ಮುಖ್ಯಮಂತ್ರಿ ಹುದ್ದೆ ನೀಡಲು ಸಿದ್ಧರಿದ್ದರೆ ಮಾತ್ರ ಕರೆ ಮಾಡಿ: ಬಿಜೆಪಿಗೆ ಉದ್ಧವ್ ಠಾಕ್ರೆ

Update: 2019-11-07 14:56 GMT

ಮುಂಬೈ, ನ. 7: ತಾನು ಬಿಜೆಪಿಯೊಂದಿಗೆ ಮೈತ್ರಿ ಮುರಿಯುವ ಉದ್ದೇಶ ಹೊಂದಿಲ್ಲ. ಆದರೆ, ಲೋಕಸಭೆ ಚುನಾವಣೆಯ ಸಂದರ್ಭ ನೀಡಿದ ಅಧಿಕಾರವನ್ನು ಸಮಾನವಾಗಿ ಹಂಚುವ ಭರವಸೆಯನ್ನು ಬಿಜೆಪಿ ಈಡೇರಿಸುವುದನ್ನು ನಿರೀಕ್ಷಿಸುತ್ತೇನೆ ಎಂದು ಶಿವಸೇನೆಯ ವರಿಷ್ಠ ಉದ್ಧವ್ ಠಾಕ್ರೆ ಗುರುವಾರ ಹೇಳಿದ್ದಾರೆ.

‘‘ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಳ್ಳಲು ನಾನು ಬಯಸುತ್ತಿಲ್ಲ. ಆದರೆ, ಲೋಕಸಭೆ ಚುನಾವಣೆ ಸಂದರ್ಭ ನಿರ್ಧರಿಸುವುದನ್ನು ಬಿಜೆಪಿ ಅನುಷ್ಠಾನಕ್ಕೆ ತರಬೇಕೆಂದು ನಾನು ಬಯಸುತ್ತೇನೆ’’ ಎಂದು ಅವರು ಮುಂಬೈಯಲ್ಲಿ ಗುರುವಾರ ಶಿವಸೇನೆ ಶಾಸಕರೊಂದಿಗೆ ನಡೆಸಿದ ಸಭೆಯಲ್ಲಿ ಹೇಳಿದರು.

ಲೋಕಸಭಾ ಚುನಾವಣೆ ಸಂದರ್ಭ ನೀಡಿದ ಭರವಸೆಗೆ ಒಪ್ಪುವುದಾದರೆ ನಾನು ಬಿಜೆಪಿಯ ಉನ್ನತ ನಾಯಕರೊಂದಿಗೆ ಚರ್ಚೆ ನಡೆಸಲು ಸಿದ್ಧನಿದ್ದೇನೆ. ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ನೀಡಲು ಬಯಸಿದರೆ ಅವರು ನಮಗೆ ಕರೆ ಮಾಡಬಹುದು. ಇಲ್ಲದಿದ್ದರೆ ಕರೆ ಮಾಡುವುದು ಬೇಡ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

‘‘ನಮ್ಮ ಪಕ್ಷಕ್ಕೆ ಸ್ವಾಭಿಮಾನದಿಂದ ಹುಟ್ಟಿಕೊಂಡಿದೆ. ನಾವು ಬಿಜೆಪಿಯನ್ನು ನಿರ್ಲಕ್ಷಿಸಲು ಬಯಸುವುದಿಲ್ಲ. ಬಿಜೆಪಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸಾಧ್ಯವಾಗದೇ ಇದ್ದರೆ, ಮತ್ತೆ ಚರ್ಚಿಸುವುದರಲ್ಲಿ ಯಾವ ಅರ್ಥ ಇದೆ ?’’ ಎಂದು ಅವರು ಪ್ರಶ್ನಿಸಿದರು.

 ಸಭೆಯಲ್ಲಿ ಪಾಲ್ಗೊಂಡಿದ್ದ ಶಿವಸೇನೆ ಶಾಸಕ ಅಬ್ದುಲ್ ಸತ್ತಾರ್, ‘‘ಸದ್ಯದ ಸನ್ನಿವೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವುದನ್ನು ನಾವು ವರಿಷ್ಠರಿಗೆ ಬಿಟ್ಟು ಬಿಟ್ಟಿದ್ದೇವೆ. ಅವರು ಯಾವುದೇ ನಿರ್ಧಾರ ತೆಗೆದು ಕೊಂಡರೂ ನಾವು ಬೆಂಬಲಿಸಲಿದ್ದೇವೆ’’ ಎಂದರು.

 ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಸೇನೆ ನಾಯಕ ಸಂಜಯ್ ರಾವತ್, ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು.

ಶಿವಸೇನೆಯ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಎಲ್ಲ ಶಾಸಕರು ಅವರ ನಿಲುವನ್ನು ಬೆಂಬಲಿಸಿದ್ದಾರೆ. ಮಹಾರಾಷ್ಟ್ರದ ಹಿತಾಸಕ್ತಿಗಾಗಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಸ್ವೀಕಾರಾರ್ಹ ಎಂದು ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News