ಮರಕ್ಕೆ ವಿಷವುಣಿಸಿದ ವೈದ್ಯ: ನಿವಾಸಿಗಳ ಸಂಘ ಆರೋಪ

Update: 2019-11-06 18:18 GMT

ಬೆಂಗಳೂರು, ನ.6: ನೂತನವಾಗಿ ನಿರ್ಮಿಸಿರುವ ಮನೆಯ ಎದುರು ಅಡ್ಡವಾಗಿದ್ದ ಮರವೊಂದಕ್ಕೆ ವೈದ್ಯರೊಬ್ಬರು ವಿಷವುಣಿಸಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ಇಲ್ಲಿನ ದಕ್ಷಿಣ ಬೆಂಗಳೂರಿನ ರಾಜರಾಜೇಶ್ವರಿ ನಗರ ಮೂರನೇ ಹಂತ, ಬಿಇಎಂಎಲ್ ಲೇಔಟ್‌ನಲ್ಲಿರುವ ಪಂಚಶೀಲ ಬ್ಲಾಕ್ ನಿವಾಸಿ ಡಾ. ನರೇಂದ್ರ ನಿಖಿತಾ ಎಂಬವರು ಮರದ ಕಾಂಡಕ್ಕೆ ಪಾದರಸ ಇಂಜೆಕ್ಷನ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪಂಚಶೀಲ ಬ್ಲಾಕ್ ನಿವಾಸಿಗಳ ಸಂಘದಿಂದ ಡಾ.ನರೇಂದ್ರರನ್ನು ಪ್ರಶ್ನಿಸಿದಾಗ ನಮ್ಮ ಮನೆ ಮುಂದಿರುವ 15 ವರ್ಷದ ಮರವನ್ನು ಕಡಿಯಲು ಬಿಬಿಎಂಪಿ ಅನುಮತಿಗಾಗಿ ಮನವಿ ಮಾಡಿದ್ದೇನೆ ಎಂದು ಹೇಳಿದ್ದರು. ಆದರೆ, ರಾಜರಾಜೇಶ್ವರಿ ನಗರದ ಬಿಬಿಎಂಪಿ ಮರಗಳನ್ನು ನೋಡಿಕೊಳ್ಳುವ ಅಧಿಕಾರಿ ಭಾನು ಪ್ರಕಾಶ್‌ರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅದಕ್ಕಾಗಿ ನರೇಂದ್ರ ಅವರು ಮರಕ್ಕೆ ಪಾದರಸ ಇಂಜೆಕ್ಷನ್ ನೀಡಿದ್ದಾರೆ ಎಂದು ಬ್ಲಾಕ್ ನಿವಾಸಿಗಳ ಸಂಘ ಆಪಾದಿಸಿದೆ.

ಮನೆಗೆ ಅಡ್ಡವಾಗಿದೆ ಎಂಬ ನೆಪವನ್ನಿಟ್ಟುಕೊಂಡು ಮರದ ಕಾಂಡದಲ್ಲಿ ರಂಧ್ರಗಳನ್ನು ಕೊರೆದು, ಅದರ ಮೂಲಕ ವಿಷವನ್ನು ಮರಕ್ಕೆ ಉಣಿಸಿದ್ದಾರೆ ಎಂದು ಪಂಚಶೀಲ ಬ್ಲಾಕ್ ನಿವಾಸಿಗಳ ಸಂಘದ ಜಂಟಿ ಕಾರ್ಯದರ್ಶಿ ರಾಜಕುಮಾರ್ ದೂರಿದ್ದಾರೆ.

ವರ್ಷಗಳ ಹಿಂದೆ ಡಾ. ನರೇಂದ್ರ ಅವರು ಮನೆ ನಿರ್ಮಿಸುವಾಗ ಎರಡು ಮರಗಳನ್ನು ಕಡಿದಿದ್ದರು. ಇಲ್ಲಿಯವರೆಗೆ ಅವರು ಶಾಂತಿ ಮಾರ್ಗ್‌ನಲ್ಲಿದ್ದ 5 ಮರಗಳನ್ನು ಕಡಿದಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಮರಗಳು ವೈದ್ಯರ ಕುಟುಂಬದವರಿಗೆ ಅಸ್ತಮಾ ಉಂಟು ಮಾಡುತ್ತಿದ್ದರಿಂದ ಆ ಮರಗಳನ್ನು ನಾಶ ಮಾಡಬೇಕೆಂದು ಡಾ.ನರೇಂದ್ರ ಹೇಳಿದ್ದರು ಎಂದು ರಾಜಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಸದ್ಯಕ್ಕೆ ಡಾ.ನರೇಂದ್ರ ವಿರುದ್ಧ ಸಂಘವು ಪಾಲಿಕೆಯ ಅರಣ್ಯ ವಿಭಾಗಕ್ಕೆ ದೂರು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News