ಅನ್ನಭಾಗ್ಯ ಯೋಜನೆಗೆ ಮೋದಿ ಅವರ ಅಪ್ಪನ ದುಡ್ಡು ನೀಡಿಲ್ಲ: ದಿನೇಶ್ ಗುಂಡೂರಾವ್

Update: 2019-11-03 13:34 GMT

ಬೆಂಗಳೂರು, ನ.3: ಅನ್ನಭಾಗ್ಯ ಯೋಜನೆ ಕೇಂದ್ರ ಸರಕಾರದ್ದು ಎನ್ನುವುದು ಸರಿಯಲ್ಲ. ಅಲ್ಲದೆ, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪನ ದುಡ್ಡು ನೀಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ರವಿವಾರ ನಗರದ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಗೆ ಕಾಂಗ್ರೆಸ್‌ನವರು ಅವರಪ್ಪನ ದುಡ್ಡು ಕೊಟ್ಟಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಆದರೆ, ಈ ಯೋಜನೆಗೆ ಬಿಜೆಪಿ ಆಗಲಿ, ಪ್ರಧಾನಿ ನರೇಂದ್ರ ಮೋದಿ ಅವರಾಗಲಿ, ಅವರಪ್ಪನ ದುಡ್ಡನ್ನು ಕೊಟ್ಟಿಲ್ಲ ಎಂದರು.

ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಸರಕಾರದ ಪಾಲು ಇದೆ ಎನ್ನುವುದು ನಿಜ. ಆದರೆ, ಇದನ್ನು ಜಾರಿಗೊಳಿಸಿದ್ದು ಈ ಹಿಂದಿನ ಯುಪಿಎ ಸರಕಾರ. ಅಧಿಕ ಬೆಲೆಯ ಗೋಧಿ ಮತ್ತು ಅಕ್ಕಿಯನ್ನು ಅತಿ ಕಡಿಮೆ ದರಕ್ಕೆ ನೀಡುವ ಆದೇಶವನ್ನು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲೋಕಾಸಭೆಯಲ್ಲಿಯೇ ಜಾರಿಗೆ ಮುಂದಾದರು ಎಂದು ವಿವರಿಸಿದರು.

ಗುಜರಾತ್ ರಾಜ್ಯಕ್ಕೆ ಮೂರು ಬಾರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾದರೂ, ಈ ಯೋಜನೆ ಏಕೆ ಜಾರಿಯಾಗಿಲ್ಲ. ಅಷ್ಟೇ ಅಲ್ಲದೆ, ಬಿಜೆಪಿ ಆಡಳಿತದಲ್ಲಿರುವ ಇತರೆ ರಾಜ್ಯಗಳಲ್ಲೂ ಈ ಯೋಜನೆಯೇ ಇಲ್ಲ ಎಂದ ಅವರು, ನಳಿನ್ ಕುಮಾರ್ ಅವರು ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ, ಈ ಯೋಜನೆಗೆ ಯಾರೇ ಹಣ ನೀಡಿದರೂ, ಜನರ ತೆರಿಗೆಯಿಂದ ಸಂಗ್ರಹಿಸಿರುವ ಹಣವಾಗಿರುತ್ತದೆ. ಈ ಬಗ್ಗೆ ಮಾತನಾಡುವ ಬಿಜೆಪಿ ನಾಯಕರಿಗೆ ತಿಳಿವಳಿಕೆ ಇರಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News