ದಿಲ್ಲಿ ಮಾಲಿನ್ಯ ಮಟ್ಟ ಅಪಾಯಕಾರಿ: ಆ್ಯಂಜೆಲಾ ಮರ್ಕೆಲ್ ಕಳವಳ

Update: 2019-11-02 17:15 GMT

 ಹೊಸದಿಲ್ಲಿ, ನ.2: ಹೊಸದಿಲ್ಲಿಯ ಮಾಲಿನ್ಯ ಮಟ್ಟ ಅಪಾಯಕಾರಿ ಮಟ್ಟಕ್ಕೆ ತಲುಪಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ , ಪರಿಸರಸ್ನೇಹಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ವಾಯುಗುಣಮಟ್ಟ ಸುಧಾರಿಸಬಹುದಾಗಿದೆ ಎಂದು ಹೇಳಿದ್ದಾರೆ.

ಡೀಸೆಲ್ ಬಳಸುವ ಸರಕಾರಿ ವಾಹನಗಳ ಬದಲು ವಿದ್ಯುತ್‌ಶಕ್ತಿಯಿಂದ ಚಲಿಸುವ ಬಸ್ಸುಗಳನ್ನು ಬಳಸಬೇಕು. ತಮಿಳುನಾಡಿನಲ್ಲಿ ಬಸ್ಸು ಕ್ಷೇತ್ರದ ಸುಧಾರಣೆಗೆ 200 ಮಿಲಿಯನ್ ಯುರೋಗಳನ್ನು ಮೀಸಲಿಡಲಾಗಿದೆ ಎಂದವರು ಹೇಳಿದ್ದಾರೆ.

  ಶುಕ್ರವಾರ ದಿಲ್ಲಿಯ ವಾಯುಮಾಲಿನ್ಯವನ್ನು ಗಮನಿಸಿದವರೆಲ್ಲರೂ ಡೀಸೆಲ್ ಬಸ್ಸುಗಳಿಗೆ ಪರ್ಯಾಯವಾಗಿ ವಿದ್ಯುತ್‌ಶಕ್ತಿಯಿಂದ ಚಲಿಸುವ ಬಸ್ಸುಗಳ ಪರ ವಾದಿಸುವುದರಲ್ಲಿ ಸಂಶಯವಿಲ್ಲ ಎಂದು ಮರ್ಕೆಲ್ ಹೇಳಿದ್ದಾರೆ.

   ಜರ್ಮನ್- ಭಾರತ ಸಹಭಾಗಿತ್ವದಡಿ, ಜರ್ಮನಿಯು ಮುಂದಿನ 5 ವರ್ಷಗಳಲ್ಲಿ ಹಸಿರುನಗರ ಚಲನಶೀಲತೆ ಯೋಜನೆಗೆ 7918 ಕೋಟಿ ರೂಪಾಯಿ ಮೀಸಲಿಟ್ಟಿದೆ. ಇಲೆಕ್ಟ್ರಿಕ್ ಬಸ್ಸು ಸೇರಿದಂತೆ ಹಲವು ಪರಿಸರ ಸ್ನೇಹೀ ಯೋಜನೆಗಳಿಗೆ ಆರ್ಥಿಕ ನೆರವು ಒದಗಿಸಲು ಈ ನಿಧಿಯನ್ನು ಬಳಸಲಾಗುತ್ತದೆ ಎಂದವರು ಹೇಳಿದ್ದಾರೆ.

 ದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಪ್ರಮಾಣಕ್ಕೆ ಕುಸಿದಿದ್ದು ದಿಲ್ಲಿಯಲ್ಲಿ ಶುಕ್ರವಾರ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

  ಭಾರತಕ್ಕೆ ಭೇಟಿ ನೀಡಲು ದಿಲ್ಲಿಗೆ ಆಗಮಿಸಿದ್ದ ಮರ್ಕೆಲ್ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದಾಗ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗಿತ್ತು. ಆ ಸಂದರ್ಭ ಸುತ್ತಮುತ್ತ ಹೊಗೆಮಂಜು ಆವರಿಸಿರುವುದು ವೀಡಿಯೊ ದೃಶ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News