ಅಕ್ರಮವಾಗಿ ಕಸ ವಿಲೇವಾರಿ ಆರೋಪ: ಗ್ರಾಮಸ್ಥರಿಂದ ಬಿಬಿಎಂಪಿ ಲಾರಿಗಳ ವಶ
ಬೆಂಗಳೂರು, ನ.1: ಖಾಸಗಿ ಜಮೀನಿನಲ್ಲಿ ತಡ ರಾತ್ರಿ ವೇಳೆ ಕಸ ಸುರಿದು ಪರಾರಿಯಾಗುತ್ತಿದ್ದ ಬಿಬಿಎಂಪಿ ಲಾರಿಗಳನ್ನು ಸ್ಥಳೀಯರು ವಶಕ್ಕೆ ಪಡೆದಿರುವ ಘಟನೆ ಎಲೆಕ್ಟ್ರಾನಿಕ್‌ಸಿಟಿ ಸಮೀಪದ ಮೈಲಸಂದ್ರ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.
ಬಿಬಿಎಂಪಿಯ ಕಸದ ಲಾರಿಗಳು ಗುರುವಾರ ತಡರಾತ್ರಿ ಮೈಲಸಂದ್ರದ ಪಾಪರಾಜು ಎಂಬುವವರ ಖಾಸಗಿ ಜಮೀನಿನಲ್ಲಿ ಕಸ ಸುರಿಯುತ್ತಿದ್ದವು. ಕಸ ವಿಲೇವಾರಿ ಮಾಡಲು ಸಮರ್ಪಕ ಜಾಗವಿಲ್ಲದ ಹಿನ್ನೆಲೆಯಲ್ಲಿ ನಗರದ ಕಸವನ್ನು ಸಾಗಿಸುವ ಲಾರಿಗಳು ರಾತ್ರಿ ವೇಳೆ ಖಾಲಿ ಜಾಗದಲ್ಲಿ ಕಸ ಸುರಿದು ಯಾರ ಕಣ್ಣಿಗೂ ಕಾಣಿಸದಂತೆ ಹೋಗುತ್ತಿದ್ದವು ಎನ್ನಲಾಗಿದೆ.
ಮೈಲಸಂದ್ರ ಸುತ್ತಮುತ್ತಲ ಖಾಲಿ ಜಾಗದಲ್ಲಿ ಬಿಬಿಎಂಪಿ ಲಾರಿಗಳು ಕಸ ಸುರಿದ ಹಿನ್ನೆಲೆಯಲ್ಲಿ ಇಡೀ ಪ್ರದೇಶ ಗಬ್ಬುವಾಸನೆಯಿಂದ ನಾರುತ್ತಿದೆ. ಬಿಬಿಎಂಪಿಯವರ ಈ ವರ್ತನೆಯಿಂದ ರೋಸಿಹೋಗಿದ್ದ ಸ್ಥಳೀಯರು ಬೆಳಗಿನ ಜಾವ 3ಗಂಟೆ ಸಮಯದಲ್ಲಿ ಪಾಪರಾಜು ಜಮೀನಿನ ಕಸ ಸುರಿಯುತ್ತಿದ್ದ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರು ಆಗಮಿಸುತ್ತಿದ್ದಂತೆಯೇ ಕೆಲ ಲಾರಿ ಚಾಲಕರು ಪರಾರಿಯಾಗಿದ್ದು, ಕೆಲವರನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇಡೀ ಕಸವನ್ನು ಬೇರೆಡೆ ಸಾಗಿಸಬೇಕು. ಇಲ್ಲದಿದ್ದಲ್ಲಿ ಲಾರಿಗಳನ್ನು ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.