ಕೇಪ್‌ಟೌನ್ ತಂಡದ ಬ್ಯಾಟಿಂಗ್ ಸಲಹೆಗಾರನಾಗಿ ಅಮ್ಲ ನೇಮಕ

Update: 2019-11-05 02:39 GMT

ಕೇಪ್‌ಟೌನ್, ನ.4: ಮುಂಬರುವ ಎಂಝಾನ್ಸಿ ಸೂಪರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕೇಪ್‌ಟೌನ್ ಬ್ಲಿಟ್ಝ್ ತಂಡದ ಬ್ಯಾಟಿಂಗ್ ಸಲಹೆಗಾರನಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಹಾಶಿಮ್ ಆಮ್ಲ ನೇಮಕವಾಗಿದ್ದಾರೆ. 144 ಟ್ವೆಂಟಿ

-20 ಪಂದ್ಯಗಳನ್ನು ಆಡಿರುವ ಅಮ್ಲ ಇತ್ತೀಚೆಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಆಮ್ಲರನ್ನು ಬ್ಯಾಟಿಂಗ್ ಸಲಹೆಗಾರರನ್ನಾಗಿ ನೇಮಿಸಿರುವ ಬಗ್ಗೆ ಕೇಪ್‌ಟೌನ್ ಬ್ಲಿಟ್ಝ್ ತಂಡದ ಸಿಇಒ ನಬೀಲ್ ಡೀನ್ ಸಂತಸ ವ್ಯಕ್ತಪಡಿಸಿದ್ದಾರೆ. ಅವರೊಬ್ಬ ವಿಶ್ವದರ್ಜೆಯ ಆಟಗಾರ ಮಾತ್ರವಲ್ಲ, ವಿನೀತ ಮನುಷ್ಯ. ಅವರಿಂದ ಬ್ಯಾಟಿಂಗ್ ಸಲಹೆ ಪಡೆಯುವುದಕ್ಕೆ ತಂಡದ ಎಲ್ಲಾ ಆಟಗಾರರೂ ಕಾತರದಿಂದ ಕಾಯುತ್ತಿದ್ದಾರೆ ಎಂದವರು ಟ್ವೀಟ್ ಮಾಡಿದ್ದಾರೆ. ಆಮ್ಲ ಅವರೊಬ್ಬ ಅನುಭವಿ ಆಟಗಾರ ಮತ್ತು ಕ್ರಿಕೆಟ್ ಆಟದ ಬಗ್ಗೆ ಅಪಾರ ಜ್ಞಾನವುಳ್ಳವರು. ಅವರು ತಂಡಕ್ಕೆ ಹಲವು ರೀತಿಯಲ್ಲಿ ನೆರವಾಗುತ್ತಾರೆ ಎಂದು ತಂಡದ ನಾಯಕ ಆ್ಯಶ್ವೆಲ್ ಪ್ರಿನ್ಸ್ ಹೇಳಿದ್ದಾರೆ. ಈಗ ಅಬುಧಾಬಿಯಲ್ಲಿ ನಡೆಯುತ್ತಿರುವ ಟಿ-10 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಟಸ್ಕರ್ಸ್‌ನ ಐಕಾನ್ ಆಟಗಾರನಾಗಿರುವ ಅಮ್ಲ, ಕೇಪ್‌ಟೌನ್ ಬ್ಲಿಟ್ಝ್ ತಂಡವನ್ನು ನವೆಂಬರ್ 25ರ ಬಳಿಕ ಕೂಡಿಕೊಳ್ಳಲಿದ್ದಾರೆ ಎಂದು ತಂಡದ ಆಡಳಿತ ವರ್ಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News