15 ವರ್ಷಗಳ ಹಿಂದಿನ ‘ಚಿಕು’ಗೆ ಪತ್ರ ಬರೆದ ವಿರಾಟ್ ಕೊಹ್ಲಿ

Update: 2019-11-06 04:18 GMT

ಹೊಸದಿಲ್ಲಿ, ನ.5: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಂಗಳವಾರ 31ನೇ ಹರೆಯಕ್ಕೆ ಕಾಲಿಟ್ಟಿದ್ದಾರೆ. ಬಾಂಗ್ಲಾದೇಶ ವಿರುದ್ಧ ಟ್ವೆಂಟಿ-20 ಸರಣಿಯಿಂದ ದೂರ ಉಳಿದು, ಪತ್ನಿ ಅನುಷ್ಕಾ ಶರ್ಮಾರೊಂದಿಗೆ ಇದೀಗ ಭೂತಾನ್‌ನಲ್ಲಿರುವ ವಿರಾಟ್ ಕೊಹ್ಲಿ 15 ವರ್ಷದ ಹಿಂದಿನ ತನಗೆ ತಾನೆೇ ಪತ್ರವನ್ನು ಬರೆದುಕೊಂಡು ತನ್ನ ಬದುಕಿನ ಪ್ರಯಾಣದ ಬಗ್ಗೆ ವಿವರಿಸಿದ್ದಾರೆ.

 31ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಕೊಹ್ಲಿ ತಾವು ಬರೆದ ಪತ್ರವನ್ನು ಮಂಗಳವಾರ ಬಿಡುಗಡೆಗೊಳಿಸಿದ್ದಾರೆ. ಸ್ಪೂರ್ತಿದಾಯಕ ಸಂದೇಶವನ್ನು ಅಭಿಮಾನಿಗಳ ಜತೆಗೆ ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

ಅವರ ಪತ್ರದಲ್ಲಿರುವ ವಿಚಾರಗಳು ಇಂತಿವೆ

‘‘ಮೊದಲನೆಯದಾಗಿ ಜನ್ಮದಿನದ ಶುಭಾಶಯಗಳು! ನಿಮ್ಮ ಭವಿಷ್ಯದ ಬಗ್ಗೆ ನೀವು ನನಗೆ ಬಹಳಷ್ಟು ಪ್ರಶ್ನೆಗಳನ್ನು ಹೊಂದಿದ್ದೀರಿ ಎಂದು ನನಗೆ ಗೊತ್ತಿದೆ. ಕ್ಷಮಿಸಿ, ಆದರೆ ನಾನು ಅದರಲ್ಲಿ ಹೆಚ್ಚಿನದಕ್ಕೂ ಉತ್ತರಿಸಲು ಹೋಗುವುದಿಲ್ಲ. ಅಂಗಡಿಯಲ್ಲಿ ಏನಿದೆ ಎಂದು ತಿಳಿಯದಿರುವುದು ಪ್ರತಿ ಆಶ್ಚರ್ಯವನ್ನು ಸಿಹಿಗೊಳಿಸುತ್ತದೆ, ಪ್ರತಿ ಸವಾಲು ರೋಮಾಂಚನಗೊಳಿಸುತ್ತದೆ. ಪ್ರತಿ ಬಾರಿ ನಿರಾಶೆಗೊಂಡಾಗ ಕಲಿಯಲು ಅವಕಾಶ ಇರುತ್ತದೆ. ನೀವು ಇಂದು ಅದನ್ನು ಅರಿತುಕೊಂಡಿಲ.್ಲ ಆದರೆ ಇದು ಗಮ್ಯಸ್ಥಾನಕ್ಕಿರುವ ಪ್ರಯಾಣ ಬಹಳ ಮುಖ್ಯವೆನಿಸಿದೆ. ಪ್ರಯಾಣವು ಸೂಪರ್ ಆಗಿದೆ!

