ಆ್ಯಸಿಡಿಟಿಯೇ?: ಮನೆಮದ್ದುಗಳನ್ನು ಬಳಸುವ ಮುನ್ನ ಇದನ್ನೊಮ್ಮೆ ಓದಿ

Update: 2019-11-05 15:55 GMT

ಕೆಲವು ಸಂದರ್ಭಗಳಲ್ಲಿ ಅನಾರೋಗ್ಯ ಕಾಡಿದಾಗ ತಕ್ಷಣಕ್ಕೆ ವೈದ್ಯಕೀಯ ನೆರವು ಪಡೆಯುವುದು ಸಾಧ್ಯವಿರುವುದಿಲ್ಲ ಮತ್ತು ನಾವು ಮನೆಮದ್ದುಗಳಿಗೆ ಮೊರೆ ಹೋಗುತ್ತೇವೆ. ಆ್ಯಸಿಡಿಟಿ ಇಂತಹ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು,ಹೆಚ್ಚಿನ ಸಂದರ್ಭಗಳಲ್ಲಿ ನಾವು ಆ್ಯಂಟಾಸಿಡ್‌ಗಳನ್ನು ಬಳಸುವ ಮೊದಲು ಮನೆಮದ್ದುಗಳನ್ನು ಯತ್ನಿಸುತ್ತೇವೆ. ಆದರೆ ಮನೆಮದ್ದುಗಳನ್ನು ಬಳಸುವ ಮೊದಲು ನಿಮಗೆ ತಿಳಿದಿರಬೇಕಾದ ಕೆಲವು ಮಾಹಿತಿಗಳಿವೆ.

ಮನೆಮದ್ದುಗಳು ಅಡಿಗೆ ಕೋಣೆಯಲ್ಲಿ ಸುಲಭವಾಗಿ ಲಭ್ಯವಿರುವುದರಿಂದ ಅವುಗಳನ್ನು ಬಳಸುವ ಮೊದಲು ನಾವು ದೂಸರಾ ಆಲೋಚನೆಯನ್ನೇ ಮಾಡುವುದಿಲ್ಲ. ಆ್ಯಸಿಡಿಟಿಯಿಂದ ಪಾರಾಗಲು ಪುದೀನಾ ಎಲೆ,ತಣ್ಣನೆಯ ಹಾಲು,ಮಜ್ಜಿಗೆ,ಬಡೇಸೋಪು,ಶುಂಠಿ ಇತ್ಯಾದಿ ಮನೆಮದ್ದುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆ್ಯಸಿಡಿಟಿಯ ವಿರುದ್ಧ ಹೋರಾಡಲು ಈ ಮನೆಮದ್ದುಗಳ ಬಳಕೆಯಲ್ಲಿ ತಪ್ಪಿಲ್ಲ,ಆದರೆ ಶೀಘ್ರ ಪರಿಹಾರವನ್ನು ನಿರೀಕ್ಷಿಸಬೇಡಿ. ಆ್ಯಸಿಡಿಟಿಯ ಕಾರಣ ಮತ್ತು ಅದರ ತೀವ್ರತೆಯನ್ನು ಅವಲಂಬಿಸಿ ಮನೆಮದ್ದುಗಳು ಕೆಲಸ ಮಾಡಲು ಹಲವೊಮ್ಮೆ ಕೆಲವು ಗಂಟೆಗಳೇ ಬೇಕಾಗಬಹುದು.

►ಯಶಸ್ವಿ ಮನೆಮದ್ದುಗಳನ್ನೇ ಬಳಸಿ

  ಆ್ಯಸಿಡಿಟಿಯಿಂದ ಪಾರಾಗಲು ನಮಗೆ ನೆರವಾಗುವ ಹಲವಾರು ಅಜ್ಜಿಯ ಔಷಧಿಗಳಿವೆ. ಹಾಲು, ಮಜ್ಜಿಗೆ, ಅಜವಾನ, ಹಿಂಗು,ತುಳಸಿ ಎಲೆಗಳು,ಜೀರಿಗೆ,ಆಮ್ಲಾ ಮತ್ತು ಸೀಯಾಳ ಇವು ಇಂತಹ ಕೆಲವು ಸಾಮಾನ್ಯ ಮದ್ದುಗಳಾಗಿವೆ. ಎಲ್ಲ ಮನೆಮದ್ದುಗಳೂ ಆ್ಯಸಿಡಿಟಿಯನ್ನು ಗುಣಪಡಿಸಲು ನೆರವಾಗುವುದಿಲ್ಲ,ಹೀಗಾಗಿ ಯಾವುದನ್ನು ಆಯ್ದುಕೊಳ್ಳಬೇಕು ಎನ್ನುವುದು ಮುಖ್ಯವಾಗುತ್ತದೆ. ಆ್ಯಸಿಡಿಟಿಯನ್ನು ಖಂಡಿತ ಗುಣಪಡಿಸುತ್ತದೆ ಎನ್ನುವುದು ಈಗಾಗಲೇ ಸಾಬೀತಾಗಿರುವ ಅಥವಾ ಸಂಶೋಧನೆಗಳ ಬೆಂಬಲವಿರುವ ಮನೆಮದ್ದುಗಳನ್ನೇ ಬಳಸಿ.

