ಸ್ಥಳೀಯ ಸಂಸ್ಥೆಗಳ ಚುನಾವಣೆ: ಗಂಭೀರವಾಗಿ ಪರಿಗಣಿಸಿದ ರಾಜಕೀಯ ಪಕ್ಷಗಳು

Update: 2019-11-03 15:28 GMT

ಬೆಂಗಳೂರು, ನ.3: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ತಿಂಗಳು ಉಪ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅವಧಿ ಮುಕ್ತಾಯಗೊಳ್ಳುತ್ತಿರುವ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆಯನ್ನು ಎಲ್ಲ ಪಕ್ಷಗಳೂ ಗಂಭೀರವಾಗಿ ಪರಿಗಣಿಸಿವೆ.

ಕಳೆದ ಮೇನಲ್ಲಿ ನಡೆದಿದ್ದ 63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದ್ದು, ಬಿಜೆಪಿ ಮುಖಭಂಗವನ್ನು ಅನುಭವಿಸಿತ್ತು. ಈ ಕಾರಣದಿಂದಾಗಿ, ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಇದೇ ಫಲಿತಾಂಶವೇ ಉಪ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.

ಈ ಚುನಾವಣೆ ಮುಂದಿನ ಚುನಾವಣೆಯ ಜನಾದೇಶವಾಗಬಹುದೆಂಬ ನಿರೀಕ್ಷೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪೈಪೋಟಿಗಿಳಿದಿವೆ. ಸ್ಥಳೀಯ ಮುಖಂಡರನ್ನೇ ಮುಂದಿಟ್ಟುಕೊಂಡು ಈ ಚುನಾವಣೆ ನಡೆಸಿ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಪಡಿಸುವ ಉದ್ದೇಶವನ್ನು ರಾಜಕೀಯ ನಾಯಕರು ಇಟ್ಟುಕೊಂಡಿದ್ದಾರೆ. 13 ಲಕ್ಷ ಮತದಾರ ಈ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿರುವುದರಿಂದ ಮುಂಬರುವ ಚುನಾವಣೆಗೆ ಈ ಚುನಾವಣೆ ದಿಕ್ಸೂಚಿ ಎಂದೇ ರಾಜಕೀಯ ಪಕ್ಷಗಳು ಪರಿಭಾವಿಸಿವೆ.

ಆಯೋಗ ಸಕಲ ಸಿದ್ಧತೆ: ರಾಜ್ಯದ 14 ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯ ಸಂಬಂಧ ನಾಳೆ(ನ.4) ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದು, ನ.12ಕ್ಕೆ ಚುನಾವಣೆ ನಡೆಯಲಿದೆ. ಎಲ್ಲ ಕಡೆಗಳಲ್ಲಿ ಚುನಾವಣೆಯನ್ನು ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ಕೂಡ ಸನ್ನದ್ಧವಾಗಿದೆ. ಚುನಾವಣೆ ಪೂರ್ವ ಸಿದ್ಧತೆ ಪರಿಶೀಲನೆಗಾಗಿ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು ಅವರು ಸೋಮವಾರ ಮಂಗಳೂರು ಮಹಾನಗರ ಪಾಲಿಕೆಗೆ ಭೇಟಿ ನೀಡಲಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್: ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಆಯಾ ಜಿಲ್ಲಾಡಳಿತಗಳು ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಿವೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಚುನಾವಣೆ ಆಯೋಗ ಚುನಾವಣಾ ಅಕ್ರಮಗಳನ್ನು ತಡೆಯುವ ಹಿನ್ನೆಲೆಯಲ್ಲಿ ಸಾಮಾನ್ಯ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರನ್ನು ನೇಮಕ ಮಾಡಿದೆ. 2 ಮಹಾನಗರ ಪಾಲಿಕೆಯ 105, 6 ನಗರಸಭೆಗಳ 194, 3 ಪುರಸಭೆಗಳ 69, 3 ಪಟ್ಟಣ ಪಂಚಾಯತ್ ನ 50 ಸೇರಿದಂತೆ 418 ವಾರ್ಡ್‌ಗಳಿಗೆ ನ.12 ರಂದು ಚುನಾವಣೆ ನಡೆಯಲಿದೆ. 1,388 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, 13, 04,614 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

ಇವಿಎಂ ಪರಿಶೀಲನೆ: ಈ ಎಲ್ಲ ಚುನಾವಣೆಗಳಲ್ಲಿ ಇವಿಎಂ ಬಳಕೆ ಮಾಡುತ್ತಿದ್ದು, ಇವಿಎಂಗಳನ್ನು ಪರೀಕ್ಷಿಸಿ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಒಂದೇ ವಾರ್ಡ್‌ನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಂದರ್ಭಗಳಿರುವ ಹಿನ್ನೆಲೆಯಲ್ಲಿ ಮತದಾರರಿಗೆ ಉಂಟಾಗುವ ಗೊಂದಲ ತಪ್ಪಿಸಲು ಇವಿಎಂಗಳಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಅಳವಡಿಸಲಾಗುತ್ತದೆ. ಈ ಚುನಾವಣೆಯಲ್ಲಿ ಮತದಾರರ ಎಡಗೈ ಉಂಗುರ ಬೆರಳಿಗೆ ಶಾಯಿ ಹಾಕಲಾಗುತ್ತದೆ.

ಮತದಾನದ ಪ್ರಮಾಣ: ಮೇ 2 ರಂದು ನಡೆದ 61 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.72.09 ಮತದಾನವಾಗಿತ್ತು. ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ಕ್ರಮಗಳನ್ನು ಜಿಲ್ಲಾಧಿಕಾರಿಗಳು ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News