​ದೇಶದಲ್ಲಿ ಏರುತ್ತಿದೆ ಮಧುಮೇಹ, ಬಿಪಿ, ಕ್ಯಾನ್ಸರ್

Update: 2019-11-01 03:46 GMT

ಹೊಸದಿಲ್ಲಿ, ನ.1: ಸಾಂಕ್ರಾಮಿಕವಲ್ಲದ ಮಾರಕ ರೋಗಗಳಾದ ಹೈಪರ್‌ ಟೆನ್ಷನ್, ಮಧುಮೇಹ ಮತ್ತು ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿವೆ ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಸರ್ಕಾರಿ ಎನ್‌ಸಿಡಿ ಕ್ಲಿನಿಕ್‌ಗಳಲ್ಲಿ 2018ರಲ್ಲಿ 6.51 ಕೋಟಿ ಮಂದಿಯ ರೋಗಲಕ್ಷಣ ಪತ್ತೆ ಮಾಡಲಾಗಿದ್ದು, ಈ ಪೈಕಿ 40 ಲಕ್ಷ ಮಂದಿಗೆ ಹೈಪರ್‌ಟೆನ್ಷನ್, 31 ಲಕ್ಷಕ್ಕೂ ಅಧಿಕ ಮಂದಿಗೆ ಮಧುಮೇಹ ಹಾಗೂ 11 ಲಕ್ಷ ಮಂದಿಗೆ ಹೈಪರ್‌ಟೆನ್ಷನ್ ಮತ್ತು ಮಧುಮೇಹ ಎರಡೂ ರೋಗಗಳಿರುವುದು ಪತ್ತೆಯಾಗಿದೆ.

ಇದಲ್ಲದೇ 2 ಲಕ್ಷ ಮಂದಿಗೆ ಹೃದ್ರೋಗ ಹಾಗೂ 1.68 ಲಕ್ಷ ಮಂದಿಗೆ ಕ್ಯಾನ್ಸರ್ ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ನ್ಯಾಷನಲ್ ಹೆಲ್ತ್ ಪ್ರೊಫೈಲ್ (ಎನ್‌ಎಚ್‌ಪಿ) 2019 ವರದಿಯಿಂದ ತಿಳಿದು ಬರುತ್ತದೆ.

ಕಳೆದ ವರ್ಷ 3.5 ಕೋಟಿ ಮಂದಿ ಎನ್‌ಸಿಡಿ ಕ್ಲಿನಿಕ್‌ಗಳಿಗೆ ತಪಾಸಣೆಗಾಗಿ ಭೇಟಿ ನೀಡಿದ್ದರೆ ಈ ಬಾರಿ ಭೇಟಿ ನೀಡಿದವರ ಸಂಖ್ಯೆ ಬಹುತೇಕ ದುಪ್ಪಟ್ಟಾಗಿದೆ. ಅಧಿಕ ಸಂಖ್ಯೆಯ ತಪಾಸಣೆ ಮತ್ತು ರೋಗ ಪತ್ತೆಯಾಗಿರುವುದು ಜನರಲ್ಲಿ ರೋಗದ ಬಗೆಗಿನ ಜಾಗೃತಿ ಹೆಚ್ಚಳ, ರೋಗದಿಂದಾಗುವ ಹೊರೆಯನ್ನು ತೋರಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಕ್ಯಾನ್ಸರ್, ಮಧುಮೇಹ, ಹೃದ್ರೋಗ ಮತ್ತು ಪಾರ್ಶ್ವವಾಯು ತಡೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮವನ್ನು 21 ರಾಜ್ಯಗಳ 100 ಜಿಲ್ಲೆಗಳಲ್ಲಿ 2010ರಲ್ಲಿ ಆರಂಭಿಸಲಾಗಿತ್ತು. ಜಾಗೃತಿ ಮೂಡಿಸುವುದು, ನಡವಳಿಕೆ ಹಾಗೂ ಜೀವನಶೈಲಿ ಬದಲಾವಣೆ ತರುವುದು ಇದರ ಉದ್ದೇಶ.

ಪರೀಕ್ಷೆಗೆ ಗುರಿಪಡಿಸಿದ 6.5 ಕೋಟಿ ಮಂದಿಯ ಪೈಕಿ ಶೇಕಡ 4.75ರಷ್ಟು ಮಂದಿಗೆ ಮಧುಮೇಹ, 6.2% ಮಂದಿಗೆ ಹೈಪರ್ ಟೆನ್ಷನ್ ಇರುವುದು ಕಂಡುಬಂದಿದೆ. ಹೃದ್ರೋಗಿಗಳ ಸಂಖ್ಯೆಯಲ್ಲಿ ಶೇಕಡ 0.3ರಷ್ಟು ಹಾಗೂ ಪಾರ್ಶ್ವವಾಯು ರೋಗಿಗಳ ಸಂಖ್ಯೆಯಲ್ಲಿ ಶೇಕಡ 0.1 ಹಾಗೂ ಕ್ಯಾನ್ಸರ್ ರೋಗಿಗಳ ಸಂಖ್ಯೆಯಲ್ಲಿ ಶೇಕಡ 0.26ರಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News