ಸಾಮಾಜಿಕ ನ್ಯಾಯ ಮತ್ತು ಮಾನವೀಯತೆಯ ಗಟ್ಟಿ ದನಿ ಪ್ರೊ.ಕೆ.ಬಿ. ಸಿದ್ದಯ್ಯ

Update: 2019-11-03 09:57 GMT

ಇತ್ತೀಚೆಗೆ ಅಪಘಾತಕ್ಕೀಡಾಗಿ ಅದರಿಂದ ಚೇತರಿಸಿಕೊಳ್ಳ ಲಾಗದೆ ಪ್ರೊ.ಕೆ.ಬಿ.ಸಿದ್ದಯ್ಯನವರು ನಮ್ಮನ್ನೆಲ್ಲಾ ಅಗಲುವುದರ ಮೂಲಕ ಕೇವಲ ಅವರ ಕುಟುಂಬದವರು ಮಾತ್ರವಲ್ಲದೆ ಇಡೀ ಶೋಷಿತ ಸಮುದಾಯಗಳಿಗೆ ಆಘಾತವನ್ನು ಉಂಟುಮಾಡಿದ್ದಾರೆ. ಅವರ ಸಾವು ತಳಸಮುದಾಯಗಳ ಪಾಲಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ನಮ್ಮ ನೆಚ್ಚಿನ ಕೆಬಿಯವರು ಇನ್ನಿಲ್ಲ ಎನ್ನುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ.

ಕೆಬಿಯವರು ದಲಿತ ಚಳವಳಿಯ ಸಂಸ್ಥಾಪಕ ಸದಸ್ಯರ ಲ್ಲೊಬ್ಬರು. ಪ್ರೊ.ಬಿ.ಕೃಷ್ಣಪ್ಪನವರ ಆತ್ಮೀಯ ಒಡನಾಡಿಯಾಗಿದ್ದ ಅವರು ಸಮಾಜವಾದಿ ಯುವಜನ ಸಭಾದ ಸಕ್ರಿಯ ಸದಸ್ಯರಾಗಿದ್ದರು. ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಮೊದಲಿನಿಂದಲೂ ಆದಿ ಜಾಂಬವ ಸಂಘ ಒಳಗೊಂಡಂತೆ ಅನೇಕ ಸಾಮಾಜಿಕ ಸಂಘಟನೆಗಳಲ್ಲಿ ಬಿರುಸಿನಿಂದ ತೊಡಗಿಸಿಕೊಂಡಿದ್ದರು. ರೈತ ಚಳವಳಿಯ ಒಡನಾಟವೂ ಅವರಿಗಿತ್ತು. ದಲಿತರ ಮೇಲಿನ ದೌರ್ಜನ್ಯ, ಭೂಮಾಲಕರ ಅಟ್ಟಹಾಸ, ಮಹಿಳೆಯರ ಮೇಲಿನ ಅತ್ಯಾಚಾರ ಮುಂತಾದ ಶ್ರೇಣೀಕೃತ ಜಾತಿ ಪದ್ಧತಿ ಮತ್ತು ಅದರ ಕ್ರೌರ್ಯದ ಬಗ್ಗೆ ತಮ್ಮಲ್ಲಿರುವ ಆಕ್ರೋಶ ಮತ್ತು ಬಂಡಾಯವನ್ನು ‘‘ಒಂದು ದಹನದ ಕಥೆ’’ ಎನ್ನುವ ಹೋರಾಟದ ಗೀತೆಗಳ ಮೂಲಕ ಹೊರಹಾಕಿ, ದಮನಿತರ ಹೋರಾಟಕ್ಕೆ ಶಕ್ತಿ ತುಂಬಿದರು. ‘‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕಥೆ’’ ಎಂಬ ಅವರ ಹೋರಾಟದ ಹಾಡು ಈಗಲೂ ದಲಿತ ಸಂಗಾತಿಗಳ ಎದೆಯಲ್ಲಿ ಕಿಚ್ಚಾಗಿ ಉರಿಯುತ್ತಿದೆ. ಬಕಾಲ, ದಕ್ಲಕಥಾ ದೇವಿಕಾವ್ಯ, ಅನಾತ್ಮ, ಗಲ್ಲೆಬಾನಿ ಎನ್ನುವ ನಾಲ್ಕು ಖಂಡಕಾವ್ಯಗಳನ್ನು ಬರೆದ ಕೆಬಿಯವರು ತಳ ಸಮುದಾಯಗಳ ಆಧ್ಯಾತ್ಮದ ಅನೇಕ ಪ್ರಕಾರಗಳ ಮೇಲೆ ಬೆಳಕು ಚೆಲ್ಲಿದರು.

