ಬೆಂಗಳೂರು: ಅನುದಾನ ಕಡಿತ, ಅಸಮರ್ಪಕ ಕಸ ವಿಲೇವಾರಿ ಖಂಡಿಸಿ ಪ್ರತಿಭಟನೆ

Update: 2019-10-31 12:52 GMT

ಬೆಂಗಳೂರು, ಅ.31: ಕಾಂಗ್ರೆಸ್, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನೀಡಿದ ಅನುದಾನವನ್ನು ಬಿಜೆಪಿ ಸರಕಾರ ಕಡಿತಗೊಳಿಸಿದೆ ಎಂದು ಆರೋಪಿಸಿ ಹಾಗೂ ನಗರ ವ್ಯಾಪ್ತಿಯಲ್ಲಿ ಅಸಮರ್ಪಕ ಕಸ ವಿಲೇವಾರಿಯನ್ನು ಖಂಡಿಸಿ ಶಾಸಕ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಬಿಬಿಎಂಪಿ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆ ಕೇಂದ್ರ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.

ಕಸ ವಿಲೇವಾರಿ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚಲು ವಿಫಲವಾಗಿರುವ ಪಾಲಿಕೆ ಆಡಳಿತ ಮತ್ತು ಬಿಜೆಪಿ ಸರಕಾರ ಒಂದು ಕ್ಷಣವೂ ಅಧಿಕಾರದಲ್ಲಿ ಕೂರಲು ಅರ್ಹತೆಯನ್ನು ಹೊಂದಿಲ್ಲ. ಇವರ ದುರಾಡಳಿತದಿಂದಾಗಿ ನಗರದ ಜನತೆ ಪ್ರತಿದಿನ ಸಂಕಷ್ಟ ಎದುರಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ ಸರಕಾರ ಬಂದು 6 ತಿಂಗಳಾದರೂ ನಗರದ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಇದರಿಂದ ಜನತೆ ಸಮಸ್ಯೆಗಳ ನಡುವೆಯೇ ಜೀವನದೂಡುವಂತಾಗಿದೆ. ಇವೆಲ್ಲವುಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರೊಂದಿಗೆ ಚರ್ಚಿಸಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಿಗೆ ನೀಡಿದ ಅನುದಾನವನ್ನು ಈಗ ಕಡಿತಗೊಳಿಸಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹಂಚಲಾಗಿದೆ. ಹೀಗೆ ಪಕ್ಷಪಾತ ಧೋರಣೆ ಮಾಡುವುದರಿಂದ ಬೆಂಗಳೂರು ಅಭಿವೃದ್ಧಿಯಾಗುತ್ತದೆಯೆಂದು ಬಿಜೆಪಿ ನಾಯಕರು ಕನಸು ಕಾಣುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ಮಾಜಿ ಮೇಯರ್ ಗಳಾದ ಮಂಜುನಾಥರೆಡ್ಡಿ, ಸಂಪತ್‌ ರಾಜ್, ಪದ್ಮಾವತಿ, ಮಾಜಿ ಆಡಳಿತ ಪಕ್ಷದ ನಾಯಕರಾದ ಸತ್ಯನಾರಾಯಣ, ಶಿವರಾಜ್ ಹಾಗೂ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹಳೆ ಕಲ್ಲು, ಹೊಸ ಬಿಲ್ಲು

ಬಿಜೆಪಿ ಸರಕಾರದ ಅವಧಿಯಲ್ಲಿ 11 ಕಾಂಗ್ರೆಸ್ ಕ್ಷೇತ್ರಗಳ ಶಾಸಕರಿಗೆ ನೀಡಿರುವ ಅನುದಾನ ಕೇವಲ 943 ಕೋಟಿ ರೂ. ಆಗಿದೆ. ಅದೇ ಸಂದರ್ಭದಲ್ಲಿ 11 ಬಿಜೆಪಿ ಕ್ಷೇತ್ರಗಳ ಶಾಸಕರಿಗೆ 3,499 ಕೋಟಿ ಅನುದಾನವನ್ನು ನೀಡಲಾಗಿದೆ. ಬಿಜೆಪಿ ಆಡಳಿತದಲ್ಲಿ ಹಳೆ ಕಲ್ಲು, ಹೊಸ ಬಿಲ್ಲು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

-ರಾಮಲಿಂಗಾರೆಡ್ಡಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News