ಅಸಾಂಜ್‌ರನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ಅವರ ಜೀವಕ್ಕೆ ಅಪಾಯ: ವಿಶ್ವಸಂಸ್ಥೆ ಪರಿಣತ ಎಚ್ಚರಿಕೆ

Update: 2019-11-02 16:25 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ನ. 2: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ಬ್ರಿಟನ್ ನಡೆಸಿಕೊಳ್ಳುತ್ತಿರುವ ರೀತಿಯು ಅವರ ಜೀವವನ್ನು ಅಪಾಯಕ್ಕೆ ಒಡ್ಡುತ್ತಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಮಾನವಹಕ್ಕುಗಳ ಪರಿಣತರೊಬ್ಬರು ಶುಕ್ರವಾರ ಹೇಳಿದ್ದಾರೆ.

ಅವರು ಈಗ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಅಮೆರಿಕಕ್ಕೆ ಗಡಿಪಾರಾಗುವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ.

‘‘ಬ್ರಿಟನ್ ತನ್ನ ವರ್ತನೆಯನ್ನು ತಿದ್ದಿಕೊಳ್ಳದಿದ್ದರೆ ಹಾಗೂ ಅವರಿರುವ ಅಮಾನವೀಯ ಪರಿಸ್ಥಿತಿಯನ್ನು ಸುಧಾರಿಸದಿದ್ದರೆ, ಅವರು ಶೀಘ್ರವೇ ಸಾವನ್ನಪ್ಪಬಹುದು’’ ಎಂದು ಚಿತ್ರಹಿಂಸೆ ಮತ್ತು ಇತರ ಕ್ರೂರ, ಅಮಾನವೀಯ ಮತ್ತು ಹೀನ ನಡವಳಿಕೆ ಕುರಿತ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ನಿಲ್ಸ್ ಮೆಲ್ಝರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಆಸ್ಟ್ರೇಲಿಯ ಪ್ರಜೆ ಅಸಾಂಜ್ ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಏಳು ವರ್ಷ ಆಶ್ರಯ ಪಡೆದಿದ್ದರು. ಈ ವರ್ಷದ ಎಪ್ರಿಲ್‌ನಲ್ಲಿ ಅವರಿಗೆ ನೀಡಿರುವ ಆಶ್ರಯವನ್ನು ಇಕ್ವೆಡಾರ್ ಹಿಂದಕ್ಕೆ ಪಡೆದುಕೊಂಡ ಬಳಿಕ, ಜಾಮೀನು ಶರತ್ತುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಲಂಡನ್ ಪೊಲೀಸರು ಅವರನ್ನು ಬಂಧಿಸಿದ್ದರು.

48 ವರ್ಷದ ಅಸಾಂಜ್‌ರನ್ನು ಮೆಲ್ಝರ್ ಮೇ 9ರಂದು, ಅಂದರೆ ಅವರ ಬಂಧನವಾದ ಸುಮಾರು ಒಂದು ತಿಂಗಳ ಬಳಿಕ ಲಂಡನ್‌ನ ಜೈಲೊಂದರಲ್ಲಿ ಭೇಟಿಯಾಗಿದ್ದರು. ಅಸಾಂಜ್‌ರನ್ನು ಸುದೀರ್ಘ ‘ಮಾನಸಿಕ ಚಿತ್ರಹಿಂಸೆ’ಗೆ ಗುರಿಪಡಿಸಲಾಗುತ್ತಿದೆ ಎಂಬುದಾಗಿ ಅವರು ಆ ಸಂದರ್ಭದಲ್ಲೇ ಎಚ್ಚರಿಸಿದ್ದರು.

ಅಸಾಂಜ್ ಕುರಿತ ‘‘ಹಾಲಿ ವೈದ್ಯಕೀಯ ಮಾಹಿತಿಯನ್ನು ಹಲವಾರು ನಂಬಲರ್ಹ ಮೂಲಗಳಿಂದ’’ ಪಡೆದುಕೊಂಡ ಬಳಿಕ ಮೆಲ್ಝರ್, ಅಸಾಂಜ್ ಪ್ರಾಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News