ಕನ್ನಡದಲ್ಲಿ ಖಂಡಕಾವ್ಯ ರಚನೆಯಲ್ಲಿ ಕೆಬಿಯವರಿಗೆ ಮತ್ತೊಬ್ಬ ಸರಿಸಾಟಿ ಇಲ್ಲವೇನೋ. ಖಂಡಕಾವ್ಯವು ಓದಲು ಕ್ಲಿಷ್ಟಕರವಾಗಿದ್ದರೂ ಅದರಲ್ಲಿನ ಒಳಾರ್ಥ ಓದುಗರನ್ನು ಬಡಿದೆಬ್ಬಿಸುವಷ್ಟರ ಮಟ್ಟಿಗೆ ಶಕ್ತಿಶಾಲಿಯಾಗಿದೆ. ತನ್ನ ಸಮುದಾಯದ ಸಂಸ್ಕೃತಿ, ಬವಣೆ, ಆಧ್ಯಾತ್ಮ ಮತ್ತು ಜೀವನ ಶೈಲಿಯ ದ್ರವ್ಯವನ್ನು ಬಸಿದುಕೊಂಡು ತನ್ನ ಜನಪದರ ಪುರಾಣಕ್ಕೆ ಕಾವ್ಯದ ಸ್ಪರ್ಶ ನೀಡುವ ಕಲೆಯನ್ನು ಅವರು ಅರಗಿಸಿ ಕೊಂಡಿದ್ದರು. ‘‘ಗದ್ಯದಲ್ಲಿ ದೇವನೂರ ಮಹಾದೇವ ಹೇಗೋ ಹಾಗೆಯೇ ಕಾವ್ಯದಲ್ಲಿ ಕೆ.ಬಿ.ಸಿದ್ದಯ್ಯನವರು ಸಶಕ್ತರು’’ ಎಂದು ಡಾ.ಡಿ.ಆರ್.ನಾಗರಾಜ್ ರವರು ಅಭಿಪ್ರಾಯಪಟ್ಟಿದ್ದಾರೆ. ಬುದ್ಧ ಮತ್ತು ಅಲ್ಲಮರನ್ನು ಆಳವಾಗಿ ಅಧ್ಯಯನ ಮಾಡಿದ್ದ ಕೆಬಿಯವರು ಅವರಿಬ್ಬರನ್ನು ತಮ್ಮಿಳಗೆ ಉಸಿರಾಡುತ್ತಿದ್ದರು. ಬುದ್ಧನ ಧ್ಯಾನ ಮತ್ತು ಅಲ್ಲಮನ ತರ್ಕ ಎರಡರಲ್ಲೂ ಪ್ರಾವಿಣ್ಯತೆ ಹೊಂದಿದ್ದರು. ಈ ಕಾರಣಕ್ಕಾಗಿಯೇ ಅವರೊಂದಿಗೆ ಸಂವಾದಿಸಲು ಸಾಹಿತ್ಯಾಸಕ್ತರು ಮತ್ತು ಚಿಂತಕರು ಹಾತೊರೆಯುತ್ತಿದ್ದರು. ಎದುರಿಗಿರುವವರು ಕಣ್ಣರೆಪ್ಪೆ ಬಿಡದಂತೆ ರಾತ್ರಿಯಿಡೀ ಬುದ್ಧ ಮತ್ತು ಅಲ್ಲಮರನ್ನು ಮುಖಾ ಮುಖಿಯಾಗಿಸಿಕೊಂಡು ಬೇರೊಂದು ಆಧ್ಯಾತ್ಮಿಕ ಲೋಕಕ್ಕೆ ಕರೆದೊಯ್ಯುತ್ತಿದ್ದ ಅವರ ಚಿಂತನಾಲಹರಿ ಹಾಗೂ ತಾರ್ಕಿಕ ಗತ್ತಿಗೆ ಮನಸೋತವರಿಗೆ ಲೆಕ್ಕವಿಲ್ಲ. ‘‘ಹೊರಗೆ ಐಲುಪೈಲಿನಂತೆ ಒಳಗೆ ತುಂಟ ಸಂತನಂತೆ ಕಾಣುವ ವ್ಯಕ್ತಿತ್ವ ಕೆಬಿಯದ್ದು’’ ಎಂದು ಪ್ರೊ.ದೇವನೂರ ಮಹಾದೇವರವರು ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ನೇರ ನುಡಿ ಮತ್ತು ಹಠಮಾರಿ ಧೋರಣೆಗೆ ಹೆಸರಾಗಿದ್ದ ಬೀಕೆಯವರು ಯಾವುದರಲ್ಲೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಅವರು