ಕನ್ನಡ ಉಳಿಯಲು ಮಕ್ಕಳಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ: ಡಾ.ಸುಧಾಮೂರ್ತಿ

Update: 2019-11-01 17:37 GMT

ಬೆಂಗಳೂರು, ನ.1: ಪೋಷಕರು ಮಕ್ಕಳಿಗೆ ಚಿನ್ನ, ಕಾರು, ಫ್ಲಾಟ್‌ಗಳನ್ನು ಕೊಡಿಸುವ ಬದಲು ಕನ್ನಡ ಪುಸ್ತಕಗಳನ್ನು ಖರೀದಿಸಿ ಉಡುಗೊರೆಯಾಗಿ ನೀಡಿದರೆ ಕನ್ನಡ ಭಾಷೆ, ಬರಹ ಉಳಿಯಲು ಸಾಧ್ಯವಿದೆ ಎಂದು ಇನ್‌ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷೆ ಡಾ.ಸುಧಾಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಗಾಂಧಿ ಭವನದಲ್ಲಿ ಸಪ್ನ ಬುಕ್ ಹೌಸ್ ಆಯೋಜಿಸಿದ್ದ ಓದು ಜನಮೇಜಯ ಕನ್ನಡ ಪುಸ್ತಕೋದ್ಯಮದ ಸಂಭ್ರಮ, ಸಂಕಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡಿಗರು ಸಾಫ್ಟವೇರ್ ಕೆಲಸಗಳ ಮೂಲಕ ವಿದೇಶದವರೆಗೂ ಹೋಗಿ ಕನ್ನಡ ಸಂಘಗಳನ್ನು ಕಟ್ಟಿ ಭಾಷೆಯನ್ನು ಉಳಿಸುತ್ತಿದ್ದಾರೆ. ಇಂತಹ ಕೆಲಸ ಎಲ್ಲ ಕ್ಷೇತ್ರಗಳಲ್ಲೂ ನಡೆಯಬೇಕು. ಪೋಷಕರೂ ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ಖರೀದಿಸಿ ನೀಡಿದರೆ ಕನ್ನಡ ಭಾಷೆ, ಬರಹ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಕನ್ನಡ ಭಾಷೆಯನ್ನು ಮಾತನಾಡುವಾಗ ಇಂಗ್ಲಿಷ್ ಪದ ಬಳಕೆಯನ್ನೂ ಮಾಡುತ್ತಾರೆ. ಆದರೆ, ಮೈಸೂರು, ಉತ್ತರ ಕರ್ನಾಟಕ ಭಾಗಗಳಿಗೆ ಹೋದರೆ ಇಂಗ್ಲಿಷ್ ಪದ ಬಳಕೆ ಇಲ್ಲದ ಕನ್ನಡ ಭಾಷೆಯನ್ನು ಕೇಳಬಹುದು. ನಾನೂ ಕನ್ನಡಿಗಳಾಗಿದ್ದು, ಕನ್ನಡಿಗನನ್ನೇ ಮದುವೆ ಆಗಿದ್ದೇನೆ ಎಂದು ತಿಳಿಸಿದರು. ವಿದೇಶಗಳಿಗೆ ಪ್ರೇಕ್ಷಣೀಯ ಸ್ಥಳ ಸೇರಿ ಇನ್ನಿತರ ಸ್ಥಳಗಳನ್ನು ನೋಡಲು ಹೋಗುತ್ತೇವೆ. ಆದರೆ, ಕರ್ನಾಟಕದಲ್ಲಿಯೇ ಸಾಕಷ್ಟು ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳಿದ್ದು, ಇವುಗಳ ಬಗ್ಗೆಯೂ ತಿಳಿದುಕೊಂಡು ಮತ್ತೊಬ್ಬರಿಗೆ ತಿಳಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿ, ಮೂರ್ನಾಲ್ಕು ತಲೆಮಾರುಗಳ ಬಳಿಕ ಕನ್ನಡ ಭಾಷೆಗೆ ಧಕ್ಕೆ ಬರುವ ಸಾಧ್ಯತೆಯಿದೆ. ಇಂತಹ ಸಮಸ್ಯೆಯನ್ನು ತಡೆಗಟ್ಟಲು ಕನ್ನಡ ಭಾಷೆಗೆ ವೈಜ್ಞಾನಿಕ ಶಕ್ತಿಯನ್ನು ನೀಡಿ ಧಕ್ಕೆ ಭಾರದಂತೆ ನೋಡಿಕೊಳ್ಳಬೇಕಾಗಿದೆ ಎಂದು ನುಡಿದರು.

ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಮಾತನಾಡಿ, ಮಾಧ್ಯಮಗಳಲ್ಲಿ ಈಗ ಸತ್ಯಮೇವ ಜಯತೆ ಎಂಬ ಪದನಾಮ ಬದಲಾಗಿ ಸದ್ಯ ಮೇವ ಜಯತೆ ಪ್ರಾರಂಭವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ, ಪತ್ರಕರ್ತರಾದ ರವೀಂದ್ರ ಭಟ್ಟ, ಕೆ.ಎನ್.ಚನ್ನೇಗೌಡ, ಶ್ರೀವತ್ಸ ನಾಡಿಗ್, ವಿಶ್ವೇಶ್ವರ ಭಟ್, ವಿನಾಯಕ ಉಪಸ್ಥಿತರಿದ್ದರು.

ಮಾಧ್ಯಮಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ

‘‘ಈ ಮೊದಲು ಸಾಹಿತ್ಯ ಓದುವ, ಕೇಳುವ ವಸ್ತುವಾಗಿತ್ತು. ಈಗ ಟಿವಿ ಚಾನಲ್‌ಗಳು ಬಂದ ಮೇಲೆ ನೋಡುವ ವಸ್ತುವಾಗಿದೆ. ಆಗ ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಸುಳ್ಳನ್ನು ನಿಜ ಎಂದು ನಂಬುತ್ತಿದ್ದರು. ಈಗಿನ ಮಾಧ್ಯಮಗಳು ಸುಳ್ಳನ್ನು ನಿಜ ಎಂದು ಒಂದು ಬಾರಿ ಪ್ರಕಟಿಸಿದರೆ ಅದು ನಿಜವೆಂದು ನಂಬುತ್ತಾರೆ. ಮಾಧ್ಯಮಗಳಲ್ಲಿ ಬರುವುದನ್ನು ನಾವುಗಳು ನಂಬುತ್ತಾ ಹೋದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ.’’

-ಚಂದ್ರಶೇಖರ ಕಂಬಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News