ದಲಿತ, ಅಲ್ಪಸಂಖ್ಯಾತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

Update: 2019-11-07 18:08 GMT

ಬೆಂಗಳೂರು, ನ.7: ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಿರಂತರವಾಗಿರುವ ಹೆಚ್ಚುತ್ತಿರುವ ಹಲ್ಲೆಗಳನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ಪುರಭವನದ ಮುಂಭಾಗ ಜಯಕರ್ನಾಟಕ ಸಂಘಟನೆಯ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಪ್ರತಿದಿನ ದಲಿತ ಹಾಗೂ ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಆದರೂ ಪೊಲೀಸ್ ಇಲಾಖೆ ಹಾಗೂ ಸರಕಾರ ಈ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದಲಿತರ ಮೇಲೆ ಹೆಚ್ಚಿನ ಹಲ್ಲೆಗಳು ನಡೆಯುತ್ತಿವೆ. ಹೀಗಾಗಿ ದಲಿತರ ಅಭಿವೃದ್ಧಿ ಸಂಬಂಧ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು, ಭೂಮಿ ಮಂಜೂರಾತಿ ಮಾಡಬೇಕು. ರಾಜ್ಯ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿರುವ ಪಿಟಿಸಿಎಲ್ ಪ್ರಕರಣಗಳನ್ನು ಆರು ತಿಂಗಳೊಳಗಾಗಿ ಬಗೆ ಹರಿಸಬೇಕೆಂದು ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಪ್ಪ ಒತ್ತಾಯಿಸಿದ್ದಾರೆ.

ಎಸ್‌ಸಿಪಿ, ಟಿಎಸ್‌ಪಿ ಅಡಿಯದಲ್ಲಿ ದಲಿತ ಸಮುದಾಯದ ಅಭಿವೃದ್ದಿಗಾಗಿ ಮೀಸಲಾಗಿರುವ ಅನುದಾನವು ದುರ್ಬಳಕೆ ಆಗುತ್ತಿದೆ. ಹಾಗೂ ಅಧಿಕಾರಿಗಳು ಮೀಸಲಾಗಿರುವ ಹಣವನ್ನು ದಲಿತ ಸಮುದಾಯದಕ್ಕೆ ವಿನಿಯೋಗಿಸದೆ, ಹಾಗೆಯೇ ಉಳಿಸಿಕೊಳ್ಳುತ್ತಿರುವುದು ಅಸ್ಪಶ್ಯತೆಯ ಮತ್ತೊಂದು ರೂಪವಾಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು.

ದಲಿತ ಸಮುದಾಯದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಸೇರಿದಂತೆ ದೈಹಿಕ ಹಲ್ಲೆ, ಹತ್ಯೆಗಳು ನಡೆಯುತ್ತಿವೆ. ಇಂತಹ ಜಾತಿ ಹತ್ಯೆಗಳನ್ನು ತಡೆಯುವಲ್ಲಿ ರಾಜ್ಯ ಸರಕಾರವಾಗಲಿ, ಪೊಲೀಸ್ ಇಲಾಖೆಯಾಗಲಿ ಯಾವುದೇ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವ ಬಗ್ಗೆ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಈ ಬಗ್ಗೆಯೂ ಸರಕಾರ ಗಂಭೀರವಾಗಿ ಅವಲೋಕಿಸಬೇಕಿದೆ ಎಂದು ಅವರು ಹೇಳಿದರು.

ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಹಾಸ್ಟೆಲ್‌ಗಳನ್ನು ನೋಡಿದರೆ, ಪ್ರಾಣಿಗಳು ವಾಸ ಮಾಡದಂತಹ ಸ್ಥಿತಿಯಲ್ಲಿವೆ. ಈ ಬಗ್ಗೆ ಹಲವು ಬಾರಿ ದೂರು ಕೊಟ್ಟಿದ್ದರು ಯಾರು ಗಮನ ವಹಿಸುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಸಚಿವರು, ಅಧಿಕಾರಿಗಳು ಇತ್ತ ಗಮನ ವಹಿಸಬೇಕಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ರಾಜ್ಯ ದಲಿತ ಮತ್ತು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷೆ ಡಿ.ನಾಗರತ್ನ, ಕಾರ್ಯಾಧ್ಯಕ್ಷ ಮುಹಮ್ಮದ್ ರಫೀಕ್, ಪ್ರಧಾನ ಕಾರ್ಯದರ್ಶಿ ಗೋಪಿ, ಆರ್‌ಎಂಎನ್ ಅಧ್ಯಕ್ಷ ಮಂಜುನಾಥ್ ಸೇರಿದಂತೆ ನೂರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News