►ಮೊದಲು ಆ್ಯಸಿಡಿಟಿಗೆ ಕಾರಣವನ್ನು ತಿಳಿದುಕೊಳ್ಳಿ

 ಹೆಚ್ಚಿನ ಮನೆಮದ್ದುಗಳ ಕಾರ್ಯಾಚರಣೆ ಆ್ಯಸಿಡಿಟಿಗೆ ಕಾರಣವನ್ನು ಅವಲಂಬಿಸಿರುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಬೆಳಿಗ್ಗೆ ಎದ್ದ ಬಳಿಕ ಅಥವಾ ಸುದೀರ್ಘ ಸಮಯ ಖಾಲಿಹೊಟ್ಟೆಯಲ್ಲಿದ್ದ ಕಾರಣಕ್ಕೆ ಆ್ಯಸಿಡಿಟಿ ಉಂಟಾಗಿದ್ದರೆ ಹಾಲು,ಆಮ್ಲಾ ಮತ್ತು ಸೀಯಾಳದಂತಹ ಮನೆಮದ್ದುಗಳು ನೆರವಾಗಬಹುದು. ಈ ಮನೆಮದ್ದುಗಳು ಜಠರದ ಮೇಲೆ ಹಿತಕರ ಪರಿಣಾಮಗಳನ್ನು ಬೀರುವ ಮೂಲಕ ಆ್ಯಸಿಡಿಟಿಯನ್ನು ಶಮನಗೊಳಿಸಲು ನೆರವಾಗುತ್ತವೆ. ಅಜೀರ್ಣ ಅಥವಾ ಮಸಾಲೆ ಭರಿತ ಆಹಾರಗಳ ಸೇವನೆಯಿಂದ ಆ್ಯಸಿಡಿಟಿ ಉಂಟಾಗಿದ್ದರೆ ಮಜ್ಜಿಗೆ,ಜೀರಿಗೆ ಮತು ಅಜವಾನದಂತಹ ಮನೆಮದ್ದುಗಳು ಉತ್ತಮ ಪರಿಣಾಮಗಳನ್ನು ನೀಡುತ್ತವೆ. ಇವು ಜೀರ್ಣ ಕಾರ್ಯಕ್ಕೆ ಸಹಕರಿಸುವ ಮೂಲಕ ವಾಯು ಮತ್ತು ಆ್ಯಸಿಡಿಟಿ ಯಿಂದ ಶಮನ ನೀಡುತ್ತವೆ.

►ಮನೆಮದ್ದುಗಳು ಪರಿಣಾಮ ಬೀರಲು ಸಮಯ ಹೆಚ್ಚು ಬೇಕು

 ಆ್ಯಸಿಡಿಟಿಯನ್ನು ಗುಣಪಡಿಸಲು ಮನೆಮದ್ದುಗಳಿಗೆ ಔಷಧಿಗಳಿಗಿಂತ ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ. ಇದು ಕೆಲವು ನಿಮಿಷಗಳಿಂದ ಹಿಡಿದು ಕೆಲವು ಗಂಟೆಗಳವರೆಗೂ ಆಗಿರಬಹುದು. ನೀವು ಪಾರ್ಟಿಯಿಂದ ಮನೆಗೆ ಮರಳಿದಾಗ ಅಥವಾ ಊಟದ ನಂತರ ತೊಂದರೆ ಕಾಣಿಸಿಕೊಂಡರೆ ಮಜ್ಜಿಗೆ ಸೇವನೆ ಅಥವಾ ಅಜವಾನ ಕಾಳುಗಳು ಸೂಕ್ತ ಮನೆಮದ್ದುಗಳಾಗಿವೆ.

ಆದರೆ ನೀವು ಮುಖ್ಯವಾದ ಮೀಟಿಂಗ್ ಅಥವಾ ಪ್ರಯಾಣದಲ್ಲಿದ್ದರೆ ನಿಮ್ಮ ಬಳಿ ಆ್ಯಂಟಾಸಿಡ್‌ಗಳು ಇರಬೇಕು,ಅವು ಆ್ಯಸಿಡಿಟಿಯಿಂದ ಶೀಘ್ರ ಮುಕ್ತಿ ನೀಡುತ್ತವೆ.

ಸಾಮಾನ್ಯವಾಗಿ ಆ್ಯಸಿಡಿಟಿಗೆ ಪ್ರಥಮ ಚಿಕಿತ್ಸೆಯಾಗಿ ಮನೆಮದ್ದುಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಆದರೆ ಮನೆಮದ್ದನ್ನು ಬಳಸಿದ ನಂತರವೂ ಆ್ಯಸಿಡಿಟಿ ಕಡಿಮೆಯಾಗದಿದ್ದರೆ ಅದಕ್ಕೆ ಸರಿಯಾದ ಕಾರಣ ತಿಳಿಯಲು ಮತ್ತು ಸೂಕ್ತ ಚಿಕಿತ್ಸೆ ಪಡೆಯಲು ವೈದ್ಯರ ಭೇಟಿ ಅಗತ್ಯವಾಗುತ್ತದೆ.

ಮನೆಮದ್ದುಗಳು ಪರಿಣಾಮಕಾರಿಯಾಗುತ್ತವೆ ನಿಜ,ಆದರೆ ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸುವುದು ಮುಖ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News