ಪ್ರಜಾಪ್ರಭುತ್ವ-ಮಾನವೀಯ ಹಕ್ಕುಗಳ ರಕ್ಷಣೆಗೆ ಸಂಘರ್ಷ ಅಗತ್ಯ: ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಕೋಹಿವಾಲ್

Update: 2019-10-31 16:26 GMT

ಬೆಂಗಳೂರು, ಅ.31: ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಮಾನವೀಯ ಹಕ್ಕುಗಳ ರಕ್ಷಣೆಗಾಗಿ ಸಂಘರ್ಷ ಮಾಡಬೇಕಾದ ಅಗತ್ಯವಿದೆ. ಸಂವಿಧಾನದ 370ನೇ ವಿಧಿ ಅನ್ವಯ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ ಅಲ್ಲಿನ ಜನರಲ್ಲಿ ಆಕ್ರೋಶ ಮನೆ ಮಾಡಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಸೀತಾರಾಮ್ ಕೋಹಿವಾಲ್ ತಿಳಿಸಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಸಭಾಂಗಣದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಆಯೋಜಿಸಿದ್ದ ‘ಕಾಶ್ಮೀರ-ಜನರ ಹಕ್ಕುಗಳನ್ನು ಪುನಃ ಸ್ಥಾಪಿಸುವುದು’ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು.

370ನೇ ವಿಧಿ ರದ್ದುಪಡಿಸುವಾಗ ಸಾಂವಿಧಾನಿಕವಾದ ಪ್ರಕ್ರಿಯೆಗಳನ್ನು ಪಾಲಿಸಲಿಲ್ಲ, ಕಾಶ್ಮೀರದ ಜನತೆಯ ಭಾವನೆಗಳಿಗೆ ಗೌರವ ನೀಡಿಲ್ಲ ಎಂಬ ಆಕ್ರೋಶ ಅವರಲ್ಲಿದೆ. ಒಂದು ದಿನ ಬಂದ್ ಆಚರಣೆಯಾದರೆ ಜನಸಾಮಾನ್ಯರ ದಿನನಿತ್ಯದ ಜೀವನದ ಮೇಲೆ ಎಂತಹ ಪರಿಣಾಮ ಬೀರುತ್ತದೆ. ಆದರೆ, ಕಳೆದ 80 ದಿನಗಳಿಂದ ಯಾವುದೇ ಸಂಪರ್ಕವಿಲ್ಲದೆ ಒಂದು ರೀತಿಯಲ್ಲಿ ಗೃಹಬಂಧನದಲ್ಲಿ ಕಾಶ್ಮೀರದ ಜನತೆ ಇದ್ದಾರೆ. ಅವರ ಪರಿಸ್ಥಿತಿ ಹೇಗಿರಬೇಕು ಎಂದು ಅವರು ಹೇಳಿದರು.

ಯೂರೋಪಿನ ಸಂಸದರ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿರುವುದು ಒಂದು ಪ್ರಾಯೋಜಿತವಾದ ಕಾರ್ಯಕ್ರಮದಂತೆ ಭಾಸವಾಗುತ್ತಿದೆ. ಕಾಶ್ಮೀರಕ್ಕೆ ಭೇಟಿ ನೀಡಲು ಅಮೆರಿಕದ ಸಂಸದರಿಗೆ ಅವಕಾಶ ನೀಡಿಲ್ಲ, ರಾಹುಲ್ ಗಾಂಧಿ, ಸೀತಾರಾಮ್ ಯೆಚೂರಿ, ಗುಲಾಂ ನಬಿ ಆಝಾದ್ ಸೇರಿದಂತೆ ಇನ್ನಿತರರು ನ್ಯಾಯಾಲಯದ ಆದೇಶ ಪಡೆದು ಕಾಶ್ಮೀರಕ್ಕೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸೀತಾರಾಮ್ ಕೋಹಿವಾಲ್ ತಿಳಿಸಿದರು.

ಮಹಾತ್ಮ ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸದ ಬಳಿಕ ಈ ಸಾಂಪ್ರದಾಯಿಕ ಶಕ್ತಿಗಳಿಗೆ, ಅವರ ವಿಚಾರಧಾರೆಗಳಿಗೆ ಮನ್ನಣೆ ಸಿಗಲು ಆರಂಭವಾಯಿತು. ಇದೀಗ 370ನೇ ವಿಧಿ ರದ್ಧತಿಯನ್ನು ತನ್ನ ರಾಜಕೀಯ ಲಾಭಕ್ಕೆ ಆ ಶಕ್ತಿಗಳು ಬಳಸಿಕೊಳ್ಳುವುದನ್ನು ನಾವು ತಡೆಯಬೇಕಿದೆ ಎಂದು ಅವರು ಹೇಳಿದರು.

