ಬೆಂಗಳೂರು ವಿವಿ: ಇನ್ನೂ ಆರಂಭವಾಗದ ದೂರ ಶಿಕ್ಷಣ ಅಧ್ಯಯನ ಕೇಂದ್ರಗಳು

Update: 2019-11-04 16:14 GMT

ಬೆಂಗಳೂರು, ನ.4: ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ಅಧ್ಯಯನ ಕೇಂದ್ರಗಳ ಸ್ಥಾಪನೆ ಹಾಗೂ ವಿಷಯ ಸಂಯೋಜಕರ ನೇಮಕದ ವಿಳಂಬದಿಂದಾಗಿ ಇದುವರೆಗೂ ಅಧ್ಯಯನ ಕೇಂದ್ರಗಳು ಆರಂಭವಾಗಿಲ್ಲ.

2019-20 ನೆ ಸಾಲಿನ ಪ್ರವೇಶ ಪ್ರಕ್ರಿಯೆಗಳು ಜ್ಞಾನಭಾರತಿ ಆವರಣದಲ್ಲಿರುವ ದೂರ ಶಿಕ್ಷಣ ವಿಭಾಗದಲ್ಲಿ ಆರಂಭವಾಗಿದೆ. ಅರ್ಜಿ ಪಡೆಯುವಿಕೆ ಶುಲ್ಕ ಪಾವತಿ ಸೇರಿದಂತೆ ಅನೇಕ ಕೆಲಸಗಳಿಗಾಗಿ ಇಲ್ಲಿನ ಜ್ಞಾನಭಾರತಿ ಆವರಣಕ್ಕೆ ಹೋಗಬೇಕಿದೆ. ಇದರಿಂದ ವಿದ್ಯಾರ್ಥಿಗಳೂ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ 15 ಕಡೆಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೇ ನಲ್ಲಿಯೇ ಅಧ್ಯಯನ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ಈ ಕೇಂದ್ರಗಳು ಖಾಸಗಿ ಕಾಲೇಜು ಅಥವಾ ಸರಕಾರಿ ಕಾಲೇಜು ವ್ಯಾಪ್ತಿಗೆ ಸೇರಿಸಬೇಕಾ ಎಂಬ ಗೊಂದಲದಿಂದ ಕೂಡಿದ್ದು, ಆರು ತಿಂಗಳಗಳೇ ಕಳೆದಿವೆ.

ಅಧ್ಯಯನ ಕೇಂದ್ರದ ನೆಪವೊಡ್ಡಿ ವಿಷಯ ಸಂಯೋಜಕರ ನೇಮಕವನ್ನು ವಿವಿ ಸ್ಥಗಿತಗೊಳಿಸಿದೆ. ಇದು ಪ್ರವೇಶಾತಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ರಾಮನಗರ ಪಿ.ಜಿ. ಯುವಿಸಿಇ, ಚಿಕ್ಕಬಳ್ಳಾಪುರ, ಕೋಲಾರ, ನೆಲಮಂಗಲ, ಆನೇಕಲ್, ಮಾಲೂರು, ಯಲಹಂಕ, ಕೆ.ಆರ್.ಪುರಂ ಸೇರಿದಂತೆ ಬೆಂಗಳೂರು ನಗರದ ಐದು ಕಡೆ ಸೇರಿ ಒಟ್ಟು 15 ಕೇಂದ್ರಗಳ ಆರಂಭಕ್ಕೆ ನಿರ್ಧರಿಸಲಾಗಿತ್ತು. ಸಿಂಡಿಕೇಟ್ ಸಭೆಯಲ್ಲಿ ಸದ್ಯ 10 ಕೇಂದ್ರಗಳ ಆರಂಭ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಯುಜಿಸಿ ದೂರ ಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ಪಡೆಯುವ ಉದ್ದೇಶದಿಂದ ಪ್ರತಿ ಕೋರ್ಸ್‌ಗೆ ಪೂರ್ಣಕಾಲಿಕ ಉಪನ್ಯಾಸಕರ ನೇಮಕ, ಅಧ್ಯಯನ ಕೇಂದ್ರ ಸೇರಿ ಹಲವು ಮೂಲ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿತ್ತಾದರೂ, ಅದನ್ನು ಕಾರ್ಯರೂಪಗೊಳಿಸಿಲ್ಲ.

ಪ್ರವೇಶ ಕುಸಿಯುವ ಸಾಧ್ಯತೆ: ಬೆಂಗಳೂರು ವಿವಿ ದೂರ ಶಿಕ್ಷಣ ವಿಭಾಗ 2018-19 ರ ಪ್ರವೇಶದ ಅಂಕಿ ಅಂಶಗಳನ್ನು ಗಮನಿಸಿದಾಗ ಹೊಸ ಹಾಗೂ ಸಾಮಾನ್ಯ, ಪುನರಾವರ್ತಿತ ಸೇರಿ 6500 ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಸರಿಯಾದ ಸಮಯದಲ್ಲಿ ಸೌಲಭ್ಯಗಳು ನೀಡಿದಿದ್ದಲ್ಲಿ, ವಿದ್ಯಾರ್ಥಿಗಳ ಪ್ರವೇಶ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News