ಅಧಿಕ ಟೆಸ್ಟೊಸ್ಟೆರೋನ್ ಹೊಂದಿರುವ ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಹೆಚ್ಚು

Update: 2019-11-04 15:18 GMT

ಪ್ರಾಸ್ಟೇಟ್ ಕ್ಯಾನ್ಸರ್ ಶ್ವಾಸಕೋಶಗಳ ಕ್ಯಾನ್ಸರ್‌ನ ನಂತರ ಪುರುಷರನ್ನು ಅತ್ಯಂತ ಹೆಚ್ಚಾಗಿ ಕಾಡುವ ಕ್ಯಾನ್ಸರ್‌ನ ರೂಪವಾಗಿದೆ. ಪುರುಷ ಹಾರ್ಮೋನ್ ಟೆಸ್ಟೊಸ್ಟೆರೋನ್ ಅನ್ನು ಅಧಿಕ ಮಟ್ಟದಲ್ಲಿ ಹೊಂದಿರುವವರು ಸದ್ಯೋಭವಿಷ್ಯದಲ್ಲಿ ಪ್ರಾಸ್ಟೇಟ್ ಕ್ಯಾನರ್‌ಗೆ ಗುರಿಯಾಗುವ ಹೆಚ್ಚಿನ ಸಾಧ್ಯತೆಯಿರುತ್ತದೆ ಎಂದು ಪುರುಷರ ಆರೋಗ್ಯದ ಕುರಿತು ಇತ್ತೀಚಿಗೆ ನಡೆಸಲಾದ ಅಧ್ಯಯನವೊಂದು ಬಹಿರಂಗಗೊಳಿಸಿದೆ. ಟೆಸ್ಟೊಸ್ಟೆರೋನ್ ಮಟ್ಟವು ಹೆಚ್ಚುವುದರೊಂದಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುವ ಅಪಾಯವು ಶೇ.19ರಷ್ಟು ಹೆಚ್ಚುತ್ತದೆ.

ಪುರುಷ ಹಾರ್ಮೋನ್ ಮತ್ತು ಕ್ಯಾನ್ಸರ್ ನಡುವಿನ ಸಂಬಂಧವನ್ನು ಕಂಡುಕೊಳ್ಳಲು ಇಂಗ್ಲಂಡ್‌ನ ಆಕ್ಸಫರ್ಡ್ ವಿವಿಯ ಸಂಶೋಧಕರ ತಂಡವು ಕೈಗೊಂಡಿದ್ದ ಅಧ್ಯಯನದಲ್ಲಿ ಸುಮಾರು ಎರಡು ಲಕ್ಷ ಪುರುಷರನ್ನು ಸಮೀಕ್ಷೆಗೊಳಪಡಿಸಲಾಗಿತ್ತು.

  ಪ್ರಾಸ್ಟೇಟ್ ಕ್ಯಾನ್ಸರ್ ಶ್ವಾಸಕೋಶ ಕ್ಯಾನ್ಸರ್‌ನ ಬಳಿಕ ವಿಶ್ವಾದ್ಯಂತ ಪುರುಷರಲ್ಲಿ ಅತ್ಯಂತ ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್ ಆಗಿದೆ ಮತ್ತು ಕ್ಯಾನ್ಸರ್‌ನಿಂದ ಸಾವುಗಳಿಗೆ ಪ್ರಮುಖ ಕಾರಣವಾಗಿದೆ. ಆದರೆ ಈ ಅಪಾಯವನ್ನು ಕಡಿಮೆ ಮಾಡಲು ಪುರುಷರಿಗೆ ನೀಡಬಹುದಾದ ಸಿದ್ಧ ಸಲಹೆಗಳು ನಮ್ಮ ಬಳಿಯಲ್ಲಿಲ್ಲ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ರುಥ್ ಟ್ರಾವಿಸ್ ವರದಿಯಲ್ಲಿ ಹೇಳಿದ್ದಾರೆ.

