ಅಂಬೇಡ್ಕರ್ ತತ್ವ-ಸಿದ್ಧಾಂತ ಅಳವಡಿಸಿಕೊಳ್ಳಿ: ಮೇಯರ್ ಗೌತಮ್ ಕುಮಾರ್ ಜೈನ್

Update: 2019-11-06 18:22 GMT

ಬೆಂಗಳೂರು, ನ.6: ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದು ಮೇಯರ್ ಗೌತಮ್ ಕುಮಾರ್ ಜೈನ್ ಹೇಳಿದರು.

ಬಿಬಿಎಂಪಿ ಕೇಂದ್ರ ಕಚೇರಿಯ ಡಾ. ರಾಜ್‌ಕುಮಾರ್ ಗಾಜಿನ ಮನೆ ಸಭಾಂಗಣದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪೌರ ಕಾರ್ಮಿಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರಿಲ್ಲದೆ ಬೆಂಗಳೂರು ನಗರ ಸ್ವಚ್ಛವಾಗಿರುವುದಿಲ್ಲ. ನಗರದ ಅಭಿವೃದ್ಧಿಯಲ್ಲಿ ಪೌರ ಕಾರ್ಮಿಕರ ಸೇವೆ ಅಪಾರ ಎಂದರು.

ಉಪಮೇಯರ್ ರಾಮ ಮೋಹನ್ ರಾಜ್ ಮಾತನಾಡಿ, ಅಂಬೇಡ್ಕರ್ ಅವರನ್ನು ದೇವರು ಎಂದು ಕರೆದರೂ ತಪ್ಪಾಗಲಾರದು. ಸಂವಿಧಾನ ರೂಪಿಸಿದ್ದರಿಂದಲೇ ಹಿಂದುಳಿದ ವರ್ಗದವರು ಮೇಲ್ಮಟ್ಟಕ್ಕೆ ಬರಲು ಸಾಧ್ಯವಾಯಿತು ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಮಾತನಾಡಿ, ಪೌರ ಕಾರ್ಮಿಕರ ಬಹುದಿನಗಳ ಬೇಡಿಕೆಯಾದ ಎರಡು ಸಾವಿರ ರೂ. ಬೋನಸ್ ನೀಡುವ ಕುರಿತಂತೆ, ಮೇಯರ್ ಅವರೊಂದಿಗೆ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂವಿಧಾನದ ಪ್ರಕಾರ ವಿತರಿಸುತ್ತಿರುವ ಸವಲತ್ತುಗಳನ್ನು ನಿಲ್ಲಿಸಬೇಕೆಂದು ಕೆಲವರು ಆಗ್ರಹಪಡಿಸಿದ್ದಾರೆ. ಇದಕ್ಕೆಲ್ಲಾ ಸೊಪ್ಪುಹಾಕಬಾರದು. ಸವಲತ್ತುಗಳನ್ನು ನಿಲ್ಲಿಸುವಂತೆ ಪ್ರಶ್ನೆ ಮಾಡುವವರನ್ನು ನೀವು ಯಾರು ಎಂದು ಕೇಳಬೇಕು. ನಮಗೆ ಸವಲತ್ತುಗಳು ಸಾಕು ಎನ್ನುವವರೆಗೂ ತೆಗೆದುಕೊಳ್ಳುತ್ತೇವೆ ಎಂದು ಅವರಿಗೆ ಧೈರ್ಯದಿಂದ ಉತ್ತರ ನೀಡಬೇಕು ಎಂದು ತಿಳಿಸಿದರು.

ಪ್ರತಿಪಕ್ಷದ ನಾಯಕ ಅಬ್ದುಲ್ ವಾಜಿದ್ ಮಾತನಾಡಿ, ಕಳೆದ ನಾಲ್ಕು ವರ್ಷಗಳ ಕಾಂಗ್ರೆಸ್, ಜೆಡಿಎಸ್ ಆಡಳಿತದಲ್ಲಿ ಪೌರ ಕಾರ್ಮಿಕರಿಗೆ ನೇರವಾಗಿ ವೇತನ ಪಾವತಿ ಜಾರಿಗೆ ತರಲಾಯಿತು. ಇದನ್ನು ಪೌರಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಪಾಲಿಕೆ ಸದಸ್ಯರಾದ ವಸಂತ್ ಕುಮಾರ್, ವೇಲು ನಾಯಕ್ ಸೇರಿದಂತೆ, ಬಿಬಿಎಂಪಿ ಪೌರ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News