್ದೆಗಳಲ್ಲಿ ಈಗ ಇರುವ ಕನ್ನಡಿಗರ ಪ್ರಮಾಣ ಕಡಿಮೆ ಇದೆಯೋ ಅಂತಹ ಹುದ್ದೆಗಳಿಗೆ ಕನ್ನಡಿಗರ ಸಂಖ್ಯೆ ನಿರ್ದಿಷ್ಟ ಪ್ರಮಾಣ ತಲುಪುವ ತನಕ ಎಲ್ಲ ಖಾಲಿ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು. ರಾಜ್ಯ ಸರಕಾರಿ ವಲಯದ ಉದ್ಯಮಗಳಲ್ಲಿ ಉನ್ನತ ಮಟ್ಟದ ತಾಂತ್ರಿಕ ಅರ್ಹತೆಯುಳ್ಳ ಅಭ್ಯರ್ಥಿಗಳು ದೊರೆಯದೇ ಇರುವ ಹುದ್ದೆಗಳನ್ನು ಬಿಟ್ಟು ಇನ್ನುಳಿದ ಎಲ್ಲಾ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು. ಖಾಸಗಿ ಉದ್ಯಮಗಳು ರಾಜ್ಯ ಸರಕಾರದಿಂದ ನೆಲ, ಜಲ, ವಿದ್ಯುತ್ ಮುಂತಾದ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ ಅವುಗಳ ಮೇಲೆ ಒತ್ತಡ ತರಬೇಕು. ಉದ್ಯಮಗಳಲ್ಲಿ ಉನ್ನತ ಮಟ್ಟದ ಆಡಳಿತ ಹುದ್ದೆಗಳನ್ನು ಅವಶ್ಯ ಬಿದ್ದಲ್ಲಿ ಎಲ್ಲಾ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸುವಂತೆ ಕಡ್ಡಾಯ ಮಾಡಬೇಕು. ಹೀಗೆ...ಕನ್ನಡಿಗರ ಪರವಾಗಿ ಮಹತ್ವದ ಶಿಫಾರಸುಗಳನ್ನು ಮಾಡಿವೆಯಾದರೂ, ಅದಿನ್ನೂ ಅನುಷ್ಠಾನಗೊಂಡೇ ಇಲ್ಲ.

ಕಸ್ತೂರಿ ರಂಗನ್ ವರದಿ:

‘ವಿಶ್ವದ ಜೀವ ವೈವಿಧ್ಯಗಳ ಕಣಜ’, ನಿತ್ಯ ಹರಿದ್ವರ್ಣ ಕಾನನದ ತವರು ಎಂದೆಲ್ಲ ಗುರುತಿಸುವ ಪಶ್ಚಿಮಘಟ್ಟ ನಾಶವಾಗುತ್ತಿದೆ ಎನ್ನುವ ಆತಂಕದ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರ 2009ರಲ್ಲಿ ಖ್ಯಾತ ವಿಜ್ಞಾನಿ ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ ರಚಿಸಿತು. ಗಾಡ್ಗೀಳ್ ವರದಿ ಬಂದ ನಂತರ ಸಮಾಜದ ವಿವಿಧ ಸ್ತರದ ಜನ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಪಶ್ಚಿಮಘಟ್ಟ ಕಾಪಾಡಲು ಅನುಸರಿಸಬೇಕಾದ ಕ್ರಮಗಳನ್ನು ಸೂಚಿಸಿದರು. ಆಗ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಡಾ. ಕಸ್ತೂರಿ ರಂಗನ್ ನೇತೃತ್ವದಲ್ಲಿ 17-8-2012ರಲ್ಲಿ ಪಶ್ಚಿಮ ಘಟ್ಟ ಉನ್ನತ ಮಟ್ಟದ ಕಾರ್ಯತಂಡವನ್ನು ಕೇಂದ್ರ ಸರಕಾರವು ರಚಿಸಿತು. ಹಲವು ವಿಜ್ಞಾನಿಗಳು, ಪರಿಸರ ತಜ್ಞರು, ಚಿಂತಕರು ಈ ಸಮಿತಿಯಲ್ಲಿದ್ದರು. ಇವಿಷ್ಟೇ ಅಲ್ಲ, ಕನ್ನಡ ನೆಲ ಜಲಕ್ಕೆ ಸಂಬಂಧಪಟ್ಟ ಇನ್ನೂ ಹತ್ತು ಹಲವು ವರದಿಗಳು ಬಂದಿವೆ. ಜಿ. ಎಸ್. ಪರಮಶಿವಯ್ಯ ವರದಿ, ಉತ್ತರ-ದಕ್ಷಿಣ ಅಭಿವೃದ್ಧಿ ಅಧ್ಯಯನ ಸಮಿತಿ ವರದಿ, ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ವರದಿ, ಭಾಷಾನ್ವಯ ರಾಜ್ಯ ರಚನೆ: ಆಯೋಗಗಳ ವರದಿಗಳು, ಗಡಿಕನ್ನಡಿಗರ ಸಮಸ್ಯೆ ಅಧ್ಯಯನ ವರದಿ, ತಾಲೂಕುಗಳ ಪುನರ್ ವಿಂಗಡನೆ-ಸಮಿತಿ ಶಿಫಾರಸುಗಳು... ಇವುಗಳಲ್ಲಿ ಮುಖ್ಯವಾದವುಗಳು.

ಆಧಾರ: ಕನ್ನಡ-ಕನ್ನಡಿಗ-ಕರ್ನಾಟಕ

ಕನ್ನಡ ಅಭಿವೃದ್ಧಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News