ತಮ್ಮ ‘‘ಬಕಾಲ’’ ಖಂಡಕಾವ್ಯದ ಪ್ರತಿಯನ್ನು ಲಂಕೇಶ್ ರವರಿಗೆ ನೀಡಿದ ಸಂದರ್ಭದಲ್ಲಿ ಅದರ ಒಳಪುಟಗಳಲ್ಲಿ ಕಣ್ಣಾಡಿಸಿದ ಲಂಕೇಶ್‌ರವರು, ಈ ಕಾವ್ಯದ ಭಾಷೆ ಅರ್ಥ ಆಗೋದಿಲ್ವಲ್ಲ ಎಂದಾಗ, ‘ಹೌದು ನಾನು ಹಾಗೇನೆ ಬರೆಯೋದು’ ಎಂದಿದ್ದರಂತೆ. ಜಾತಿವಿನಾಶಕ್ಕೆ ಅಂತರ್ಜಾತಿ ಮದುವೆಗಳು ಹೆಚ್ಚು ನಡೆಯಬೇಕು ಎನ್ನುವ ಸಂದರ್ಭದಲ್ಲಿ, ತಳಸಮುದಾಯಗಳಲ್ಲೂ ಗಟ್ಟಿಯಾಗಿ ತಳವೂರಿರುವ ಜಾತಿ ಪ್ರಜ್ಞೆ ಹಾಗೂ ಮೇಲು ಕೀಳೆಂಬ ಭೇದ ಭಾವವನ್ನು ಮೊದಲು ಕಿತ್ತೆಸೆಯಬೇಕು ಎನ್ನುವ ಧೋರಣೆ ತಾಳಿ, ಮಾದಿಗ ಸಮುದಾಯದ ಅವರು ಚಲವಾದಿ ಸಮುದಾಯದ ಗಂಗರಾಜಮ್ಮನವರನ್ನು ಪ್ರೀತಿಸಿ ಮದುವೆಯಾಗಿ ಇಡೀ ಅಸ್ಪಶ್ಯ ಮತ್ತು ಇತರ ಶೋಷಿತ ಸಮುದಾಯಗಳಿಗೆ ಮಾದರಿಯಾದರು. ಆದರೆ, ಅವರ ಪ್ರೇಮ ವಿವಾಹಕ್ಕೆ ಗಂಗರಾಜಮ್ಮನವರ ಕುಟುಂಬ ಒಪ್ಪದೇ ಇದ್ದುದರಿಂದ ದೊಡ್ದ ಹೋರಾಟವೇ ಮಾಡಬೇಕಾಯಿತೆಂದು ಈಗಲೂ ದಲಿತ ಚಳವಳಿಯ ಹಿರಿಯ ನಾಯಕರು ಮಾತನಾಡಿಕೊಳ್ಳುತ್ತಾರೆ. ಕೆಬಿಯವರ ಈ ವಿಶೇಷ ಮದುವೆಯಿಂದಲೇ ಸಮಾಜವಾದಿ ನಾಯಕ ಕಿಶನ್ ಪಟ್ನಾಯಕ್‌ರವರ ಪ್ರೀತಿಗೆ ಪಾತ್ರರಾಗಿದ್ದರಂತೆ. 1996ರಲ್ಲಿ ದಲಿತ ಚಳವಳಿ ಮತ್ತು ಸಾಹಿತ್ಯದ ಹಿನ್ನೆಲೆಯವರೊಬ್ಬರನ್ನು ವಿಧಾನಪರಿಷತ್‌ಗೆ ನಾಮಕರಣ ಮಾಡಬಹುದೆನ್ನುವಂತಹ ಸಂದರ್ಭದಲ್ಲಿ ಪ್ರೊ.ಕೆ.ಬಿ. ಮತ್ತು ಡಾ.ಎಲ್. ಹನುಮಂತಯ್ಯ (ಸಾಹಿತಿಗಳು ಮತ್ತು ಇಂದಿನ ರಾಜ್ಯಸಭಾ ಸದಸ್ಯರು) ಇಬ್ಬರೂ ಪ್ರಯತ್ನ ನಡೆಸಿದ್ದರಂತೆ. ಒಂದು ದಿನ ಇಬ್ಬರು ಪಾರ್ಕ್ ಒಂದರಲ್ಲಿ ಕುಳಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ, ನಾನು ಈ ಪ್ರಯತ್ನದಿಂದ ಹಿಂದೆ ಸರಿದು, ‘ನಿಮ್ಮ ಪರವಾಗಿ ನೀವು ಯಾರಿಗೆ ಹೇಳುತ್ತೀರೋ ಅವರಿಗೆ ಪತ್ರ ಬರೆಯುತ್ತೇನೆ’ ಎಂದು ನಿಷ್ಕಲ್ಮಷವಾಗಿ ಕೆ.