ವಿಮಾನವನ್ನು ಬಾಹ್ಯಾಕಾಶಕ್ಕೆ ಹಾರಿಸಿದರೆ ಏನಾಗುತ್ತೆ?

Update: 2019-11-03 06:35 GMT

ಯಾವಾಗಲೂ ರಾಕೆಟನ್ನೇ ಬಾಹ್ಯಾಕಾಶಕ್ಕೆ ಹಾರಿಸಲಾಗುತ್ತದೆ. ವಿಮಾನವನ್ನು ಬಾಹ್ಯಾ ಕಾಶಕ್ಕೆ ಕಳುಹಿಸಿದರೆ ಏನಾಗುತ್ತೇ? ಮಾಮ ಇದು ಭಾರ್ಗವನ ಪ್ರಶ್ನೆ. ಅವನ ಪ್ರಶ್ನೆಗೆ ಬೆಚ್ಚಿಬಿದ್ದೆ. ಒಂದುಕ್ಷಣ ಹೌದಲ್ಲ! ಇದುವರೆಗೂ ಭಾರ್ಗವನ ರೀತಿ ನಾವ್ಯಾಕೆ ಯೋಚನೆ ಮಾಡಿಲ್ಲ ಎನ್ನಿಸಿತು. ಸಾವರಿಸಿಕೊಂಡು ಅವನ ಪ್ರಶ್ನೆ ಉತ್ತರಿಸ ತೊಡಗಿದೆ. ಇದು ನಿಮ್ಮ ಪ್ರಶ್ನೆಯೂ ಆಗಿದ್ದರೆ ಮುಂದೆ ಓದಿ...

ವಿಮಾನದ ಚಲನೆಯ ಪ್ರಕ್ರಿಯೆಗೂ ಮತ್ತು ರಾಕೆಟಿನ ಚಲನೆಯ ಪ್ರಕ್ರಿಯೆಗೂ ವ್ಯತ್ಯಾಸಗಳಿವೆ. ಮೊದಲು ವಿಮಾನ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ವಿಮಾನದ ಹಾರಾಟಕ್ಕೆ ರೆಕ್ಕೆಗಳ ಸಹಾಯ ಬೇಕೇ ಬೇಕು. ರೆಕ್ಕೆಗಳು ಗಾಳಿಯನ್ನು ಸೀಳಿಕೊಂಡು ವಿಮಾನ ಮುಂದೆ ಚಲಿಸಲು ಸಹಾಯ ಮಾಡುತ್ತವೆ. ಜೊತೆಗೆ ಗುರುತ್ವಾಕರ್ಷಣೆಯ ವಿರುದ್ಧ ವಿಮಾನ ಹಾರಾಟ ಮಾಡಲು ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ನಾವು ಗಾಳಿಯು ತೆಳುವಾದ ಹಾಗೂ ಹಗುರವಾದ ವಸ್ತು ಎಂದು ಯೋಚಿಸುತ್ತೇವೆ. ಆದರೆ ಅದಕ್ಕೂ ಕೆಳಮುಖ ಮತ್ತು ಮೇಲ್ಮುಖ ಒತ್ತಡಗಳಿವೆ ಎಂದೂ ತಿಳಿದಿದ್ದೇವೆ. ವಿಮಾನದ ಆಕಾರವು ಗಾಳಿಯನ್ನು ಸೀಳಿ, ಮುಂದೆ ಚಲಿಸುವಂತೆ ರಚನೆಾಗಿದೆ.