    ರಕ್ತದಲ್ಲಿಯ ಎರಡು ಹಾರ್ಮೋನ್‌ಗಳು ಪ್ರಾಸ್ಟೇಟ್ ಕ್ಯಾನ್ಸರ್‌ನೊಂದಿಗೆ ತಳುಕು ಹಾಕಿಕೊಂಡಿರಬಹುದು ಎಂದು ಹಿಂದಿನ ಸಂಶೋಧನೆಗಳು ಬೆಟ್ಟು ಮಾಡಿದ್ದರಿಂದ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ತಗ್ಗಿಸುವ ಪ್ರಯತ್ನವಾಗಿ ಇವುಗಳಲ್ಲಿ ಬದಲಾವಣೆಗಳು ಸಂಭಾವ್ಯವಾಗಿದ್ದರಿಂದ ಸಂಶೋಧಕರು ಇವೆರಡು ಹಾರ್ಮೋನ್‌ಗಳ ಮಟ್ಟಗಳ ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದರು.

ಕ್ಯಾನ್ಸರ್‌ನ ಯಾವುದೇ ಕುರುಹು ಇರದಿದ್ದ 200,452 ಆರೋಗ್ಯವಂತ ಪುರುಷರನ್ನು ಸಂಶೋಧನೆಗೊಳ ಪಡಿಸಲಾಗಿತ್ತು. ಅವರ ಶರೀರಗಳಲ್ಲಿ ಟೆಸ್ಟೊಸ್ಟೆರೋನ್ ಮತ್ತು ಬೆಳವಣಿಗೆ ಹಾರ್ಮೋನ್‌ಗಳ ಮಟ್ಟಗಳನ್ನು ತಿಳಿಯಲು ಸಂಶೋಧಕರು ಅವರ ರಕ್ತದ ಮಾದರಿಗಳನ್ನು ಪಡೆದುಕೊಂಡಿದ್ದರು. ಅವರು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲು ಸಂಶೋಧಕರು ಸುಮಾರು ಏಳು ವರ್ಷಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾಯಿಟ್ಟಿದ್ದರು. ಅಚ್ಚರಿಯಾಗುವಂತೆ ಈ ಪೈಕಿ 5,000ಕ್ಕೂ ಅಧಿಕ ಜನರು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗಿದ್ದರು ಮತ್ತು ಸುಮಾರು 300 ಜನರು ಈ ರೋಗದಿಂದಾಗಿ ಸಾವನ್ನಪ್ಪಿದ್ದರು.

ಈ ಎಲ್ಲ ಪ್ರಕರಣಗಳ ಅಧ್ಯಯನದ ಬಳಿಕ ಸಂಶೋಧಕರು ತಮ್ಮ ಶರೀರದಲ್ಲಿ ಹೆಚ್ಚಿನ ಮಟ್ಟದಲ್ಲಿ ಪುರುಷ ಹಾರ್ಮೋನ್‌ಗಳನ್ನು ಹೊಂದಿದ್ದ ವ್ಯಕ್ತಿಗಳು ಕ್ಯಾನ್ಸರ್‌ಗೆ ತುತ್ತಾದವರಲ್ಲಿ ಸೇರಿದ್ದರು ಎನ್ನುವುದನ್ನು ಕಂಡುಕೊಂಡಿದ್ದರು.

    ಈ ವಿಧದ ಅಧ್ಯಯನಗಳು ಈ ಹಾರ್ಮೋನ್‌ಗಳು ಪ್ರಾಸ್ಟೇಟ್‌ಕ್ಯಾನ್ಸರ್‌ನೊಂದಿಗೆ ಏಕೆ ತಳುಕು ಹಾಕಿಕೊಂಡಿವೆ ಎನ್ನುವುದನ್ನು ತಿಳಿಸುವುದಿಲ್ಲ,ಆದರೆ ಟೆಸ್ಟೋಸ್ಟೆರೋನ್ ಪ್ರಾಸ್ಟೇಟ್ ಗ್ರಂಥಿಯ ಸಹಜ ಬೆಳವಣಿಗೆ ಮತ್ತು ಕಾರ್ಯದಲ್ಲಿ ಪಾತ್ರವನ್ನು ಹೊಂದಿದೆ ಮತ್ತು ಐಜಿಎಫ್-1 ಹಾರ್ಮೋನ್ ನಮ್ಮ ಶರೀರದಲ್ಲಿಯ ಕೋಶಗಳ ಬೆಳವಣಿಗೆಯನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ ಎನ್ನುವುದು ನಮಗೆ ಗೊತ್ತಾಗಿದೆ ಎಂದು ಟ್ರಾವಿಸ್ ವರದಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News