ಉಪನಗರ ರೈಲು ಯೋಜನೆ ಶೀಘ್ರದಲ್ಲಿ ಪೂರ್ಣಗೊಳಿಸಲು ಸಿಎಂ ಸೂಚನೆ

Update: 2019-11-05 15:08 GMT

ಬೆಂಗಳೂರು, ನ.5: ರಾಜಧಾನಿ ಬೆಂಗಳೂರಿನ ನಾಗರಿಕರ ಬಹುದಿನಗಳ ಕನಸಾಗಿರುವ ಸಬ್ ಅರ್ಬನ್(ಉಪನಗರ) ರೈಲು ಯೋಜನೆಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ರೈಲ್ವೆ ಯೋಜನೆಗಳ ಅನುಷ್ಠಾನ ಹಾಗೂ ಪ್ರಗತಿಗೆ ಸಂಬಂಧಪಟ್ಟಂತೆ ಚರ್ಚಿಸಲು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರಕಾರದ ಅಧಿಕಾರಿಗಳು, ಸಂಸದರ ಜೊತೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಸಬ್ ಅರ್ಬನ್ ರೈಲ್ವೆ ಯೋಜನೆಗೆ ಈಗಾಗಲೇ ರಾಜ್ಯ ಸರಕಾರ ಅನುಮೋದನೆ ನೀಡಿದೆ. ರೈಲ್ವೆ ಸಚಿವಾಲಯ, ನೀತಿ ಆಯೋಗ, ಹಣಕಾಸು ಸಚಿವಾಲಯ, ಯೋಜನಾ ಮತ್ತು ಅಂಕಿ ಅಂಶ ಸಚಿವಾಲಯವು ಈ ಯೋಜನೆಗೆ ಹಸಿರು ನಿಶಾನೆ ತೋರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಬ್ ಅರ್ಬನ್ ರೈಲು ಯೋಜನೆಯ ಅನುಷ್ಠಾನದಿಂದಾಗಿ ಬೆಂಗಳೂರಿನ ನಾಗರಿಕರು ಪ್ರತಿದಿನ ಅನುಭವಿಸುತ್ತಿರುವ ಸಂಚಾರ ದಟ್ಟಣೆಯ ಸಮಸ್ಯೆಯಿಂದ ಪರಿಹಾರ ಸಿಗಲಿದೆ. ಆದುದರಿಂದ, ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು, ಕೋಲಾರದಲ್ಲಿ ರೈಲ್ವೆ ಕೋಚ್ ಕಾರ್ಖಾನೆ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದೆ. ಶಿವಮೊಗ್ಗ, ಶಿಕಾರಿಪುರ ಮತ್ತು ರಾಣೆಬೆನ್ನೂರು ನಡುವೆ ಹೊಸ ರೈಲ್ವೆ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು ಸರ್ವೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಶಿವಮೊಗ್ಗ, ಶೃಂಗೇರಿ ಮತ್ತು ಮಂಗಳೂರಿನ ನಡುವೆ 227.60 ಕಿ.ಮೀ. ಉದ್ದದ ಹೊಸ ರೈಲ್ವೆ ಮಾರ್ಗಕ್ಕೆ ಒಪ್ಪಿಗೆ ನೀಡಲಾಗಿದ್ದು, ಸರ್ವೇ ಕಾರ್ಯ ನಡೆಯುತ್ತಿದೆ. ಬೀದರ್-ನಾಂದೇಡ್ ರೈಲ್ವೆ ಮಾರ್ಗದ ಡಬ್ಲಿಂಗ್ ಕಾರ್ಯ ಪ್ರಗತಿಯಲ್ಲಿದೆ. ಚಿಕ್ಕಮಗಳೂರು-ಬೇಲೂರು ನಡುವೆ ಹೊಸ ರೈಲ್ವೇ ಯೋಜನೆಯ ಸರ್ವೆ ಕಾರ್ಯ ಮುಗಿದಿದ್ದು, ಇದನ್ನು ಶೃಂಗೇರಿಯ ಶಾರದಾ ಮಠದವರೆಗೆ ವಿಸ್ತರಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.