ಬಿ.ಯವರು ಹೇಳಿದರಂತೆ. ‘‘ಬೇಡ ಸರ್, ಇಬ್ಬರೂ ಪ್ರಯತ್ನ ಮಾಡೋಣ, ಇಬ್ಬರಲ್ಲಿ ಒಬ್ಬರಿಗಾದರೂ ಅವಕಾಶ ಸಿಕ್ಕರೆ ಒಳ್ಳೆಯದಲ್ಲವೇ’’ ಎಂದು ಡಾ.ಎಲ್.ಹನುಮಂತಯ್ಯನವರು ಸಮಾಧಾನಪಡಿಸಿದರಂತೆ. ಕೊನೆಗೆ, ಇಬ್ಬರಿಗೂ ಆ ಅವಕಾಶ ಸಿಗಲಿಲ್ಲ ಎನ್ನುವುದು ಬೇರೆ ವಿಷಯ. ಈ ಒಂದು ಉದಾಹರಣೆ ಅವರ ಮುಕ್ತ ಮನಸ್ಸಿನ ಸಂಕೇತ. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಬರಬೇಕು ಮತ್ತು ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಬೇಕು, ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ ಸೋಲಬೇಕು ಎನ್ನುವ ಕೆ.ಬಿ.ಯವರ ಹೇಳಿಕೆ ಭಾರೀ ವಿವಾದ ಸೃಷ್ಟಿಸಿತು. ಡಾ.ಎಲ್.ಹನುಮಂತಯ್ಯನವರು ತುಮಕೂರಿನ ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಅವರನ್ನು ಭೇಟಿ ಮಾಡಿ, ಈ ರೀತಿಯ ಹೇಳಿಕೆ ಸಮಂಜಸವಲ್ಲ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ದಲಿತ ಸಮುದಾಯಕ್ಕೆ ಒಳಿತಾಗುವುದಿಲ್ಲ ಎಂದು ಮನವೊಲಿಸಲು ಮುಂದಾದಾಗ, ‘‘ಹೌದು, ನಾನು ಹೇಳಿದ್ದು ಸರಿ’’ ಎಂದು ಖಡಾಖಂಡಿತವಾಗಿ ಒಂದೇ ಮಾತಿನಲ್ಲಿ ಹೇಳಿಬಿಟ್ಟರಂತೆ. ಪರಿಶಿಷ್ಟ ಜಾತಿ ಮೀಸಲಾತಿಯ ವರ್ಗೀಕರಣದ ಹೋರಾಟಕ್ಕೆ ಮತ್ತು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಅನುಷ್ಠಾನಕ್ಕೆ ಡಾ.ಜಿ.ಪರಮೇಶ್ವರ ಬೆಂಬಲ ಕೊಡುತ್ತಿಲ್ಲ ಹಾಗೂ ತುಮಕೂರು ಜಿಲ್ಲೆ ಒಳಗೊಂಡಂತೆ ರಾಜ್ಯದ ವಿವಿಧೆಡೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಡಾ.ಜಿ.ಪರಮೇಶ್ವರ ಚಕಾರ ಎತ್ತುತ್ತಿಲ್ಲ ಎನ್ನುವ ಸಾತ್ವಿಕ ಸಿಟ್ಟು ಮತ್ತು ಅದನ್ನು ನೇರವಾಗಿ ಹೇಳುವ ಎದೆಗಾರಿಕೆ ಅವರದ್ದಾಗಿತ್ತು.

