ಪಾಕ್, ಚೀನಾ ವಿಷಾನಿಲ ಬಿಡುಗಡೆಗೊಳಿಸಿದ ಕಾರಣ ದಿಲ್ಲಿಯಲ್ಲಿ ವಾಯುಮಾಲಿನ್ಯ ಎಂದ ಬಿಜೆಪಿ ನಾಯಕ

Update: 2019-11-06 10:43 GMT

ಮೀರತ್, ನ.6: ರಾಜಧಾನಿ ದಿಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚಿಗಿನ ದಿನಗಳಲ್ಲಿ ಉಂಟಾಗಿರುವ ವಿಪರೀತ ವಾಯುಮಾಲಿನ್ಯಕ್ಕೆ ಬಿಜೆಪಿ ನಾಯಕ ವಿನೀತ್ ಅಗರ್ವಾಲ್ ಶಾರ್ದ ವಿಲಕ್ಷಣ ಕಾರಣ ನೀಡಿದ್ದಾರೆ.

"ನಮ್ಮ ಬಗ್ಗೆ ಭಯ ಹೊಂದಿರುವ ಯಾವುದಾದರೂ ನೆರೆಯ ರಾಷ್ಟ್ರ ವಿಷಾನಿಲವನ್ನು ಬಿಡುಗಡೆಗೊಳಿಸಿರುವ ಸಾಧ್ಯತೆಯಿದೆ. ನನಗನಿಸುತ್ತದೆ ಚೀನಾ ಅಥವಾ ಪಾಕಿಸ್ತಾನಕ್ಕೆ ನಮ್ಮ ಬಗ್ಗೆ ಭಯವಿದೆ'' ಎಂದು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಅವರು ಹೇಳಿದ್ದಾರೆ.

"ಪಾಕಿಸ್ತಾನ ವಿಷಕಾರಿ ಅನಿಲ ಬಿಡುಗಡೆಗೊಳಿಸಿದೆಯೇ ಎಂದು ನಾವು ಗಂಭೀರವಾಗಿ ಪರಿಶೀಲಿಸಬೇಕು'' ಎಂದು ಹೇಳಿದ ಅವರು  ಪ್ರಧಾನಿಯಾಗಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾಗಿ ಅಮಿತ್ ಶಾ ಅಧಿಕಾರ ವಹಿಸಿಕೊಂಡಂದಿನಿಂದ ಭಾರತದ ವಿರುದ್ಧ ಎಲ್ಲಾ ರೀತಿಯ ತಂತ್ರಗಾರಿಕೆಯನ್ನು ಪಾಕಿಸ್ತಾನ ಅನುಸರಿಸುತ್ತಿದೆ ಎಂದರು.

"ಪಾಕಿಸ್ತಾನ ನಮ್ಮ ಜತೆ ಯುದ್ಧ ಮಾಡಿದಾಗಲೆಲ್ಲಾ ಸೋಲು ಕಂಡಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅಧಿಕಾರಕ್ಕೆ ಬಂದಂದಿನಿಂದ ಪಾಕಿಸ್ತಾನಕ್ಕೆ ಹತಾಶೆಯಾಗಿದೆ'' ಎಂದು ಹೇಳಿಕೊಂಡರು.

ಮಾಲಿನ್ಯಕ್ಕೆ ರೈತರನ್ನು ದೂರುತ್ತಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಟೀಕಿಸಿದ ವಿನೀತ್, ರೈತರು ನಮ್ಮ ದೇಶದ ಬೆನ್ನೆಲುಬು, ಮಾಲಿನ್ಯಕ್ಕೆ ರೈತರು ಹಾಗೂ ಕೈಗಾರಿಕೆಗಳನ್ನು ದೂರಬಾರದು ಎಂದರು.

"ಇದು ಕೃಷ್ಣಾಜುರ್ನರ ಕಾಲ, ಪ್ರಧಾನಿ ಮೋದಿ ಕೃಷ್ಣನಾಗಿ ಹಾಗೂ ಅಮಿತ್ ಶಾ ಅರ್ಜುನನಾಗಿ ಈ ಸಮಸ್ಯೆ ನಿಭಾಯಿಸುತ್ತಾರೆ,'' ಎಂದೂ ಈ ಬಿಜೆಪಿ ನಾಯಕ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News