×
Ad

ಬೆಂಗಳೂರು: ನ.9 ರಂದು ಇಖ್ರಾ ಶಾಲೆಯ ಮಕ್ಕಳಿಗೆ ಹಾಫಿಝ್ ಪದವಿ ಪ್ರದಾನ

Update: 2019-11-02 23:02 IST

ಬೆಂಗಳೂರು, ನ.2: ಇಖ್ರಾ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ಮಕ್ಕಳು ಕುರ್‌ಆನ್ ಹಿಫ್ಝ್ ಮಾಡಿದ್ದು, ನ.9ರಂದು ಸಂಜೆ 4.30ಕ್ಕೆ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ನಡೆಯಲಿರುವ ‘ದಸ್ತಾರ್ ಬಂದಿ’ ಕಾರ್ಯಕ್ರಮದಲ್ಲಿ ಅವರಿಗೆ ಹಾಫಿಝ್ ಪದವಿ ಪ್ರದಾನ ಮಾಡಲಾಗುವುದು ಎಂದು ಶಾಲೆಯ ಮುಖ್ಯಸ್ಥ ಮುಹಮ್ಮದ್ ನಝೀರ್ ಅಹ್ಮದ್ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2011ರಲ್ಲಿ ಆರಂಭವಾದ ನಮ್ಮ ಇಖ್ರಾ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಲಂಡನ್‌ನ ಆಕ್ಸ್‌ವರ್ಡ್ ವಿಶ್ವವಿದ್ಯಾಲಯದ ಮಾನ್ಯತೆ ಹೊಂದಿರುವ ಐಜಿಸಿಎಸ್‌ಇ ಪಠ್ಯಕ್ರಮವನ್ನು ಬೋಧಿಸಲಾಗುತ್ತಿದೆ. ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

‘ಮುಂದಿನ ಪೀಳಿಗೆಯ ಶಿಕ್ಷಣ ಹಾಗೂ ತರಬೇತಿಯಲ್ಲಿ ಪೋಷಕರು ಹಾಗೂ ಶೈಕ್ಷಣಿಕ ಸಂಸ್ಥೆಗಳ ಜವಾಬ್ದಾರಿ’ ಕುರಿತು ಪದವಿ ಪ್ರದಾನ ಸಮಾರಂಭದಲ್ಲಿ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸದಸ್ಯ ಮೌಲಾನ ಖಲೀಲುರ್ರಹ್ಮಾನ್ ಸಜ್ಜಾದ್ ನೊಮಾನಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಮುಹಮ್ಮದ್ ನಝೀರ್ ಅಹ್ಮದ್ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮದ್ರಸಾ ದಾರೂಲ್ ಉಲೂಮ್ ಇಮ್ದಾದಿಯಾದ ಮುಖ್ಯಸ್ಥ ಮುಹಮ್ಮದ್ ಮಾಸೂಮ್ ಸಾಖಿಬ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೌಲಾನ ಖಲೀಲುರ್ರಹ್ಮಾನ್ ಉಮ್ರಿ ಮದನಿ ಹಾಗೂ ಜಮಾಅತೆ ಅಹ್ಲೆ ಸುನ್ನತ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮುಫ್ತಿ ಮುಹಮ್ಮದ್ ಅಲಿ ಖಾಝಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News