ನನ್ನ ಹೆಣದ ಮೇಲೆ ಕಟ್ಟಡ ನಿರ್ಮಿಸಲಿ: ಎಚ್.ಎಸ್.ದೊರೆಸ್ವಾಮಿ

Update: 2019-11-03 16:13 GMT

ಬೆಂಗಳೂರು, ನ.3: ಕಬ್ಬನ್ ಉದ್ಯಾನವನದಲ್ಲಿ ಯಾವುದೇ ಕಾರಣಕ್ಕೂ ಏಳು ಮಹಡಿಯ ಕಟ್ಟಡ ನಿರ್ಮಿಸಬಾರದು. ಜನರ ಹಿತಾಸಕ್ತಿಗೆ ವಿರೋಧವಾಗಿ ಕಟ್ಟಲು ಮುಂದಾದರೆ ನನ್ನ ಹೆಣದ ಮೇಲೆ ಕಟ್ಟಡ ನಿರ್ಮಾಣ ಮಾಡಲಿ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ರವಿವಾರ ನಗರದ ಕಬ್ಬನ್‌ಪಾರ್ಕ್‌ನಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸಲು ಮುಂದಾಗಿರುವ ಸರಕಾರದ ಕ್ರಮವನ್ನು ಖಂಡಿಸಿ ಕಬ್ಬನ್‌ಪಾರ್ಕ್ ನಡಿಗೆದಾರರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಬ್ಬನ್ ಉದ್ಯಾನದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸಲು ಬಿಡುವುದಿಲ್ಲ. ಸರಕಾರ ತನ್ನ ಮೊಂಡುತನವನ್ನು ಹೀಗೆಯೇ ಮುಂದುವರೆಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಕಬ್ಬನ್ ಉದ್ಯಾನವನ ಮೊದಲು 300 ಎಕರೆ ಪ್ರದೇಶದಲ್ಲಿ ಹರಡಿಕೊಂಡಿತ್ತು. ಈಗ ಅದು 150 ಎಕರೆಗೆ ಇಳಿದಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ಪೀಳಿಗೆಗೆ ನಾವು ಏನು ಬಿಟ್ಟುಹೋಗಬೇಕು. ಈಗಾಗಲೇ ನಗರದಲ್ಲಿ ವಾಯುಮಾಲಿನ್ಯ ಹೆಚ್ಚಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಗರದಲ್ಲಿ ಕೆಲವೇ ಉದ್ಯಾನವನಗಳನ್ನು ಹೀಗೆ ನಾಶ ಮಾಡುತ್ತಾ ಹೋದರೆ ನಮ್ಮ ಮುಂದಿನ ಪೀಳಿಗೆ ಬದುಕುವುದಾದರು ಹೇಗೆ ಎಂದು ಅವರು ಪ್ರಶ್ನಿಸಿದರು.

ಲಂಚಮುಕ್ತ ಕರ್ನಾಟಕ ವೇದಿಕೆಯ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಾತನಾಡಿ, ಸರಕಾರ ಕಟ್ಟಡ ನಿರ್ಮಾಣಕ್ಕೆ ನಿರ್ಧಾರ ಕೈಗೊಂಡಿರುವುದು ಮತ್ತು ಇದಕ್ಕೆ ನ್ಯಾಯಾಲಯ ಒಪ್ಪಿಕೊಂಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ಯಾರೂ ಆಕ್ಷೇಪಣೆ ಸಲ್ಲಿಸದಿದ್ದರೆ ಸರಕಾರ ತನಗೆ ಬೇಕಾದಂತೆ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಟಿ ಅಕ್ಷತಾ ರಾವ್, ವಸುಂಧರಾ ದಾಸ್ ಸೇರಿ ನೂರಾರು ಮಕ್ಕಳು, ಹಿರಿಯ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News