ನ.10ರೊಳಗೆ ರಸ್ತೆ ಗುಂಡಿ ಮುಚ್ಚಿ: ಅಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಗಡುವು

Update: 2019-11-05 17:19 GMT

ಬೆಂಗಳೂರು, ನ.5: ನ.10 ರೊಳಗೆ ರಸ್ತೆಗುಂಡಿಗಳನ್ನು ಮುಚ್ಚುವುದಾಗಿ ನೀಡಿದ್ದ ಭರವಸೆಯಂತೆ ಈಗಾಗಲೇ ಶೇ.50ರಷ್ಟು ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ ಎಂದು ಮೇಯರ್ ಗೌತಮ್ ಕುಮಾರ ಜೈನ್ ತಿಳಿಸಿದರು.

ಬಿಬಿಎಂಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೊಂದು ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಬದಲು ಹೊಸದಾಗಿಯೇ ಡಾಂಬರೀಕರಣ ಹಾಕಲಾಗುವುದು. ಜಲಮಂಡಳಿ ಮತ್ತು ಬೆಸ್ಕಾಂ ಸಂಸ್ಥೆಗಳು ತಾವು ನಿರ್ವಹಿಸಿದ ಕಾಮಗಾರಿಗಳು ಪೂರ್ಣಗೊಳ್ಳುತ್ತಿದ್ದಂತೆ ಬಿಬಿಎಂಪಿ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿದೆ. ನಂತರ ಆ ರಸ್ತೆಗಳ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ನಗರದ ಸುಮನಹಳ್ಳಿ, ಗೊರಗುಂಟೆ ಪಾಳ್ಯ, ಮೇಲ್ಸೇತುವೆ ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಇದೇ ತಿಂಗಳ 7ರ ನಂತರ ಎಲ್ಲ ಮೇಲ್ಸೇತುವೆಗಳ ಪರಿಶೀಲನೆ ನಡೆಸಲಾಗುವುದು. ಸುಮನಹಳ್ಳಿ ಮೇಲ್ಸೇತುವೆ ದುರಸ್ಥಿ ಕಾಮಗಾರಿ ಕೈಗೊಳ್ಳಲಾಗಿದೆ. ಸೇತುವೆಯ ಕಾಮಗಾರಿ ಗುಣಮಟ್ಟ ಕಳಪೆ ಎಂದು ಹೇಳಲಾಗಿದ್ದರೂ ಕಾಮಗಾರಿ ನಡೆಸಿದ ಕಂಪನಿ ಮುಚ್ಚಿ ಹೋಗಿರುವುದರಿಂದ ಆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಗರದ ಅಭಿವೃದ್ಧಿ ಕಾಮಗಾರಿಗೆ ಸಂಬಂಧಪಟ್ಟಂತೆ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಕಾಮಗಾರಿಗಳ ಬಗ್ಗೆ ವಿಸ್ತತವಾಗಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು. ಇಂದಿರಾ ಕ್ಯಾಂಟೀನ್‌ನ್ನು ಮುಚ್ಚುವ ಅಗತ್ಯವಿಲ್ಲ. ಈಗಾಗಲೇ ಬಿಬಿಎಂಪಿ ಅನುದಾನ ನೀಡುವ ಮೂಲಕ ನಡೆಸಿಕೊಂಡು ಬರುತ್ತಿದೆ. ಮತ್ತೊಮ್ಮೆ ಸರಕಾರಕ್ಕೆ ಪತ್ರ ಬರೆದು ಕ್ಯಾಂಟೀನ್‌ಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕಲಾಭವನ ನಿರ್ಮಾಣ

ಖ್ಯಾತ ಗಾಯಕ ಡಾ.ಸಿ.ಅಶ್ವಥ್ ಹೆಸರಿನಲ್ಲಿ ಎನ್.ಆರ್ ಕಾಲನಿಯಲ್ಲಿ ಅತ್ಯಾಧುನಿಕ ಕಲಾಭವನ ನಿರ್ಮಾಣ ಮಾಡಲಾಗಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅಶ್ವಥ್ ಹೆಸರಿನಲ್ಲಿ ಕಲಾಭವನ ಲೋಕಾರ್ಪಣೆಗೊಳ್ಳುತ್ತಿದ್ದು, ನ. 8, 9 ಮತ್ತು 10ರಂದು ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ ಜೈನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News