    ನಾನು ನಿಮಗೆ ಹೇಳಬಯಸುದೇನೆಂದರೆ ಜೀವನವು ವಿರಾಟ್ ಆಗಿ ಅನೇಕ ವಿಚಾರಗಳನ್ನು ಹೊಂದಿದೆ. ಆದರೆ ನಿಮ್ಮ ಹಾದಿಗೆ ಬರುವ ಪ್ರತಿಯೊಂದು ಅವಕಾಶಕ್ಕೂ ನೀವು ಸಿದ್ಧರಾಗಿರಬೇಕು. ಅದನ್ನು ಪಡೆದುಕೊಳ್ಳಿ ಮತ್ತು ಎಂದಿಗೂ ಲಘುವಾಗಿ ತೆಗೆದುಕೊಳ್ಳಬೇಡಿ. ನೀವು ವೈಫಲ್ಯ ಅನುಭವಿಸಬಹುದು.ಎಲ್ಲರೂ ವೈಫಲ್ಯ ಅನುಭವಿಸುತ್ತಾರೆ. ಆದರೆ ಎಂದಿಗೂ ಪುಟಿದೇಳಲು ಮರೆಯುವುದಿಲ್ಲ ಎಂದು ನಿಮಗೆ ನೀವೇ ಭರವಸೆ ನೀಡಿ. ಮೊದಲ ಬಾರಿ ಆಗದಿದ್ದರೆ ಮತ್ತೆ ಪ್ರಯತ್ನಿಸಿ. ನೀವು ಅನೇಕರಿಂದ ಪ್ರೀತಿಸಲ್ಪಡುತ್ತೀರಿ ಮತ್ತು ಗೊತ್ತಿಲ್ಲದ ಕೆಲವರು ನಿಮ್ಮನ್ನು ದ್ವೇಷಿಸಬಹುದು. ಗೊತ್ತಿಲ್ಲದವರ ಬಗ್ಗೆ ನಿಮಗೆ ಚಿಂತೆಯನ್ನು ಬಿಟ್ಟು ಬಿಡಿ. ಅವರ ಬಗ್ಗೆ ಕಾಳಜಿ ವಹಿಸಬೇಡಿ, ನಿಮ್ಮ ಬಗ್ಗೆ ನಂಬಿಕೆ ಇಟ್ಟುಕೊಳ್ಳಿ.

      ಆ ಬೂಟುಗಳನ್ನು ತಂದೆ ಇಂದು ನಿಮಗೆ ಉಡುಗೊರೆಯಾಗಿ ನೀಡಲಿಲ್ಲ ಎಂದು ನೀವು ಯೋಚಿಸುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಆದರೆ ಅವರಿಗೆ ನಿಮ್ಮಲ್ಲಿರುವ ಪ್ರೀತಿಯ ಬಗ್ಗೆ ಅಥವಾ ನಿಮ್ಮ ಎತ್ತರದ ಬಗ್ಗೆ ಅವರು ಮಾಡಿದ ತಮಾಷೆಗೆ ಹೋಲಿಸಿದಾಗ ಅವು ಏನೂ ಅಲ್ಲ. ಇದನ್ನು ಪಾಲಿಸು. ಅವರುಕೆಲವೊಮ್ಮೆ ಕಟ್ಟುನಿಟ್ಟಾಗಿ ಕಾಣಿಸಬಹುದು ಎಂದು ನನಗೆ ತಿಳಿದಿದೆ. ಆದರೆ ಅದು ಅವರು ನಿಮಗೆ ಉತ್ತಮವಾದದ್ದನ್ನು ಬಯಸುತ್ತಾರೆ. ನಮ್ಮ ಪೋಷಕರು ಕೆಲವೊಮ್ಮೆ ನಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ನೀವು ಭಾವಿಸುತ್ತೀರಿ. ಆದರೆ ಇದನ್ನು ನೆನಪಿಡಿ ನಮ್ಮ ಕುಟುಂಬ ಮಾತ್ರ ನಮ್ಮನ್ನು ಬೇಶರತ್ತಾಗಿ ಪ್ರೀತಿಸುತ್ತದೆ. ಅವರನ್ನು ಮತ್ತೆ ಪ್ರೀತಿಸಿ, ಅವರನ್ನು ಗೌರವಿಸಿ ಮತ್ತು ಅವರೊಂದಿಗೆ ನೀವು ಎಲ್ಲ ಸಮಯವನ್ನು ಕಳೆಯಿರಿ. ನೀವು ಅವರನ್ನು ಪ್ರೀತಿಸುತ್ತೀರಿ ಎಂದು ಅಪ್ಪನಿಗೆ ಹೇಳಿ ಎಂದು ವಿರಾಟ್ ಪತ್ರದಲ್ಲಿ ವಿವರಿಸಿದ್ದಾರೆ. ಅಂತಿಮವಾಗಿ ನಿಮ್ಮ ಮನವನ್ನು ಅರ್ಥಮಾಡಿಕೊಳ್ಳಿ , ನಿಮ್ಮ ಕನಸುಗಳನ್ನು ಬೆನ್ನಟ್ಟಿ, ದಯೆಯಿಂದಿರಿ ಮತ್ತು ದೊಡ್ಡದಾದ ಕನಸು ಹೇಗೆ ಎಲ್ಲ ವ್ಯತ್ಯಾಸಗಳನ್ನು ಮಾಡುತ್ತದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಡಿ. ಪ್ರತಿದಿನವೂ ಸೂಪರ್ ಆಗಿದೆ’’ಎಂದು ವಿರಾಟ್ ಕೊಹ್ಲಿ ಪತ್ರದಲ್ಲಿ ವಿವರಿಸಿದ್ದಾರೆ.

   ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್‌ಗೆ ಕಾಲಿರಿಸಿದಾಗ ಎಲ್ಲರಂತೆ ವೈಫಲ್ಯ ಅನುಭವಿಸಿದ್ದರು. ಆದರೆ ನಿರಾಸೆಗೊಳ್ಳದೆ ಸತತ ಪ್ರಯತ್ನದ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಾ ಇಂದು ಎತ್ತರದ ಸ್ಥಾನಕ್ಕೆ ಏರಿದ್ದಾರೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರಕ್ಕೂ ಅಧಿಕ ರನ್, ನಾಯಕನಾಗಿ ಹಲವು ದ್ವಿಶತಕಗಳ ದಾಖಲೆ ಬರೆದಿರುವ ಕೊಹ್ಲಿ ಅವರು ಕ್ರಿಕೆಟ್ ಬದುಕಿನ ಸಾಧನೆ ಎಲ್ಲರನ್ನು ನಿಬ್ಬೆರಾಗಿಸುವಂತೆ ಮಾಡಿದೆ.

►ಕೊಹ್ಲಿ ಬದುಕಿನ ಪಯಣ: 

2008ರಲ್ಲಿ ನಾಯಕನಾಗಿ ಅಂಡರ್-19 ವಿಶ್ವಕಪ್ ಎತ್ತುವ ಮೂಲಕ ಜಾಗತಿಕವಾಗಿ ಗಮನ ಸೆಳೆದರು. 2008ರಲ್ಲಿ ಏಕದಿನ ಕ್ರಿಕೆಟ್‌ಗೆ ಕಾಲಿರಿಸಿದ ಕೊಹ್ಲಿ 2009ರಲ್ಲಿ ಮೊದಲ ಶತಕ ದಾಖಲಿಸಿದರು. ಆದರೆ ಟೆಸ್ಟ್ ಕ್ರಿಕೆಟ್‌ಗೆ ಕಾಲಿಸರಿಸುವಾಗ ಸ್ವಲ್ಪ ತಡವಾಗಿತ್ತು. 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಬಂದರು. ವೆಸ್ಟ್‌ಇಂಡೀಸ್ ವಿರುದ್ಧ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ಆಡುವ ಕನಸನ್ನು ನನಸಾಗಿಸಿದರು. 2014-15ರಲ್ಲಿ ಮಹೇಂದ್ರ ಸಿಂಗ್ ಧೋನಿ ಆಸ್ಟ್ರೇಲಿಯದ ಮೆಲ್ಬೋರ್ನ್‌ನಲ್ಲಿ ಮೂರನೇ ಟೆಸ್ಟ್ ಮುಗಿದ ಬೆನ್ನಲ್ಲೇ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗುವ ನಿರ್ಧಾರ ಪ್ರಕಟಿಸಿದರು. ವಿರಾಟ್ ಕೊಹ್ಲಿಗೆ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು. ವಿರಾಟ್ ಕೊಹ್ಲಿ ನಾಯಕರಾಗಿ 31 ಟೆಸ್ಟ್ ಗಳನ್ನು ಜಯಿಸಿ ಭಾರತದ ಓರ್ವ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದೆ. 2017ರಲ್ಲಿ ಧೋನಿ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವವನ್ನು ತ್ಯಜಿಸಿದಾಗ ವಿರಾಟ್ ಕೊಹ್ಲಿಗೆ ಭಾರತ ತಂಡವನ್ನು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ನಾಯಕರಾಗಿ ಮುನ್ನಡೆಸುವ ಅವಕಾಶ ಒಲಿದು ಬಂತು. 26 ಟೆಸ್ಟ್ ಶತಕ, 43 ಏಕದಿನ ಶತಕವನ್ನು ಕೊಹ್ಲಿ ದಾಖಲಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್ (49)ಮೊದಲ ಸ್ಥಾನದಲ್ಲಿದ್ದಾರೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ದಾಖಲಿಸಿರುವ ಆಟಗಾರರಲ್ಲಿ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 69 ಶತಕ, ಸಚಿನ್100 ಶತಕ ಮತ್ತು ರಿಕಿ ಪಾಂಟಿಂಗ್ 71 ಶತಕ ದಾಖಲಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 60.31 ಸರಾಸರಿಯಂತೆ 11,520 ರನ್, ಟೆಸ್ಟ್‌ನಲ್ಲಿ 7,066 ರನ್ ಗಳಿಸಿದ್ದಾರೆ ಮತ್ತು 7 ದ್ವಿಶತಕ ಗಳಿಸಿದ ಸಾಧನೆ ಮಾಡಿದ್ದಾರೆ. 2017 ಮತ್ತು 2018ರಲ್ಲಿ ಐಸಿಸಿ ವರ್ಷದ ಕ್ರಿಕೆಟಿಗ, 2018ರಲ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ, 2012, 2017 ಮತ್ತು 2018ರಲ್ಲಿ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಕೊಹ್ಲಿ 2013ರಲ್ಲಿ ಅರ್ಜುನ ಪ್ರಶಸ್ತಿ, 2017ರಲ್ಲಿ ಪದ್ಮಶ್ರೀ, 2018ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವೆಂಬರ್ 14ರಂದು ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News