20 ರೈಲ್ವೆ ನಿಲ್ದಾಣಗಳನ್ನು ‘ಎ’ ದರ್ಜೆಗೇರಿಸಲು ತೀರ್ಮಾನ: ಬೆಂಗಳೂರು ಸಿಟಿ ಎ-1, ಯಶವಂತಪುರ ಎ-1, ಕಲಬುರಗಿ-ಎ, ರಾಯಚೂರು, ಯಾದಗಿರಿ, ಮಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಬಂಗಾರಪೇಟೆ, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಹೊಸಪೇಟೆ, ಹುಬ್ಬಳ್ಳಿ, ಕೆಂಗೇರಿ, ಕೃಷ್ಣರಾಜಪುರ, ಮೈಸೂರು ಹಾಗೂ ಶಿವಮೊಗ್ಗ ಟೌನ್ ರೈಲ್ವೆ ನಿಲ್ದಾಣಗಳನ್ನು ಎ ದರ್ಜೆಗೇರಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕೆಲವು ಹೊಸ ಯೋಜನೆಗಳ ಸರ್ವೆ ಕಾರ್ಯ ಮುಗಿದಿದ್ದು, ಭೂಮಿ ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರಕಾರದ ಸಹಕಾರದ ಅಗತ್ಯವಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಸರಕಾರದ ಗಮನ ಸೆಳೆದರು. ಕೋಲಾರ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕೋಲಾರ ಜಿಲ್ಲೆಗೆ ರೈಲ್ವೆ ಯೋಜನೆಗಳನ್ನು ತರುವುದರ ಕುರಿತು ರಾಜ್ಯ ಹಾಗೂ ಕೇಂದ್ರ ಸರಕಾರ ಗಮನ ಹರಿಸಬೇಕು. ಕೋಲಾರದಿಂದ ಪ್ರತಿನಿತ್ಯ ಸುಮಾರು 20 ಸಾವಿರ ಜನ ಬೆಂಗಳೂರಿಗೆ ಕೆಲಸಕ್ಕೆ ಬರುತ್ತಾರೆ. ಕೋಲಾರ ಹಾಗೂ ವೈಟ್‌ಫೀಲ್ಡ್ ನಡುವೆ ರೈಲ್ವೆ ಯೋಜನೆಯನ್ನು ಮಂಜೂರು ಮಾಡಿದರೆ, ಈ ಸಾವಿರಾರು ಮಂದಿಗೆ ಅನುಕೂಲವಾಗುತ್ತದೆ ಎಂದರು.

ಸಭೆಯಲ್ಲಿ ಅಧಿಕಾರಿಗಳು ಹಾಗೂ ಸಂಸದರ ಮಾತುಗಳನ್ನು ಆಲಿಸಿದ ಬಳಿಕ ಮಾತನಾಡಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಪ್ರಾಧಾನ್ಯತೆಯ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಮುಂದಾಗಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ, ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ ಅಗತ್ಯವಿರುವ ಭೂ ಸ್ವಾಧೀನ ಕಾರ್ಯವನ್ನು ಚುರುಕುಗೊಳಿಸಿ, ಜಮೀನನ್ನು ತ್ವರಿತವಾಗಿ ಹಸ್ತಾಂತರ ಮಾಡುವಂತೆ ಮುಖ್ಯಮಂತ್ರಿಗೆ ಅವರು ಮನವಿ ಪತ್ರ ಸಲ್ಲಿಸಿದರು.

ಸಭೆಯಲ್ಲಿ ಸಂಸದರಾದ ಬಿ.ವೈ.ರಾಘವೇಂದ್ರ, ಪಿ.ಸಿ.ಮೋಹನ್, ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೆಟ್ರೋ ಸೇರಿದಂತೆ ರಾಜ್ಯದ ಎಲ್ಲ ರೈಲ್ವೆ ಯೋಜನೆಗಳಿಗೆ ರಾಜ್ಯ ಸರಕಾರವು ಅಗತ್ಯವಾದ ಎಲ್ಲ ಸಹಕಾರವನ್ನು ನೀಡಲಿದ್ದು, ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರಗತಿಯಲ್ಲಿರುವ ಹಾಗೂ ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.

-ಟಿ.ಎಂ.ವಿಜಯಭಾಸ್ಕರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News