ದಿಲ್ಲಿ ಟ್ವೆಂಟಿ-20 ಪಂದ್ಯದ ವೇಳೆ ಇಬ್ಬರು ಬಾಂಗ್ಲಾದೇಶದ ಆಟಗಾರರು ಅಸ್ವಸ್ಥ

Update: 2019-11-07 12:09 GMT

ಹೊಸದಿಲ್ಲಿ, ನ.6: ಭಾರತ ಹಾಗೂ ಬಾಂಗ್ಲಾದೇಶದ ನಡುವೆ ರವಿವಾರ ಹೊಸದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲ ಟ್ವೆಂಟಿ-20 ಪಂದ್ಯದ ವೇಳೆ ವಿಪರೀತ ವಾಯು ಮಾಲಿನ್ಯದಿಂದಾಗಿ ಬಾಂಗ್ಲಾದೇಶದ ಇಬ್ಬರು ಆಟಗಾರರು ಮೈದಾನದಲ್ಲಿ ಅಸ್ವಸ್ಥರಾಗಿದ್ದರು ಎಂದು ಇನ್‌ಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ಮಾಡಿದೆ. ವರದಿಯ ಪ್ರಕಾರ ಅಗ್ರ ಕ್ರಮಾಂಕದ ಕ್ರಿಕೆಟಿಗ ಸೌಮ್ಯ ಸರ್ಕಾರ್ ಹಾಗೂ ಇನ್ನೋರ್ವ ಆಟಗಾರ ರವಿವಾರ ಪಂದ್ಯದ ವೇಳೆ ಅಸ್ವಸ್ಥರಾಗಿದ್ದಾರೆ.

‘‘ಕಠಿಣ ಪರಿಸ್ಥಿತಿ’’ಯಲ್ಲೂ ಪಂದ್ಯವನ್ನು ಆಡಿದ ಉಭಯ ತಂಡಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಕೃತಜ್ಞತೆ ಸಲ್ಲಿಸಿದ್ದರು.

ಮೊದಲ ಟಿ-20 ಪಂದ್ಯಕ್ಕಿಂತ ಮೊದಲು ಬಾಂಗ್ಲಾದೇಶದ ಕ್ರಿಕೆಟಿಗರು ಮುಖಕ್ಕೆ ಮಾಸ್ಕ್ ಧರಿಸಿ ಅಭ್ಯಾಸ ನಡೆಸಿದ್ದು ಭಾರೀ ಸುದ್ದಿಯಾಗಿತ್ತು.

 ‘‘ಹಿಮದಿಂದ ಆವೃತ್ತವಾಗಿದ್ದ ದಿಲ್ಲಿಯ ವಾತಾವರಣ ಎರಡೂ ತಂಡಗಳಿಗೆ ಪೂರಕವಾಗಿರಲಿಲ್ಲ. ಕೆಲವರಿಗೆ ಕಣ್ಣಿನ ಉರಿ ಕಾಣಿಸಿಕೊಂಡರೆ ಇನ್ನೂ ಕೆಲವರಿಗೆ ಗಂಟಲು ನೋವು ಕಾಣಿಸಿಕೊಂಡಿತ್ತು. ಈ ತನಕ ಯಾರೂ ಅಸ್ವಸ್ಥರಾಗಿಲ್ಲ’’ಎಂದು ಪಂದ್ಯಕ್ಕಿಂತ ಮೊದಲು ಬಾಂಗ್ಲಾದೇಶ ಕೋಚ್ ರಸ್ಸೆಲ್ ಡೊಮಿಂಗೊ ಹೇಳಿದ್ದಾರೆ.

 ಮೊದಲ ಪಂದ್ಯದ ದಿನವಾದ ರವಿವಾರ ದಿಲ್ಲಿಯಲ್ಲಿ ದಟ್ಟ ಮಂಜು ಆವರಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಪಂದ್ಯವನ್ನು ರದ್ದುಪಡಿಸಬೇಕೆಂಬ ಆಗ್ರಹ ಕೇಳಿಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News