ನಾಡಗೀತೆಗೆ ನಿರ್ದಿಷ್ಟ ಕಾಲಾವಧಿ ನಿಗದಿಯಾಗಲಿ: ಹಿರಿಯ ಸಂಶೋಧಕ ಚಿದಾನಂದಮೂರ್ತಿ

Update: 2019-11-01 17:32 GMT

ಬೆಂಗಳೂರು, ನ.1: ರಾಷ್ಟ್ರಕವಿ ಕುವೆಂಪು ರಚಿತ ಜಯ ಭಾರತ ಜನನಿಯ ತನುಜಾತೆ ಗೀತೆಗೆ ಆಗುತ್ತಿರುವ ಅಪಚಾರವನ್ನು ತಡೆಯುವ ನಿಟ್ಟಿನಲ್ಲಿ ನಿರ್ದಿಷ್ಟವಾದ ಕಾಲಾವಧಿ ಮತ್ತು ದಾಟಿಯನ್ನು ನಿಗದಿ ಪಡಿಸಬೇಕೆಂದು ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಶುಕ್ರವಾರ ಕನ್ನಡ ಗೆಳೆಯರ ಬಳಗ ನಗರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಾಡಗೀತೆಯನ್ನು ಹಾಡುವ ಕ್ರಮ, ನಿರ್ದಿಷ್ಟ ಕಾಲಾವಧಿ ಮತ್ತು ದಾಟಿಯನ್ನು ನಿಗದಿ ಪಡಿಸದಿರುವುದರಿಂದ ಒಬ್ಬಬ್ಬೊರು ಒಂದೊಂದು ರೀತಿ ಹಾಡುತ್ತಾರೆ. ಇದು ನಾಡಗೀತೆಗೆ ಮಾಡುವ ಅಪಚಾರವಾಗಿದೆ. ಈ ಸಮಸ್ಯೆಯನ್ನು ಸರಿಪಡಿಸುವುದು ಸರಕಾರದ ಜವಾಬ್ದಾರಿಯೆಂದು ತಿಳಿಸಿದರು.

ಬೆಂಗಳೂರು ಪರಭಾಷಿಕರ ತಾಣವಾಗುತ್ತಿದೆ. ಹೊರಗಿನಿಂದ ಬಂದವರು ಇಲ್ಲಿಯೇ ತಳವೂರುತ್ತಿದ್ದಾರೆ. ಇವರು ಕನ್ನಡ ಭಾಷೆಯನ್ನು ಕಲಿಯುವಂತಹ ವಾತಾವರಣ ಬೆಂಗಳೂರಿನಲ್ಲಿ ಇಲ್ಲವಾಗಿದೆ. ಹೀಗಾಗಿ ಕನ್ನಡಪರ ಸಂಘ, ಸಂಸ್ಥೆಗಳು, ವಿಶ್ವವಿದ್ಯಾಲಯಗಳು ರಾಜ್ಯದಲ್ಲಿರುವ ಅನ್ಯ ಭಾಷಿಕರಿಗೆ ಕನ್ನಡದ ಕುರಿತು ಅಭಿಮಾನ ಬರುವಂತಹ ಕಾರ್ಯಯೋಜನೆಗಳನ್ನು ರೂಪಿಸಬೇಕೆಂದು ಕನ್ನಡ ಪ್ರಾಧ್ಯಾಪಕ ಡಾ.ರುದ್ರೇಶ್ ಅದರಂಗಿ ತಿಳಿಸಿದರು.

ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಜೀವಂತವಾಗಿಡುವಲ್ಲಿ ಕನ್ನಡ ಪರ ಹೋರಾಟಗಾರರ ತ್ಯಾಗ ಅನನ್ಯವಾದುದ್ದಾಗಿದೆ. ಹೀಗಾಗಿ ರಾಜ್ಯ ಸರಕಾರವು ಕನ್ನಡ ನಾಡು-ನುಡಿಗಾಗಿ ದುಡಿದ ಹಿರಿಯ ಹೋರಾಟಗಾರರಾದ ಅನಕೃ, ಮ.ರಾಮಮೂರ್ತಿ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿ ಪ್ರತಿವರ್ಷ ಕೊಡುವಂತಾಗಬೇಕೆಂದು ಅವರು ಹೇಳಿದರು.

ಕನ್ನಡ ಬಳಗದ ರಾ.ನಂ.ಚಂದ್ರಶೇಖರ್ ಮಾತನಾಡಿದರು. ಸಭೆಯಲ್ಲಿ ಪ್ರೊ.ನಾಗಭೂಷಣ, ಎಚ್.ಎನ್.ರಮೇಶ್‌ಬಾಬು, ಬಿ.ವಿ.ರವಿಕುಮಾರ್, ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘದ ಅಧ್ಯಕ್ಷ ರಾಮಸ್ವಾಮಿ ಸೇರಿದಂತೆ ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News