ದೊಡ್ಡ ದೊಡ್ಡ ಪ್ರಯಾಣಿಕ ವಿಮಾನಗಳು 12 ಕಿ.ಮೀ.ಗಿಂತ ಹೆಚ್ಚು ಎತ್ತರ ಹಾರಲಾರವು. ಏಕೆಂದರೆ ಅಷ್ಟು ಎತ್ತರದಲ್ಲಿ ಸಮತಲವನ್ನು ಹಿಡಿದಿಡಲು ಗಾಳಿಯು ತುಂಬಾ ತೆಳುವಾಗಿರುತ್ತದೆ. ಕೆಲ ವಿಶೇಷ ವಿಮಾನಗಳು ಅದಕ್ಕಿಂತಲೂ ಹೆಚ್ಚಿನ ಎತ್ತರದಲ್ಲಿ ಹಾರಾಟ ನಡೆಸಿದ ಉದಾಹರಣೆಗಳಿವೆ. ನಾಸಾ ನಿರ್ಮಿತ ಹೆಲಿಯೋಸ್ ಎಂಬ ವಿಶೇಷ ವಿಮಾನ 30 ಕಿ.ಮೀ.ವರೆಗೆ ಹಾರಾಟ ನಡೆಸಿತು. ಅಕ್ಟೋಬರ್ 2004ರಲ್ಲಿ ಪಿನಾಕಲ್ ಏರ್‌ಲೈನ್ಸ್ 3701 ಹೆಸರಿನ ಒಂದು ವಿಮಾನವನ್ನು 10 ಕಿ.ಮೀ ಎತ್ತರಕ್ಕೆ ಹಾರಿಸಲು ಯೋಜಿಸಿದ್ದರು. ಆದರೆ ಪೈಲಟ್ 12.5 ಕಿ.ಮೀ ಎತ್ತರಕ್ಕೆ ಹಾರಿಸಿದ. ಇಷ್ಟು ಎತ್ತರಕ್ಕೆ ಏರಿದ ವಿಮಾನದ ಇಂಜಿನಲ್ಲಿ ತಾಂತ್ರಿಕ ದೋಷ ಉಂಟಾಗಿ ಆ ವಿಾನ ನೆಲಕ್ಕೆ ಅಪ್ಪಳಿಸಿ ನಾಶವಾಯಿತು.

ಭೂಮಿಯ ಮೇಲ್ಮೈಗಿಂತ ಮೇಲೆ ಮೇಲೆ ಹೋದಂತೆ ಗಾಳಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಭೂ ಮೇಲ್ಮೈಗಿಂತ 200 ಕಿ.ಮೀ.ಗೂ ಮೇಲೆ ಗಾಳಿಯು ಇರುವುದೇ ಇಲ್ಲ. ಹೆಚ್ಚಿನ ಭೂ ಕಕ್ಷಾ ಕೃತಕ ಉಪಗ್ರಹಗಳೆಲ್ಲಾ ಈ ಎತ್ತರದಲ್ಲೇ ಕಾರ್ಯನಿರ್ವಹಿಸುತ್ತವೆ. ಕಡಿಮೆ ಭೂ ಕಕ್ಷೆಯಲ್ಲಿ ಉಪಗ್ರಹ ಸ್ಥಿರೀಕರಿಸಲೂ ರಾಕೆಟ್ ಬೇಕೇ ಬೇಕು. ರಾಕೆಟ್‌ಗಳು ವಿಮಾನಕ್ಕಿಂತ ಭಿನ್ನವಾಗಿವೆ. ಅವು ತಮ್ಮ ಇಂಧನ ಸುಡುವುದಕ್ಕೆ ಗಾಳಿಯನ್ನು ಅವಲಂಬಿಸಿಲ್ಲ. 17ನೇ ಶತಮಾನದ ಕೊನೆಗೆ ಐಸಾಕ್ ನ್ಯೂಟನ್ ಕಂಡುಹಿಡಿದ ಮೂಲಭೂತ ತತ್ವ ಆಧರಿಸಿ ರಾಕೆಟ್‌ಗಳು ಕಾರ್ಯನಿರ್ವಹಿಸುತ್ತವೆ. ಪ್ರತಿ ಕ್ರಿಯೆಗೂ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆಗಳಿರುತ್ತವೆ ಎಂಬ ನ್ಯೂಟನ್‌ನ ಮೂರನೇ ನಿಯಮದಡಿಯಲ್ಲಿ ರಾಕೆಟ್‌ಗಳು ಕಾರ್ಯನಿರ್ವಹಿಸುತ್ತವೆ. ದೀಪಾವಳಿಯಲ್ಲಿ ನೀವು ಬಳಸುವ ರಾಕೆಟ್ ಪಟಾಕಿ ಇದೇ ನಿಯಮದಡಿ ಕೆಲಸ ಮಾಡುತ್ತದೆ. ರಾಕೆಟ್‌ಗಳ ವೇಗದ ಚಲನೆಗೆ ನಿಷ್ಕಾಸ ಅನಿಲಗಳನ್ನು ಬಳಸಲಾಗುತ್ತದೆ. ಅನಿಲಗಳು ದಹಿಸಲ್ಪಟ್ಟು ಬೆಂಕಿಯನ್ನು ಕೆಳಕ್ಕೆ ಉಗುಳುತ್ತಾ ರಾಕೆಟ್‌ಗಳು ಮೇಲಕ್ಕೆ ಹಾರುತ್ತವೆ. ದಹನಕ್ರಿಯೆಗೆ ಆಮ್ಲಜನಕ ಅಗತ್ಯ. ರಾಕೆಟ್‌ಗಳೂ ಆಮ್ಲಜನಕವನ್ನು ಮೇಲಕ್ಕೆ ಹೊತ್ತೊಯ್ಯುತ್ತವೆ.

