ಕನ್ನಡ ಅಲ್ಪಸಂಖ್ಯಾತ ಭಾಷೆಯಾಗುತ್ತಿದೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-11-01 16:12 GMT

ಬೆಂಗಳೂರು, ನ.1: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಇಂಗ್ಲಿಷ್ ವ್ಯಾಮೋಹದಿಂದಾಗಿ ಕನ್ನಡ ಅಲ್ಪಸಂಖ್ಯಾತ ಭಾಷೆಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ನಾಡು, ನುಡಿಯ ಸಂರಕ್ಷಣೆಗೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಕನ್ನಡ ಅಲ್ಪಸಂಖ್ಯಾತ ಭಾಷೆಯಾಗುತ್ತಿರುವುದು ಆತಂಕ ಮೂಡಿಸಿದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕನ್ನಡವನ್ನು ಸಂಬಳ ಹಾಗೂ ಉಂಬಳದ ಭಾಷೆಯಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದು ತಿಳಿಸಿದರು.

ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಜಾರಿ ಮಾಡುವುದು. ಹಾಗೂ ಉದ್ಯೋಗವಕಾಶಗಳನ್ನು ಹೆಚ್ಚಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಇದಕ್ಕೆ ಪೂರಕವಾಗಿ ಇಂದಿನ ಯುವ ಪೀಳಿಗೆ ಜಾಗೃತರಾಗಿದ್ದು. ಎಲ್ಲ ಸವಾಲಿಗೆ ಸಿದ್ಧವಾಗಿದೆ ಎಂಬುದನ್ನು ಇಂದು ಬೆಳಗ್ಗೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೋಡಿ ಸಂತೋಷವಾಯಿತು. ಅದೇ ಮಾದರಿಯಲ್ಲಿ ಪೋಷಕರು ತಮ್ಮ ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ ಬೆಳೆಸಬೇಕಿದೆ ಎಂದು ಅವರು ಆಶಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಮಾತನಾಡಿ, ಸಂಸ್ಕೃತಿ ಹಾಗೂ ಭಾಷೆ ಒಂದನ್ನೊಂದು ಬಿಟ್ಟು ಇರಲಾರವು. ಕನ್ನಡ ಭಾಷೆಯನ್ನು ಕಳೆದುಕೊಂಡರೆ ಸಂಸ್ಕೃತಿಯನ್ನೂ ಕಳೆದುಕೊಳ್ಳುತ್ತೇವೆ. ಎರಡನ್ನೂ ಉಳಿಸಿಕೊಳ್ಳುವುದು ವರ್ತಮಾನದ ಸವಾಲು. ಈ ಸವಾಲನ್ನು ನಾವು ಸ್ವೀಕರಿಸಲೇಬೇಕೆಂದರು.

ನಾವು ಎಷ್ಟೇ ಚೆನ್ನಾಗಿ ಇಂಗ್ಲಿಷ್ ಕಲಿತರೂ ನಾವು ಕನ್ನಡಿಗರೇ. ವಿಶ್ವದ ಇನ್ನೂ ನೂರಾರು ಭಾಷೆಗಳನ್ನು ಕಲಿಯೋಣ. ಆದರೆ, ನಮ್ಮ ವಿಳಾಸದ, ಗುರುತಿಸುವಿಕೆಯ ಭಾಷೆಯಾಗಿ ಕನ್ನಡವೇ ಆಗಿರಬೇಕು. ಹೀಗಾಗಿ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗೋಣವೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮೇಯರ್ ಗೌತಮ್ ಕುಮಾರ್, ಶಾಸಕ ಉದಯ್ ಬಿ. ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಆರ್.ಆರ್ ಜನ್ನು, ನಿರ್ದೇಶಕ ರಂಗಪ್ಪಉಪಸ್ಥಿತರಿದ್ದರು.

ಕನ್ನಡಿಗರು ತಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಪ್ರದರ್ಶಿಸಿಲ್ಲ. ಸರಕಾರ ಕನ್ನಡದ ಉಳಿವಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ಆದರೆ, ಸರಕಾರದ ಶ್ರಮವೇ ಸಾಲದು. ನಾವೂ ಕೈಜೋಡಿಸಬೇಕು. ನಮ್ಮ ಮನೆಯಲ್ಲಿ, ಸುತ್ತಮುತ್ತ ಕನ್ನಡ ಬಳಸಬೇಕು. ಆಗ ಕನ್ನಡ ಗತವೈಭವಕ್ಕೆ ತಲುಪುತ್ತದೆ. ಕನ್ನಡ ಪ್ರೀತಿಸಲು ಇತರೆ ಭಾಷೆ ದ್ವೇಷಿಸಬೇಕಿಲ್ಲ. ಕನ್ನಡಿಗ ಎಂದು ಹೇಳಿಕೊಳ್ಳಲು ಕೀಳರಿಮೆ ಇರಬಾರದು. ಕರ್ನಾಟಕ, ದೇಶದಲ್ಲೆ ಮೊದಲಾಗಲು ನಾವೆಲ್ಲರೂ ಶ್ರಮಿಸಬೇಕು. ಯುವಕರಿಗೆ ಪ್ರಶಸ್ತಿ ಕೊಟ್ಟಿರುವುದೂ ಸಂತಸ.

-ನ್ಯಾ.ಎನ್.ಕುಮಾರ್, ಪ್ರಶಸ್ತಿ ಪುರಸ್ಕೃತರು

2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 64 ಸಾಧಕರನ್ನು ಆಯ್ಕೆ ಮಾಡಲಾಗಿತ್ತು. ಆದರಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜಾನಪದ ಗಾಯಕ ಉಸ್ಮಾನ್ ಸಾಬ್ ಖಾದರ್ ಸಾಬ್ ಪ್ರಶಸ್ತಿಯಿಂದ ಕೈ ಬಿಡಲಾಗಿದೆ. ಈ ಬಗ್ಗೆ ಇಲಾಖೆಯ ನಿರ್ದೇಶಕ ರಂಗಪ್ಪರನ್ನು ಪ್ರಶ್ನಿಸಿದಾಗ, ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಬೇಕಾದರೆ 60 ವರ್ಷ ದಾಟಿರಬೇಕು. ಆದರೆ, ಉಸ್ಮಾನ್ ಸಾಬ್ ಖಾದರ್ ಸಾಬ್‌ಗೆ ಕೇವಲ 43 ವರ್ಷವಾಗಿರುವುದರಿಂದ ಅವರನ್ನು ಪ್ರಶಸ್ತಿಯಿಂದ ಕೈ ಬಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News