ಬೇಗ್ ವಿರುದ್ಧ ಸಾಕ್ಷಿ ನುಡಿದಿದ್ದಕ್ಕೆ ಕಿರುಕುಳ ಆರೋಪ: ರಾಜ್ಯ ಸರಕಾರ, ಪೊಲೀಸರಿಗೆ ಹೈಕೋರ್ಟ್ ನೋಟಿಸ್

Update: 2019-10-31 17:16 GMT

ಬೆಂಗಳೂರು, ಅ.31: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ವಿರುದ್ಧ ತಮ್ಮ ಪತಿ ಸಾಕ್ಷಿ ಹೇಳಲು ಮುಂದೆ ಬಂದಿದ್ದಕ್ಕೆ ಪದೇ ಪದೇ ಪೊಲೀಸರು ಠಾಣೆಗೆ ಕರೆಸಿ ಕಿರುಕುಳ ನೀಡಲು ಯತ್ನಿಸುತ್ತಿದ್ದಾರೆ ಎಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರ, ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.

ತಮ್ಮ ಪತಿ ಇಷ್ತಿಯಾಕ್ ಪೈಲ್ವಾನ್‌ಗೆ ಪೊಲೀಸರು ಠಾಣೆಗೆ ಕರೆಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಶಿವಾಜಿನಗರದ ಬಿಬಿಎಂಪಿ ಸದಸ್ಯೆ ಫರೀದಾ ಇಷ್ತಿಯಾಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು.

ಫರೀದಾ ಪರ ವಾದಿಸಿದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು, ಮಾಜಿ ಸಚಿವ ರೋಷನ್ ಬೇಗ್ ಅವರು ಐಎಂಎ ಯಿಂದ 1.50 ಕೋಟಿ ರೂ.ಪಡೆದಿದ್ದಾರೆ ಎಂದು ಇಷ್ತಿಯಾಕ್ ಪೈಲ್ವಾನ್ ಸಾಕ್ಷಿ ನುಡಿದಿದ್ದಾರೆ. ಪೊಲೀಸರು ಪೈಲ್ವಾನ್‌ಗೆ ಪದೇ ಪದೇ ಪೊಲೀಸ್ ಠಾಣೆಗೆ ಬರಲು ಹೇಳುತ್ತಿದ್ದಾರೆ. ಅದರ ಜೊತೆಗೆ ಗೂಂಡ ಕಾಯ್ದೆಯಡಿ ಬಂಧಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ. ಇದರಲ್ಲಿ ಮಾಜಿ ಸಚಿವ ಬೇಗ್ ಕೈವಾಡ ಕೂಡ ಇದೆ. ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರ, ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News