ರಾಕೆಟ್‌ಗಳ ಚಲನೆಯ ವೇಗ (ಗಂಟೆಗೆ 25,000ಕಿ.ಮೀ.) ಕ್ಕೆ ಹೋಲಿಸಿದರೆ ವಿಮಾನದ ಚಲನೆಯ ವೇಗ (ಗಂಟೆಗೆ 5,140 ಕಿ.ಮೀ) ತೀರಾ ಕಡಿಮೆ. ವಿಮಾನಗಳು ಮೇಲಕ್ಕೆ ಏರಿದಂತೆಲ್ಲಾ ಆಮ್ಲಜನಕದ ಕೊರತೆಯಿಂದ ಅವುಗಳ ದಹನ ಕ್ರಿಯೆ ನಿಧಾನಗೊಳ್ಳುತ್ತದೆ. ಸಾಮಾನ್ಯವಾಗಿ ವಾಣಿಜ್ಯ ವಿಮಾನಗಳ ಹಾರಾಟದ ಎತ್ತರವು 10 ಕಿ.ಮೀ ದಾಟುವಂತಿಲ್ಲ ಎಂಬ ನಿಯಮವಿದೆ. ಆದರೆ ಕೆಲವು ಪೈಲಟ್‌ಗಳು 13.5ಕಿ.ಮೀ ಎತ್ತರದವರೆಗೆ ವಿಮಾನವನ್ನು ಹಾರಿಸುತ್ತಾರೆ. ಇದು ಕೆಲವು ಗಂಭೀರ ಪರಿಣಾಮಗಳನ್ನು ತಂದೊಡ್ಡುತ್ತದೆ.

ವಿಮಾನವನ್ನು ಹೆಚ್ಚು ಎತ್ತರಕ್ಕೆ ಏರಿಸದಿರಲು ಇನ್ನೊಂದು ಪ್ರಮುಖ ಕಾರಣ ಇಂಧನ. ವಿಮಾನ ಚಲನೆಗೆ ಗ್ಯಾಸೋಲಿನ್ ಎಂಬ ಅನಿಲ ಬಳಸಲಾಗುತ್ತದೆ. ಇದರ ದಹನಕ್ರಿಯೆಗೆ ಆಮ್ಲಜನಕ ಬೇಕು. ಮೇಲೆಕ್ಕೆ ಹೋದಂತೆ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದರಿಂದ ದಹನ ಕ್ರಿಯೆ ಕ್ಷೀಣವಾಗುತ್ತದೆ ಮತ್ತು ವಿಮಾನ ಹಾರಾಟದ ವೇಗ ಕಡಿಮೆಯಾಗುತ್ತದೆ. ಅಲ್ಲದೆ ಬಾಹ್ಯಾಕಾಶಕ್ಕೆ ಹಾರಲು ಬೇಕಾಗುವಷ್ಟು ಇಂಧನವನ್ನು ತುಂಬಿಟ್ಟುಕೊಳ್ಳುವ ಸಾಮರ್ಥ್ಯ ವಿಮಾನಗಳಿಗೆ ಇಲ್ಲ.

Writer - ಆರ್.ಬಿ. ಗುರುಬಸವರಾಜ

contributor

Editor - ಆರ್.ಬಿ. ಗುರುಬಸವರಾಜ

contributor

Similar News