ಮೆಟ್ರೋ ಸ್ಮಾರ್ಟ್‌ಕಾರ್ಡ್ ರಿಯಾಯಿತಿ ಕತ್ತರಿಗೆ ಚಿಂತನೆ

Update: 2019-11-06 17:09 GMT

ಬೆಂಗಳೂರು, ನ.6: ನಮ್ಮ ಮೆಟ್ರೋದಲ್ಲಿ ಕನಿಷ್ಠ 50 ರೂ.ಗಳು ಠೇವಣಿ ಹೊಂದಿರಬೇಕು ಎಂಬ ನಿಯಮ ಜಾರಿಯಾದ ನಂತರ ಇದೀಗ ಸ್ಮಾರ್ಟ್‌ಕಾರ್ಡ್‌ಗಳಿರುವ ರಿಯಾಯಿತಿಗೆ ಕತ್ತರಿ ಹಾಕಲು ಬಿಎಂಆರ್‌ಸಿಎಲ್ ಚಿಂತನೆ ನಡೆಸುತ್ತಿದೆ.

ಪ್ರಸ್ತುತ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಪ್ರಯಾಣ ದರದಲ್ಲಿ ಶೇ. 15ರಷ್ಟು ರಿಯಾಯಿತಿ ನೀಡಲಾಗಿದೆ. ಈ ಪ್ರಮಾಣವನ್ನು ಕೇವಲ ಶೇ. 5ಕ್ಕೆ ಸೀಮಿತಗೊಳಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಇದು ಲಕ್ಷಾಂತರ ಪ್ರಯಾಣಿಕರಿಗೆ ಹೊರೆ ಬೀಳಲಿದೆ.

ನಿತ್ಯ ಸುಮಾರು 4.20 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಈ ಪೈಕಿ ಶೇ. 68ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಹೊಂದಿದ್ದಾರೆ. ಒಂದು ವೇಳೆ ರಿಯಾಯಿತಿಗೆ ಶೇ. 10ರಷ್ಟು ಕತ್ತರಿ ಹಾಕಿದರೆ, ಕಾರ್ಯಾಚರಣೆಯಿಂದ ಪ್ರತಿ ದಿನ 7ರಿಂದ 8 ಲಕ್ಷ ರೂ. ಹೆಚ್ಚುವರಿ ಆದಾಯ ಹರಿದುಬರಲಿದೆ. ಮಾಸಿಕ ಇದು 2 ಕೋಟಿ ರೂ. ಆಗಲಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ.

ಪ್ರಸ್ತುತ ರಿಯಾಯಿತಿ ಕತ್ತರಿಗೆ ಸಕಾಲ ಎಂಬ ಅಭಿಪ್ರಾಯ ನಿಗಮದ ಉನ್ನತ ಮಟ್ಟದ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗಿದೆ. ಇದಕ್ಕೆ ಮುನ್ನುಡಿಯಾಗಿ ಈಚೆಗೆ ಕನಿಷ್ಠ 50 ರೂ. ಠೇವಣಿ ಇಡುವುದನ್ನು ಕಡ್ಡಾಯಗೊಳಿಸುವ ಪ್ರಯೋಗ ಮಾಡಲಾಯಿತು. ಇದರಿಂದ ಕೋಟ್ಯಂತರ ರೂ. ಹರಿದುಬಂದಿರುವುದನ್ನು ಇಲ್ಲಿ ಗಮನಿಸಬಹುದು.

50 ರೂ. ದಂಡ: ಟಿಕೆಟ್ ಪಡೆದು ಪ್ರಯಾಣಿಸುವವರು ನಿಗದಿತ ನಿಲ್ದಾಣದ ಬದಲಿಗೆ ಮುಂದಿನ ನಿಲ್ದಾಣಕ್ಕೆ ಇಳಿದರೆ, ಅಂತಹವರಿಗೆ 50 ರೂ. ದಂಡ ವಿಧಿಸಲೂ ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ಆದರೆ, ಅದಿನ್ನೂ ಅಂತಿಮವಾಗಿಲ್ಲ ಎಂದು ಅಧಿಕಾರಿಗು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News