ಉಪನಗರ ರೈಲು ಯೋಜನೆ: ಪರಿಷ್ಕೃತ ಡಿಪಿಆರ್‌ಗೆ ರೈಲ್ವೆ ಮಂಡಳಿ ಒಪ್ಪಿಗೆ

Update: 2019-11-05 17:23 GMT

ಬೆಂಗಳೂರು, ನ.5: ರಾಜಧಾನಿ ರೈಲ್ವೆ ಪ್ರಯಾಣಿಕರ ಬಹುದಿನಗಳ ಕನಸಾದ ಉಪ ನಗರ ರೈಲು ಯೋಜನೆಯ ಪರಿಷ್ಕೃತ ಡಿಪಿಆರ್‌ಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ್ದು, ಕೇಂದ್ರ ಸಚಿವ ಸಂಪುಟದ ಅನುಮೋದನೆ ಬಾಕಿಯಿದೆ.

ಮುಂಬೈ ಮಾದರಿಯಲ್ಲಿ ಉಪನಗರ ರೈಲು ಯೋಜನೆ ಜಾರಿಗೊಳಿಸುವ ಸಂಬಂಧ 6 ತಿಂಗಳ ಹಿಂದೆಯೇ ರೈಟ್ಸ್ ಸಂಸ್ಥೆ ವಿವರವಾದ ಯೋಜನಾ ವರದಿ ಸಲ್ಲಿಸಿತ್ತು. ಇದೀಗ ದಿಲ್ಲಿಯಲ್ಲಿ ನಡೆದಿರುವ ರೈಲ್ವೆ ಮಂಡಳಿ(ವಿಸ್ತೃತ) ಸಭೆಯಲ್ಲಿ ಉಪ ನಗರ ರೈಲು ಯೋಜನೆಯ ಪರಿಷ್ಕೃತ ಡಿಪಿಆರ್‌ಗೆ ಅನುಮೋದನೆ ನೀಡಲಾಗಿದೆ.

ರೈಲ್ವೆ ಮಂಡಳಿ ಅನುಮೋದಿಸಿದ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಡಿಪಿಆರ್‌ಗೆ ಅನುಮೋದನೆ ಸಿಗಬೇಕು. ಆ ಬಳಿಕ ಯೋಜನೆ ಜಾರಿ ಬಗ್ಗೆ ಅಧಿಕೃತ ಘೋಷಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಉಪ ನಗರ ರೈಲು ಯೋಜನೆ ವಿಷಯ ಪ್ರಸ್ತಾಪವಾಗಲಿದೆ. ಅಲ್ಲಿ ಅನುಮೋದನೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಭೂ ಸ್ವಾಧೀನ: ಉಪ ನಗರ ರೈಲು ಯೋಜನೆಗಾಗಿ ಅಂದಾಜು 355.28 ಹೆಕ್ಟೇರ್ ಭೂಮಿ ಅಗತ್ಯವಿದೆ. ಅದರಲ್ಲಿ 250 ಹೆಕ್ಟೇರ್ ಭೂಮಿ ರೈಲ್ವೆ ಇಲಾಖೆ ಸೇರಿದ್ದಾಗಿದೆ. ಉಳಿದಂತೆ ರಾಜ್ಯ ಸರಕಾರ 34.69 ಹೆಕ್ಟೇರ್ ಮತ್ತು ಖಾಸಗಿಯವರಿಗೆ ಸೇರಿದ 70.59 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಅದಕ್ಕಾಗಿ ಸುಮಾರು 2,129 ಕೋಟಿ ರೂ.ಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

147 ಕಿ.ಮೀ. ಸಂಪರ್ಕ: ಯೋಜನೆಯಂತೆ ಒಟ್ಟು 147 ಕಿ.ಮೀ.ಉದ್ದದ ರೈಲು ಸಂಪರ್ಕ ಏರ್ಪಡಲಿದೆ. 46 ಕಿ.ಮೀ.ಉದ್ದದ ಎತ್ತರಿಸಿದ ಮಾರ್ಗ ಮತ್ತು 101 ಕಿ.ಮೀ.ಉದ್ದ ನೆಲಮಟ್ಟದ ಮಾರ್ಗ ನಿರ್ಮಿಸುವುದು ಅಥವಾ ಹಳೇ ಮಾರ್ಗ ಅಭಿವೃದ್ಧಿಪಡಿಸಬೇಕಿದೆ. ಯೋಜನೆಯಿಂದ ಬೆಂಗಳೂರಿನಿಂದ ತುಮಕೂರು, ಕೋಲಾರ, ರಾಮನಗರ ಸೇರಿ ಹೊರಭಾಗದ ನಗರಗಳಿಗೆ ರೈಲು ಸಂಚಾರ ಸುಲಭವಾಗಲಿದೆ. ಮೆಟ್ರೋಗೆ ಸಂಪರ್ಕ ಸಾರಿಗೆಯಾಗಿಯೂ ಉಪ ನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News