ರಾಜ್ಯದ ಸಮಗ್ರ ಅಭಿವೃದ್ಧಿಗೆ ಬದ್ಧ: ಸಿಎಂ ಯಡಿಯೂರಪ್ಪ

Update: 2019-11-07 18:02 GMT

ಹಾವೇರಿ, ನ.7: ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಯೋಜನೆ ರೂಪಿಸಿ, ನೀರಾವರಿಗೆ ಆದ್ಯತೆ ನೀಡಿ ರೈತರು ಬೆಳೆದಿರುವ ಬೆಳೆಗಳಿಗೆ ಬೆಂಬಲ ಬೆಲೆ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಗುರುವಾರ ಹಾವೇರಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು, ನಗರದ ಕೋಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿನ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸರಕಾರ ನೂರು ದಿನ ಪೂರೈಸಿದೆ. ಎರಡು ತಿಂಗಳ ಕಾಲ ನೆರೆ ಪರಿಹಾರದ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸರಕಾರ ಅಧಿಕಾರಕ್ಕೆ ಬಂದ ಸಮಯದಲ್ಲಿ ರೈತರಿಗೆ ನಾಲ್ಕು ಸಾವಿರ ಹಣ ನೀಡುವುದಾಗಿ ಘೋಷಿಸಲಾಗಿತ್ತು. ಅದರಂತೆ ಈಗಾಗಲೇ ಎರಡು ಸಾವಿರ ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿಯವರು ಆರು ಸಾವಿರ ರೂ. ಘೋಷಿಸಿದ್ದಾರೆ. ರಾಜ್ಯ ಸರಕಾರದಿಂದ ನಾಲ್ಕು ಸಾವಿರ ರೂ.ಗಳನ್ನು ಸೇರಿ ಒಟ್ಟು 10 ಸಾವಿರ ರೂ.ಗಳನ್ನು ರೈತರಿಗೆ ನೀಡಲಾಗುತ್ತಿದೆ. ದೇಶದಲ್ಲೇ ಯಾವ ರಾಜ್ಯದಲ್ಲಿಯೂ ನೀಡದಷ್ಟು ಪರಿಹಾರ ರೈತರಿಗೆ ನೀಡಲಾಗಿದೆ. ರಾಜ್ಯದಲ್ಲಿ ರೈತಪರ ಸರಕಾರವಿದ್ದು ಜನರು ಚಿಂತಿಸಬೇಕಾಗಿಲ್ಲ ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ಹಾವೇರಿ ಜಿಲ್ಲೆಯ ಪರಿಹಾರ ಕಾರ್ಯಗಳು ಹಾಗೂ ಅಭಿವೃದ್ಧಿ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.

ಹಿರೇಕೆರೂರು ತಾಲೂಕು ಅಭಿವೃದ್ಧಿಗೆ ಹೆಚ್ಚಿನ ಅನುದಾನ: ಹಿರೇಕೆರೂರು ಕ್ರೀಡಾಂಗಣದಲ್ಲಿ ಹಿರೇಕೆರೂರು ಹಾಗೂ ರೆಟ್ಟಿಹಳ್ಳಿ ತಾಲೂಕಿನಲ್ಲಿ ರಾಜ್ಯ ಸರಕಾರದಿಂದ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ, ಹಿರೇಕೆರೂರು ತಾಲೂಕಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.

ಮುಂದಿನ 100 ದಿನಗಳಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ. ಹಿರೇಕೆರೂರು ತಾಲೂಕಿಗೆ ಯಾವುದೇ ತಾಲೂಕಿಗೆ ನೀಡದಷ್ಟು ಅನುದಾನ ನೀಡಿದ್ದೇನೆ. ಮುಂದಿನ ಬಜೆಟ್‌ನಲ್ಲಿ ತಾಲೂಕಿನ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಯಡಿಯೂರಪ್ಪ ಹೇಳಿದರು.
ಲೋಕೋಪಯೋಗಿ ಇಲಾಖೆ ವತಿಯಿಂದ 85.19ಕೋಟಿ ರೂ.ವೆಚ್ಚದಲ್ಲಿ 20 ಕಾಮಗಾರಿ, ಜಲಸಂಪನ್ಮೂಲ ಹಾಗೂ ನೀರಾವರಿ ನಿಗಮದಿಂದ 25 ಕೋಟಿ ರೂ.ವೆಚ್ಚದಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಕಟ್ ಕವರ್(ಆರ್ಚ್ ಟೈಪ್) ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಪಂಚಾಯತ್ ರಾಜ್ಯ ಇಂಜಿನಿಯರಿಂಗ್ ಇಲಾಖೆಯಿಂದ 9.45 ಕೋಟಿ ರೂ.ವೆಚ್ಚದ 13 ಕಾಮಗಾರಿಗಳು, ಸಮಾಜಕಲ್ಯಾಣ ಇಲಾಖೆಯ ಪರಿಶಿಷ್ಟ ವರ್ಗಗಳ ಇಲಾಖೆಯಿಂದ 1.56 ಕೋಟಿ ರೂ.ವೆಚ್ಚದಲ್ಲಿ ಒಂದು ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಈ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಸಿ.ಎಂ.ಉದಾಸಿ, ಸಂಸದ ಶಿವಕುಮಾರ್ ಉದಾಸಿ, ಜಿಲ್ಲಾಧಿಕಾರಿ ಕೃಷ್ಣಾ ಬಾಜಪೇಯಿ, ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜ ಸೇರಿದಂತೆ ಮತ್ತಿತ್ತರರು ಉಪಸ್ಥಿತಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News