ರಾಜಕಾರಣಿಗಳಿಗೆ ಇತಿಹಾಸದ ಪ್ರಜ್ಞೆ ಇರಬೇಕು: ಪ್ರೊ.ಬರಗೂರು ರಾಮಚಂದ್ರಪ್ಪ

Update: 2019-11-03 18:03 GMT

ಬೆಂಗಳೂರು, ನ.3: ರಾಜಕಾರಣಿಗಳಿಗೆ ಇತಿಹಾಸದ ಪ್ರಜ್ಞೆ ಇರಬೇಕು ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ರವಿವಾರ ಬಸವನಗುಡಿಯ ವಾಡಿಯ ಸಭಾಂಗಣದಲ್ಲಿ ಅಂಕಿತ ಪುಸ್ತಕ ವತಿಯಿಂದ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಐದು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜನಪ್ರಿಯ ಯೋಜನೆಗಳನ್ನು ದೊಡ್ಡ ಪ್ರಮಾಣದಲ್ಲಿ ರೂಪಿಸಿದವರು ದೇವರಾಜ ಅರಸು ಅವರು. ಅವರ ಆಡಳಿತದ ಅವಧಿಯಲ್ಲಿ ಕರ್ನಾಟಕದಲ್ಲಿ ಆರ್ಥಿಕ ಭದ್ರತೆ ಇತ್ತು ಎಂದು ಅನೇಕ ಆರ್ಥಿಕ ತಜ್ಞರು ಬರೆಯುತ್ತಾರೆ. ಆದರೆ, ಅದನ್ನು ಓದದೇ ಟೀಕಿಸುವವರು ಇದ್ದಾರೆ. ಅದೇ ರೀತಿ ಜನಪ್ರಿಯ ಕಲೆ ಸಹ ನಮ್ಮ ಒಟ್ಟು ಸಾಹಿತ್ಯ, ಸಿನಿಮಾ, ಕಲಾ ವಲಯಕ್ಕೆ ದೊಡ್ಡ ಅನ್ಯಾಯ ಮಾಡುತ್ತೆ ಎಂದು ನಾನು ಭಾವಿಸಿಲ್ಲ. ಯಾವುದೇ ಕಲಾ ಪ್ರಕಾರವನ್ನು ಅನಾಧರ ಮತ್ತು ಸಿನಿಕತನದಿಂದ ನೋಡುವುದನ್ನು ಬಿಡಬೇಕು. ಟೀಕೆ ಮಾಡುವುದಕ್ಕೂ ಮುನ್ನ ಓದಬೇಕು, ನೋಡಬೇಕು ಎಂಬುದು ನನ್ನ ಕಾಳಜಿ ಎಂದು ಹೇಳಿದರು.

ಕನ್ನಡದ ಕೆಲವು ವಿಮರ್ಶಕರು ಸಿನಿಮಾ ನಮ್ಮ ಸಂಸ್ಕೃತಿಯ ಭಾಗವಾಗಿಲ್ಲ ಎಂದು ಬರೆದಿದ್ದಾರೆ ಇದು ತಪ್ಪು ಕಲ್ಪನೆ. ಜನಪ್ರಿಯ ಎಂದರೆ ಸಂಸ್ಕೃತಿಯ ಭಾವನೆಯಲ್ಲ. ಸಂಸ್ಕೃತಿಯಲ್ಲಿ ಏಕರೂಪತೆ ಅನ್ನುವುದು ಇರುವುದಿಲ್ಲ. ಭಾರತೀಯತೆ ಅನ್ನುವುದೇ ಬಹುರೂಪತೆ. ಜನಪ್ರೀಯತೆ ಬಗ್ಗೆ ವಿಮರ್ಶೆ, ಟೀಕೆ ಮಾಡಬೇಕು ಎಂದು ಹೇಳಿದರು.

ಲೇಖಕ ಡಾ. ಕೆ. ಪುಟ್ಟಸ್ವಾಮಿ ಮಾತನಾಡಿ, ಸಿನಿಮಾ ಗಾಂಭೀರ್ಯತೆಯ ಕುರಿತು ಅಧ್ಯಯನ ನಡೆಯಬೇಕು. ಸಿನಿಮಾ ರಂಗವನ್ನು ಆಧರದಿಂದ ಕಾಣಬೇಕಾಗಿದೆ. ಸಿನಿಮಾ ಕುರಿತು ವಿಮರ್ಶೆ ಅಗತ್ಯ. ಅನ್ಯಭಾಷೆಯಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ವಿಮರ್ಶೆ ನಡೆಯುತ್ತಿದೆ. ಆದರೆ, ಕನ್ನಡ ಭಾಷೆಯ ಸಿನಿಮಾಗಳ ವಿಮರ್ಶೆ ತೀರಾ ಕಡಿಮೆ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಘುನಾಥ ಚ.ಹ ಅವರ ‘ಬೆಳ್ಳಿತೊರೆ’, ಸಂತೋಷ ಕುಮಾರ್ ಅವರ ‘ಎಂಟೆಬೆ’, ವಿಕಾಸ್ ನೇಗಿಲೋಣಿ ಅವರ ’ಬಸವರಾಜ ವಿಳಾಸ’, ಕೆ.ಟಿ. ಗಟ್ಟಿ ಅವರ ಕಾದಂಬರಿಗಳಾದ ‘ಅಬ್ರಾಹ್ಮಣ’ ಮತ್ತು ‘ಇತಿಹಾಸದ ಮೊಗಸಾಲೆಯಲ್ಲಿ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಲೇಖಕ ಜೋಗಿ ಹಾಗೂ ಕೃತಿಯ ಲೇಖಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News