ಐಪಿಎಲ್‌ನಲ್ಲಿ ಪವರ್ ಪ್ಲೇಯರ್ ಪ್ರಯೋಗಕ್ಕೆ ಬಿಸಿಸಿಐ ಚಿಂತನೆ

Update: 2019-11-05 02:32 GMT

   ಮುಂಬೈ, ನ.4: ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಆವೃತ್ತಿಯಲ್ಲಿ ಪವರ್ ಪ್ಲೇಯರ್ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ಇನ್ನೊಂದು ಪ್ರಯೋಗಕ್ಕೆ ಬಿಸಿಸಿಐ ಮುಂದಾಗಿದೆ.

ಈ ನಿಯಮದಲ್ಲಿ ಆಟದ ಯಾವುದೇ ಹಂತದಲ್ಲಿ ಆಟಗಾರರನ್ನು ಬದಲಿಸಲು ತಂಡಗಳಿಗೆ ಅವಕಾಶವಿರುತ್ತದೆ. ಬದಲಿ ಆಟಗಾರನನ್ನು ವಿಕೆಟ್‌ನ ಪತನದ ಬಳಿಕ ಅಥವಾ ಓವರ್ ಮುಗಿದ ಬಳಿಕ ಕಣಕ್ಕಿಳಿಸಬಹುದಾಗಿದೆ. ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿರುವ ಬಿಸಿಸಿಐ ಹಿರಿಯ ಅಧಿಕಾರಿ ಯೊಬ್ಬರು ಈ ಪರಿಕಲ್ಪನೆಯನ್ನು ಈಗಾಗಲೇ ಅಂಗೀಕರಿಸಲಾಗಿದೆ, ಆದರೆ ಮುಂಬೈನ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು.

‘‘ಈ ನಿಯಮದಲ್ಲಿ ತಂಡವು ಅಂತಿಮ ಹನ್ನೊಂದರ ಬಳಗವನ್ನು ಪ್ರಕಟಿಸಲಾಗುವುದಿಲ್ಲ. ಬದಲಿಗೆ 15 ಆಟಗಾರರ ತಂಡವನ್ನು ಹೆಸರಿಸಲಾಗುತ್ತದೆ. ಇದರಲ್ಲಿ ಓರ್ವ ಆಟಗಾರನನ್ನು ಆಟದ ಯಾವುದೇ ಹಂತದಲ್ಲಿ ಬದಲಿಸಬಹುದಾಗಿದೆ. ನಾವು ಇದನ್ನು ಐಪಿಎಲ್‌ನಲ್ಲಿ ಪರಿಚಯಿಸಲು ನೋಡುತ್ತಿದ್ದೇವೆ, ಮುಂಬರುವ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಿಯಲ್ಲಿ ಈ ಪ್ರಯೋಗವನ್ನು ನಡೆಸಿದರೆ ಉತ್ತಮ’’ ಎಂದು ಅವರು ಹೇಳಿದ್ದಾರೆ.

ಈ ಪ್ರಯೋಗವು ನಿಜವಾಗಿ ಆಟವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ವಿವರಿಸಿದ ಅವರು ಈ ಪರಿಕಲ್ಪನೆಯು ಪಂದ್ಯದ ಸಂದರ್ಭಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಎರಡು ತಂಡಗಳಿಂದ ಹೊರಗಿನ ಚಿಂತನೆ ಮತ್ತು ಕಾರ್ಯತಂತ್ರವನ್ನು ಪ್ರೇರೇಪಿಸುತ್ತದೆ ಮತ್ತು ಇನ್ನಷ್ಟು ಅಭಿಮಾನಿಗಳನ್ನು ಆಕರ್ಷಿಸಲು ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘‘ಉದಾರಣೆಗೆ ತಂಡವೊಂದಕ್ಕೆ ಗೆಲ್ಲಲು ಕೊನೆಯ ಆರು ಎಸೆತಗಳಲ್ಲಿ 20 ರನ್‌ಗಳು ಆವಶ್ಯಕತೆ ಇದೆ. ಆದರೆ ಆಂಡ್ರೆ ರಸ್ಸೆಲ್ ಅವರಂತಹ ಸ್ಫೋಟಕ ಬ್ಯಾಟ್ಸ್ ಮನ್ ತಂಡದ ಹದಿನೈದರ ಬಳಗದಲ್ಲಿದ್ದಾರೆ. ಅಂತಿಮ ಹನ್ನೊಂದರಲ್ಲಿ ಇಲ್ಲ. ಅವರಿಂದ ನಾಲ್ಕು ಎಸೆತಗಳಲ್ಲಿ 4 ಸಿಕ್ಸರ್ ನಿರೀಕ್ಷೆಯೊಂದಿಗೆ ಅಂತಹ ಬ್ಯಾಟ್ಸ್‌ಮನ್‌ನ್ನು ಕಣಕ್ಕಿಳಿಸಬಹುದು . ‘‘ ಕೊನೆಯ ಓವರ್‌ನಲ್ಲಿ ತಂಡವೊಂದು ಗೆಲ್ಲಲು ಆರು ರನ್‌ಗಳನ್ನು ರಕ್ಷಿಸಬೇಕಾಗಿದೆ . ಆಗ ಜಸ್‌ಪ್ರೀತ್ ಬುಮ್ರಾ ಅವರಂತಹ ರನ್ ಹೊಳೆ ನಿಯಂತ್ರಿಸುವ ಬೌಲರ್ ಇದನ್ನು ತಡೆಯಲು ಸಮರ್ಥರಾಗಿರುತ್ತಾರೆ. ಆಗ ನಾಯಕನಿಗೆ ಅಂತಹ ಬೌಲರ್‌ನ್ನು ಕಣಕ್ಕಿಳಿಸಲು ಅವಕಾಶ ಇದೆ.

ಮಂಗಳವಾರ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ಪರಿಕಲ್ಪನೆಯನ್ನು ಚರ್ಚಿಸುವುದರ ಜತೆಗೆ ಐಪಿಎಲ್ ಟ್ವೆಂಟಿ-20 ಟೂರ್ನಿಯ 2019ನೇ ಆವೃತ್ತಿಯನ್ನು ಸಹ ಪರಿಶೀಲಿಸಲಿದ್ದಾರೆ. ಲೀಗ್‌ನ ಮುಂದಿನ ಆವೃತ್ತಿಯ ಆಟದ ಬಗ್ಗೆ ಮಾತ್ರವಲ್ಲ, ಪ್ರೇಕ್ಷಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News