ಐಎಂಎ ಪ್ರಕರಣದಲ್ಲಿ ಪೊಲೀಸರಿಂದ ಕಿರುಕುಳ: ಫರೀದಾ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ- ಹೈಕೋರ್ಟ್ ಸೂಚನೆ

Update: 2019-11-04 14:06 GMT

ಬೆಂಗಳೂರು, ನ.4: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ತಮ್ಮ ಪತಿ ಸಾಕ್ಷಿ ಹೇಳಲು ಮುಂದೆ ಬಂದಿದ್ದಕ್ಕೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ತಮ್ಮ ಪತಿ ಇಷ್ತಿಯಾಕ್ ಪೈಲ್ವಾನ್‌ಗೆ ಪೊಲೀಸರು ಠಾಣೆಗೆ ಕರೆಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಶಿವಾಜಿನಗರದ ಬಿಬಿಎಂಪಿ ಸದಸ್ಯೆ ಫರೀದಾ ಇಷ್ತಿಯಾಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಸರಕಾರದ ಪರ ವಾದಿಸಿದ ವಕೀಲರು, ಫರೀದಾ ಪತಿ ಇಷ್ತಿಯಾಕ್ ರೌಡಿ ಶೀಟರ್ ಆಗಿದ್ದಾನೆ. ಸಿಲಿಕಾನ್ ಸಿಟಿಯ ಕೆಲ ಠಾಣೆಗಳಲ್ಲಿ ಆತನ ವಿರುದ್ಧ ಒಟ್ಟು 50 ಪ್ರಕರಣಗಳು ದಾಖಲಾಗಿವೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಇಷ್ತಿಯಾಕ್ ನೊಂದವರು ಎಂದು ಅರ್ಜಿದಾರರು ಹೇಗೆ ಹೇಳುತ್ತಿದ್ದಾರೆ. ಆತನ ಮೇಲೆ 50 ಪ್ರಕರಣಗಳು ದಾಖಲಾಗಿದ್ದು, ರೌಡಿ ಶೀಟರ್ ಪಟ್ಟಿಯಲ್ಲಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರಕಾರಕ್ಕೆ ಸೂಚಿಸಿತು.

ಮಾಜಿ ಸಚಿವ ರೋಷನ್ ಬೇಗ್ ಅವರು ಐಎಂಎನಿಂದ 1.50 ಕೋಟಿ ರೂ.ಪಡೆದಿದ್ದಾರೆ ಎಂದು ಇಷ್ತಿಯಾಕ್ ಪೈಲ್ವಾನ್ ಸಾಕ್ಷಿ ನುಡಿದಿದ್ದಾರೆ. ಪೊಲೀಸರು ಪೈಲ್ವಾನ್‌ಗೆ ಪದೇ ಪದೇ ಪೊಲೀಸ್ ಠಾಣೆಗೆ ಬರಲು ಹೇಳುತ್ತಿದ್ದಾರೆ. ಅದರ ಜೊತೆಗೆ ಗೂಂಡ ಕಾಯ್ದೆಯಡಿ ಬಂಧಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ. ಇದರಲ್ಲಿ ಮಾಜಿ ಸಚಿವ ಬೇಗ್ ಕೈವಾಡ ಕೂಡ ಇದೆ. ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಪಾಲಿಕೆ ಸದಸ್ಯೆ ಫರೀದಾ ಇಷ್ತಿಯಾಕ್ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News