​ದೇಶದ ಮೊಟ್ಟಮೊದಲ ಟೈಮ್ ಬ್ಯಾಂಕ್ : ವಿಶೇಷತೆಗಳೇನು ಗೊತ್ತೇ ?

Update: 2019-11-02 03:27 GMT

ಭೋಪಾಲ್: ಮಧ್ಯಪ್ರದೇಶದಲ್ಲಿ ಕಮಲನಾಥ್ ನೇತೃತ್ವದ ಸರ್ಕಾರ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸಮಯ ಬ್ಯಾಂಕ್ (ಟೈಮ್ ಬ್ಯಾಂಕ್) ಆರಂಭಿಸುತ್ತಿದೆ. ಇಲ್ಲಿ ಸ್ವಯಂಸೇವೆ ಸಲ್ಲಿಸಿದ ಜನ ಕ್ರೆಡಿಟ್ ಗಂಟೆಗಳನ್ನು ಗಳಿಸಬಹುದಾಗಿದೆ ಹಾಗೂ ಈ ಕ್ರೆಡಿಟ್ ಗಂಟೆಗಳನ್ನು ಅಗತ್ಯವಿರುವಾಗ ಮರಳಿ ಪಡೆಯಲು ಅವಕಾಶವಿದೆ.

ರಾಜ್ಯದ ಆಧ್ಯಾತ್ಮಂ ಇಲಾಖೆ ಈ ಸಂಬಂಧ ಶುಕ್ರವಾರ ಆದೇಶ ಹೊರಡಿಸಿದೆ. ಈ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಆನಂದ ಸಂಸ್ಥಾನ ಆಡಳಿತಾಧಿಕಾರಿಗಳಿಗೆ ತಕ್ಷಣ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್ ಶ್ರೀವಾಸ್ತವ ಹೇಳಿದ್ದಾರೆ.

ಇದು ಪರಸ್ಪರ ನೆರವಿನ ವ್ಯವ್ಥೆಯಾಗಿದ್ದು, ಜನ ಪರಸ್ಪರ ಸಹಾಯ ಮಾಡಿಕೊಳ್ಳುವುದನ್ನು ಉತ್ತೇಜಿಸಲಿದೆ. ಜನ ತಾವು ಮಾಡಿದ ಸೇವೆಗೆ ಟೈಮ್‌ಬ್ಯಾಂಕ್ ಖಾತೆಯಲ್ಲಿ ಕ್ರೆಡಿಟ್ ಗಂಟೆಗಳನ್ನು ಪಡೆಯುತ್ತಾರೆ. ಉದಾಹರಣೆಗೆ ವೃದ್ಧರ ಪಾಲನೆ, ದುರ್ಬಲ ವರ್ಗದ ಮಕ್ಕಳಿಗೆ ಬೋಧನೆ ಹೀಗೆ ಯಾವ ಸೇವೆಯನ್ನಾದರೂ ಜನ ಸ್ವಯಂಪ್ರೇರಿತರಾಗಿ ಸಲ್ಲಿಸಬಹುದಾಗಿದ್ದು, ಇದಕ್ಕೆ ಪ್ರತಿಫಲವಾಗಿ ಕ್ರೆಡಿಟ್ ಗಂಟೆಗಳನ್ನು ಖಾತೆಗೆ ಜಮಾ ಮಾಡಲಾಗುತ್ತದೆ.

ಪ್ರತಿ ಜಿಲ್ಲೆಗಳಲ್ಲಿ ಟೈಮ್ ಬ್ಯಾಂಕ್ ಸ್ಥಾಪನೆಯಾಗಲಿದ್ದು, ಒಂದು ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಕೂಡಾ ಇರಬಹುದು ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

"ಇದು ನೆರವು ನೀಡಲು ಬಯಸುವ ಹಾಗೂ ನೆರವು ಅಗತ್ಯವಿರುವವರನ್ನು ಒಂದೇ ವೇದಿಕೆಯಡಿ ಸೇರಿಸಲಿದೆ. ನೆರವು ನೀಡಿದವರು ಕ್ರೆಡಿಟ್ ಗಂಟೆಗಳನ್ನು ಪಡೆದರೆ, ನೆರವು ಪಡೆದವರು ಇದಕ್ಕೆ ಪ್ರತಿಯಾಗಿ ಬ್ಯಾಂಕ್ ಜಾಲದಲ್ಲಿರುವ ನೆರವು ಅಪೇಕ್ಷಿತರಿಗೆ ಸೇವೆ ಒದಗಿಸಬೇಕಾಗುತ್ತದೆ. ಯಾರಿಂದ ಸೇವೆ ಪಡೆಯಲಾಗಿದೆಯೋ ಆ ವ್ಯಕ್ತಿಗೇ ಪ್ರತಿಯಾಗಿ ಸೇವೆ ಒದಗಿಸಬೇಕಾಗಿಲ್ಲ" ಎಂದು ಶ್ರೀವಾಸ್ತವ ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News