ಟಿಪ್ಪು ವಿರೋಧಿಸುವ ಬಿಜೆಪಿ ನಾಯಕರು ಮೂರ್ಖರು: ಮಾಜಿ ಸಿಎಂ ವೀರಪ್ಪ ಮೊಯ್ಲಿ

Update: 2019-10-31 12:42 GMT

ಬೆಂಗಳೂರು, ಅ.31: ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ವೀರ ಸೇನಾನಿ ಟಿಪ್ಪು ಸುಲ್ತಾನ್ ಹೆಸರನ್ನು ಪಠ್ಯ ಕ್ರಮದಿಂದ ಅಳಿಸಲು ಮುಂದಾಗಿರುವ ಬಿಜೆಪಿ ನಾಯಕರನ್ನು ಮೂರ್ಖರೆನ್ನದೆ ಇನ್ನೇನು ಹೇಳಲು ಸಾಧ್ಯವೆಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯ 35ನೇ ಪುಣ್ಯ ಸ್ಮರಣೆ ಹಾಗೂ ದಿ.ಸರ್ದಾರ್ ಪಟೇಲ್ ಜನ್ಮ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ತಮ್ಮ ಕೃತಿಯೊಂದರಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಬರೆದಿದ್ದಾರೆ. ಹೀಗಾಗಿ ಬಿಜೆಪಿ ಕೇವಲ ದುರುದ್ದೇಶಪೂರ್ವಕವಾಗಿ ಟಿಪ್ಪು ಸುಲ್ತಾನ್ ಬಗ್ಗೆ ಜನತೆಯಲ್ಲಿ ತಪ್ಪು ಭಾವನೆ ಸೃಷ್ಟಿಸಲು ಹೊರಟಿದೆ ಎಂದು ತಿಳಿಸಿದರು.

ಟಿಪ್ಪು ಸುಲ್ತಾನ್ ಜನಪರವಾದಂತಹ ಹಲವಾರು ಯೋಜನೆಗಳನ್ನು ಕೊಟ್ಟಿದ್ದಾರೆ. ರೇಷ್ಮೆ, ಪಂಚವಾರ್ಷಿಕ ಯೋಜನೆಯನ್ನು ತಂದಿದ್ದಾರೆ. ಕೆರೆ ಕಟ್ಟೆಗಳನ್ನು ನಿರ್ಮಿಸಿ ರೈತರಿಗೆ ಆಸರೆಯಾಗಿದ್ದಾರೆ. ಹೀಗೆ ಅವರ ಸಾಧನೆಗಳು ನಮ್ಮ ಕಣ್ಣ ಮುಂದೆ ಇದ್ದರೂ ಅದನ್ನು ತಿರಸ್ಕರಿಸುವ ಮಟ್ಟಕ್ಕೆ ಬಿಜೆಪಿ ನಾಯಕರು ಇಳಿದಿರುವುದು ಶೋಚನೀಯವೆಂದು ಅವರು ಹೇಳಿದರು.

ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಯಾವತ್ತಿಗೂ ಬಿಜೆಪಿ, ಆರೆಸ್ಸೆಸ್ ಸ್ವಾತಂತ್ರಕ್ಕಾಗಿ ಹೋರಾಡಿಲ್ಲ. ಸಾವರ್ಕರ್‌ಗೆ ಹಿಂದೂ ರತ್ನ, ಆರೆಸ್ಸೆಸ್ ರತ್ನ, ಬಿಜೆಪಿ ರತ್ನ ಕೊಡಲಿ. ಬ್ರಿಟಿಷರ ಪರ ಇದ್ದವರಿಗೆ ಭಾರತ ರತ್ನವೇಕೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News