ಧ್ಯಾನದಿಂದ ಕೋಪ ತಾಪ ಮತ್ತು ಕಾಯಿಲೆಯನ್ನು ನಿಯಂತ್ರಿಸಬಹುದೆಂದು ಧೃಢವಾಗಿ ನಂಬಿದ್ದ ಅವರು ಕಾಯಿಲೆ ಬಂದಾಗ ಹಾಸ್ಪಿಟಲ್‌ಗೆ ಹೋಗದೆ ಕೇವಲ ಧ್ಯಾನದಿಂದ ವಾಸಿಮಾಡಿಕೊಳ್ಳುತ್ತಿದ್ದರಂತೆ. ಅವರ ಅತಿಯಾದ ಧ್ಯಾನಾಸಕ್ತಿ ಮತ್ತು ಅದರೆಡೆಗಿನ ಅಚಲವಾದ ನಂಬಿಕೆಯೇ ಒಂದು ರೀತಿಯಲ್ಲಿ ಅವರ ಸಾವಿಗೆ ಕಾರಣವಾಯಿತೆಂದು ಅನೇಕರು ಚಡಪಡಿಸುತ್ತಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತವಾಗಿ, ಚಾಲಕ ಸ್ಥಳದಲ್ಲೇ ಮೃತಪಟ್ಟು, ಕೆ.ಬಿ.ಯವರು ಅಪಘಾತದ ತೀವ್ರತೆಗೆ ಕಾರಿನ ಬಾಗಿಲು ಮುರಿದು ಆಚೆ ಎಸೆಯಲ್ಪಟ್ಟಿದ್ದರೂ ಕೂಡಲೇ ಹಾಸ್ಪಿಟಲಿನಲ್ಲಿ ದಾಖಲಾಗದೆ ಧ್ಯಾನದ ಮೊರೆಹೋಗಿ ಕೊನೆಗೆ ಆರೋಗ್ಯ ತೀರಾ ಹದಗೆಟ್ಟಾಗ ತುಮಕೂರಿನಿಂದ ಬೆಂಗಳೂರಿನ ಮಣಿಪಾಲ್ ಹಾಸ್ಪಿಟಲಿನಲ್ಲಿ ದಾಖಲಾಗುವುದರೊಳಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ಅದರ ಪರಿಣಾಮವಂತೂ ಘನಘೋರ.

ಅವರ ಕುಟುಂಬದ ಜೊತೆಗೆ ಇಡೀ ಶೋಷಿತ ಸಮಾಜ ಬುದ್ಧ ಮತ್ತು ಅಲ್ಲಮರನ್ನು ಒಟ್ಟಿಗೆ ಕಳೆದು ಕೊಂಡು ತಬ್ಬಲಿಯಾಗಿದೆ. ಸಾಮಾಜಿಕ ನ್ಯಾಯ ಮತ್ತು ಮಾನವೀಯತೆಯ ಪರವಾದ ಗಟ್ಟಿ ದನಿ ಕಳೆದುಹೋದಂತಾಗಿದೆ.

Writer - ವೈ.ಮರಿಸ್ವಾಮಿ

contributor

Editor - ವೈ.ಮರಿಸ್ವಾಮಿ

contributor

Similar News