ಕಾಶ್ಮೀರಿಗಳು ತಮ್ಮ ಸಂಕಷ್ಟದ ಸಮಯದಲ್ಲಿಯೂ ಎಂದಿಗೂ ಭಾರತದ ಇತಿಹಾಸ, ಸಂವಿಧಾನದ ವಿರುದ್ಧ ಮಾತನಾಡಿಲ್ಲ. ಆದರೆ, ಈ ವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಭಯೋತ್ಪಾದನೆ ನಿರ್ಮೂಲನೆಗೆ ಅವರು ಬೆಂಬಲ ನೀಡುತ್ತಿದ್ದಾರೆ. ಅವರ ಆತ್ಮವಿಶ್ವಾಸವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಿದೆ ಎಂದು ಸೀತಾರಾಮ್ ಕೋಹಿವಾಲ್ ತಿಳಿಸಿದರು.

ಬೆಂಗಳೂರಿನ ಕಾಶ್ಮೀರ್ ಸೊಸೈಟಿ ಉಪಾಧ್ಯಕ್ಷ ನಾಝಿಶ್ ಮಸೂದಿ ಮಾತನಾಡಿ, ಕಾಶ್ಮೀರಿಗಳನ್ನು ಕೋಮುವಾದಿಗಳೆಂದು ಬಿಂಬಿಸಲಾಗುತ್ತಿದೆ. ಆದರೆ, 1947ರಲ್ಲಿ ಭಾರತ ವಿಭಜನೆಯಾದ ಸಂದರ್ಭದಲ್ಲಿ ಉತ್ತರ ಭಾರತ ಹೊತ್ತಿ ಉರಿಯುತ್ತಿತ್ತು. ಆದರೆ, ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಾಗಿದ್ದ ಪಂಡಿತರು ಸುರಕ್ಷಿತವಾಗಿದ್ದರು ಎಂದರು.

1990ರಲ್ಲಿ 7 ಲಕ್ಷ ಕಾಶ್ಮೀರಿ ಪಂಡಿತರು ಕಣಿವೆಯನ್ನು ತ್ಯಜಿಸಿದರು ಎಂದು ಮಾಧ್ಯಮಗಳಿಗೆ ಪತ್ರ ಬರೆದು ಪ್ರಕಟಿಸಲಾಗಿತ್ತು. 1981ರ ಜನಗಣತಿ ಪ್ರಕಾರ ಕಣಿವೆಯಲ್ಲಿ ಇದ್ದದ್ದು 1.24 ಲಕ್ಷ ಕಾಶ್ಮೀರಿ ಪಂಡಿತರು ಮಾತ್ರ. ಹಾಗಿದ್ದಲ್ಲಿ, 7 ಲಕ್ಷ ಜನ ಹೇಗೆ ಕಣಿವೆಯನ್ನು ತ್ಯಜಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

3-4 ಸಾವಿರ ಕಾಶ್ಮೀರ ಪಂಡಿತರು ಕೊಲ್ಲಲಾಗಿದೆ ಎಂದು ಆರೋಪಿಸಲಾಗುತ್ತದೆ. ಆದರೆ, ವಾಸ್ತವವಾಗಿ ಸರಕಾರದ ಅಂಕಿ ಅಂಶಗಳನ್ನು ಗಮನಿಸಿದರೆ 219 ಮಂದಿ ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಲಾಗಿದೆ. ಅವರ ಜೊತೆ ಹಲವಾರು ಮಂದಿ ಮುಸ್ಲಿಮರನ್ನು ಹತ್ಯೆ ಮಾಡಲಾಗಿದೆ. ಆದರೆ, ಈ ಬಗ್ಗೆ ಯಾರೊಬ್ಬರೂ ಮಾತನಾಡುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜನಸಂಖ್ಯೆಯಲ್ಲಿ ಶೇ.2ರಷ್ಟು ಮಾತ್ರ ಇರುವ ಪಂಡಿತರು, ಕಾಶ್ಮೀರದಲ್ಲಿ ಶೇ.21ರಷ್ಟು ಸರಕಾರಿ ಉದ್ಯೋಗಗಳನ್ನು ಹೊಂದಿದ್ದಾರೆ. ಕಾಶ್ಮೀರದಲ್ಲಿ ಅವರ ಜೊತೆ ತಾರತಮ್ಯವಾಗುತ್ತಿರುವುದು ಸತ್ಯವಾಗಿದ್ದರೆ, ಸರಕಾರದ ಎಲ್ಲ ಉನ್ನತ ಸ್ತರಗಳಲ್ಲಿ ಅವರು ಇರಲು ಸಾಧ್ಯವಾಗುವುದಾದರೂ ಹೇಗೆ ಎಂದು ನಾಝಿಶ್ ಮಸೂದಿ ಪ್ರಶ್ನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ವಹಿಸಿದ್ದರು. ಫ್ಯಾಶಿಸ್ಟ್ ವಿರೋಧಿ ಒಕ್ಕೂಟದ ಸಂಚಾಲಕ ಎಸ್.ಬಾಲನ್, ಪಿಎಫ್‌ಐ ರಾಷ್ಟ್ರೀಯ ಕಾರ್ಯದರ್ಶಿ ಅನೀಸ್ ಅಹ್ಮದ್, ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News