ಯಡಿಯೂರಪ್ಪ ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದಾರೆ: ಡಿ.ಕೆ.ಶಿವಕುಮಾರ್

Update: 2019-10-31 12:39 GMT

ಬೆಂಗಳೂರು, ಅ.3: ಕನಕಪುರಕ್ಕೆ ವೈದ್ಯಕೀಯ ಕಾಲೇಜು ನೀಡುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. 

ನಗರದಲ್ಲಿಂದು ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯ 35ನೇ ಪುಣ್ಯ ಸ್ಮರಣೆ ಹಾಗೂ ದಿ. ಸರ್ದಾರ್ ಪಟೇಲ್ ಜನ್ಮ ದಿನ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕನಕಪುರಕ್ಕೆ ವೈದ್ಯಕೀಯ ಕಾಲೇಜು ಮೀಸಲಿಲ್ಲ. ಕೇವಲ ಜಿಲ್ಲಾ ಕೇಂದ್ರಗಳಿಗೆ ಮಾತ್ರ ಎಂದು ಹೇಳಿಕೆ ನೀಡುವ ಮೂಲಕ ಬಿ.ಎಸ್.ಯಡಿಯೂರಪ್ಪ ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದಾರೆ. ಅಧಿಕಾರ ಎನ್ನುವುದು ಯಾರಿಗೂ ಶಾಶ್ವತವಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳುವ ಸಂದರ್ಭ ಬರದೇ ಇರದು ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಇರುವ ಅಸ್ಮಿತೆ, ಇತಿಹಾಸ, ಬೇರೆ ಪಕ್ಷಗಳಿಗೆ ಇಲ್ಲ. ಇದನ್ನು ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತರು ಅರ್ಥ ಮಾಡಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಜಾತಿಗಳು ಅಧಿಕಾರಕ್ಕೆ ಬರಲಿವೆ. ಕಾಂಗ್ರೆಸ್ ಸಮ ಸಮಾಜದ ಗುರಿ ಹೊಂದಿದೆ ಎಂಬುದನ್ನು ನಾಡಿನ ಜನತೆಗೆ ಅರ್ಥ ಮಾಡಿಸಬೇಕಾದ ಜವಾಬ್ದಾರಿ ಕಾರ್ಯಕರ್ತರದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕಾಂಗ್ರೆಸ್ ಮುಖಂಡರಾದ ಎಚ್.ಎಂ.ರೇವಣ್ಣ, ಎಂ.ಸಿ.ವೇಣುಗೋಪಾಲ್, ಮೋಟಮ್ಮ, ಬಿ.ಎಲ್. ಶಂಕರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News